
ತುಮಕೂರು: ಗಣೇಶ ಚತುರ್ಥಿ ಹಬ್ಬ ಎಂದರೆ ಸಂಭ್ರಮ, ಸಡಗರ, ಭಕ್ತಿ. ಆದರೆ ಈ ಸಂಭ್ರಮದ ಜೊತೆಗೆ ಪರಿಸರ ಸಂರಕ್ಷಣೆಯ ಕಾಳಜಿಯನ್ನೂ ಬೆಳೆಸಬಹುದು ಎಂಬುದನ್ನು ತುಮಕೂರಿನ ಪುಟಾಣಿಗಳು ತಮ್ಮ ಕೈಚಳಕದ ಮೂಲಕ ಸಾರಿದರು.
ನಗರದ ಪ್ರೆಸ್ ಕ್ಲಬ್ ಆವರಣದಲ್ಲಿ ಆಲದ ಮರದ ನೆರಳಿನಲ್ಲಿ ಮಕ್ಕಳು ಜೇಡಿ ಮಣ್ಣನ್ನು ಕೈಯಲ್ಲಿ ಹಿಡಿದುಕೊಂಡು ಗಣೇಶ ಮೂರ್ತಿಗಳಿಗೆ ರೂಪ ನೀಡುತ್ತಿದ್ದ ದೃಶ್ಯ ಎಲ್ಲರ ಗಮನ ಸೆಳೆಯಿತು. ಪುಟ್ಟ ಕೈಗಳಲ್ಲಿ ಅರಳಿದ ಗಣೇಶನ ವಿವಿಧ ರೂಪಗಳು ಮಕ್ಕಳ ಸೃಜನಶೀಲತೆಗೆ ಸಾಕ್ಷಿಯಾದವು.
ಪ್ರೆಸ್ ಕ್ಲಬ್ ತುಮಕೂರು ಹಾಗೂ ವರ್ಣೋದಯ ಆರ್ಟ್ ಗ್ರೂಪ್ ವತಿಯಿಂದ ಆಯೋಜಿಸಲಾಗಿದ್ದ **ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕಾ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು. ತಮ್ಮ ಕಲ್ಪನೆಗೆ ತಕ್ಕಂತೆ ಜೇಡಿ ಮಣ್ಣಿನಿಂದ ಬಗೆಬಗೆಯ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಮಕ್ಕಳಿಗೆ ಸಾಥ್ ನೀಡಿದ ಪೋಷಕರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪುಟಾಣಿಗಳ ಉತ್ಸಾಹವನ್ನು ಹೆಚ್ಚಿಸಿದರು. ಮಣ್ಣನ್ನು ಹದಗೊಳಿಸಿ, ಅದಕ್ಕೆ ಆಕಾರ ನೀಡಿ, ಗಣೇಶನ ವಿವಿಧ ಭಂಗಿಗಳನ್ನು ಮೂಡಿಸುವಲ್ಲಿ ಮಕ್ಕಳು ತಲ್ಲೀನರಾಗಿದ್ದರು. ಸ್ಪರ್ಧೆಯ ವಾತಾವರಣದಲ್ಲಿ ಹಬ್ಬದ ಸಂಭ್ರಮವೂ ಮೇಳೈಸಿತ್ತು.
ಕೇವಲ ಮೂರ್ತಿ ತಯಾರಿಸುವ ಸ್ಪರ್ಧೆಯಾಗಿರದೆ, ಮಕ್ಕಳಲ್ಲಿ ಕಲಾ ಕೌಶಲ್ಯ ಬೆಳೆಸುವುದು, ಸೃಜನಶೀಲತೆಯನ್ನು ಉತ್ತೇಜಿಸುವುದು ಹಾಗೂ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆಯ ಕುರಿತು ಅರಿವು ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ಪ್ರತಿವರ್ಷ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಪಿಒಪಿ ಸೇರಿದಂತೆ ಪರಿಸರಕ್ಕೆ ಹಾನಿಕಾರಕ ವಸ್ತುಗಳಿಂದ ತಯಾರಿಸಿದ ಮೂರ್ತಿಗಳ ಬದಲಿಗೆ ನೈಸರ್ಗಿಕ ಜೇಡಿ ಮಣ್ಣಿನ ಗಣೇಶ ಮೂರ್ತಿಗಳನ್ನು ಬಳಸುವ ಅಗತ್ಯವಿದೆ ಎಂಬ ಸಂದೇಶವೂ ಕಾರ್ಯಕ್ರಮದ ಮೂಲಕ ಮೂಡಿಬಂತು.
ಹಬ್ಬದ ಸಂಭ್ರಮದ ನಡುವೆಯೇ ಪರಿಸರದ ಕಾಳಜಿಯನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಪುಟ್ಟ ಕೈಗಳಿಂದ ರೂಪುಗೊಂಡ ಮಣ್ಣಿನ ಗಣೇಶ ಮೂರ್ತಿಗಳು, ಹಬ್ಬವೂ ಇರಲಿ. ಪರಿಸರವೂ ಉಳಿಯಲಿ ಎಂಬ ಸಂದೇಶವನ್ನು ಸಾರಿದವು.
ವರ್ಣೋದಯ ಆರ್ಟ್ ಗ್ರೂಪ್ ಅಧ್ಯಕ್ಷ ಕಿಶೋರ್ ಕುಮಾರ್ ಮಾತನಾಡಿ, ಮಕ್ಕಳಲ್ಲಿ ಕಲೆಯ ಮೇಲಿನ ಆಸಕ್ತಿ ಬೆಳೆಸುವುದರ ಜೊತೆಗೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಗಣೇಶ ಚತುರ್ಥಿಯ ಸಂಭ್ರಮಕ್ಕೆ ಪರಿಸರ ಸ್ನೇಹಿ ಸ್ಪರ್ಶ ನೀಡಿದ ಪುಟಾಣಿಗಳ ಈ ಪ್ರಯತ್ನ, ಹಬ್ಬದ ಆಚರಣೆಯಲ್ಲೂ ಪರಿಸರ ಕಾಳಜಿಗೆ ಆದ್ಯತೆ ನೀಡಬೇಕೆಂಬುದನ್ನು ಮತ್ತೊಮ್ಮೆ ನೆನಪಿಸಿತು



