ತುಮಕೂರು: ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ ೧ ರಿಂದ ೭ನೇ ತರಗತಿಯವರೆಗೆ ಓದಿದ ನಾನು, ಇಂದು ಜಿಲ್ಲೆಯ ಪ್ರಧಾನ ನ್ಯಾಯಾಧೀಶನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಸರ್ಕಾರಿ ಶಾಲೆಯಲ್ಲಿ ಕಲಿತದ್ದು ನನ್ನ ಪಾಲಿಗೆ ಎಂದಿಗೂ ಹೆಮ್ಮೆಯ ವಿಷಯ ಎಂದು ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಬಿ. ಜಯಂತ ಕುಮಾರ್ ಹೇಳಿದರು.
ನಗರದ ಬಿ.ಹೆಚ್. ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮ ಹಾಗೂ ಪೋಕ್ಸೊ ಮತ್ತು ಬಾಲನ್ಯಾಯ ಕಾಯ್ದೆ ಕುರಿತ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಬಾಲ್ಯದ ಶಾಲಾ ದಿನಗಳನ್ನು ಸ್ಮರಿಸಿದ ನ್ಯಾಯಾಧೀಶರು, “ನಮ್ಮ ಕಾಲದಲ್ಲಿ ಶಾಲೆ ಮತ್ತು ಶಿಕ್ಷಕರ ಮೇಲೆ ಅಪಾರ ಗೌರವವಿತ್ತು. ಗಣಿತ ವಿಷಯದಲ್ಲಿ ಸಣ್ಣ ತಪುö್ಪ ಮಾಡಿದರೂ ಶಿಕ್ಷಕರು ಹತ್ತಿರ ಕರೆದು ಪ್ರೀತಿಯಿಂದ ತಿದ್ದಿ ಪ್ರೋತ್ಸಾಹಿಸುತ್ತಿದ್ದರು. ಅಂತಹ ಶಿಕ್ಷಕರ ಮಾರ್ಗದರ್ಶನವೇ ನಾನು ಇಂದು ನ್ಯಾಯಾಧೀಶನಾಗಲು ಮೂಲ ಕಾರಣ,” ಎಂದರು.
ಪರಿಸರ ನಾಶದ ದುಷ್ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, “ಗಿಡ-ಮರಗಳ ಮಾರಣಹೋಮದಿಂದಾಗಿ ಮಳೆ ಕಡಿಮೆಯಾಗಿ ಕುಡಿಯುವ ನೀರಿಗೂ ಅಭಾವ ಎದುರಾಗಿದೆ. ಅಷ್ಟಾಂಗ ಯೋಗದಲ್ಲಿ ಪ್ರಾಣಾಯಾಮಕ್ಕೆ ಮಹತ್ವದ ಸ್ಥಾನವಿದ್ದು, ಉಸಿರಾಟವೇ ನಮ್ಮ ಪ್ರಾಣ. ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ನೆಟ್ಟಿರುವ ಸಸಿಗಳನ್ನು ದೈನಂದಿನ ಪಾಲನೆ ಮಾಡುವ ಮೂಲಕ ಬೆಳೆಸಬೇಕು,” ಎಂದು ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಲೋಕೇಶ ಧನಪಾಲ ಹವಲೆ, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಹಾಗೂ ಪಿ.ಎಲ್.ವಿ. ಕೆ. ಎಂ. ರಾಮಕೃಷ್ಣಪ್ಪ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.
ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳು: ೧೯೮೮ರ ಮೋಟಾರು ವಾಹನ ಕಾಯ್ದೆ ಹಾಗೂ ೨೦೧೯ರ ತಿದ್ದುಪಡಿ ನಿಯಮ ಗಳಂತೆ ಆರ್.ಟಿ.ಓ ನೋಂದಣಿ, ಎಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಹಾಗೂ ಸಿಂಧುತ್ವ ಹೊಂದಿರುವ ಚಾಲನಾ ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದರು.
ಅಪ್ರಾಪ್ತರ ವಾಹನ ಚಾಲನೆಗೆ ದಂಡ: ೧೮ ವರ್ಷದೊಳಗಿನ ಅಪ್ರಾಪ್ತ ಮಕ್ಕಳು ವಾಹನ ಚಾಲನೆ ಮಾಡಿ ಅಪಘಾತ ಎಸಗಿದರೆ, ಕಾಯ್ದೆಯ ಸೆಕ್ಷನ್ ೧೯೯( ಎ) ಪ್ರಕಾರ ಪೋಷಕರಿಗೆ ಅಥವಾ ವಾಹನದ ಮಾಲೀಕರಿಗೆ ೨೫,೦೦೦ ದಂಡ, ಜೈಲು ಶಿಕ್ಷೆ ಹಾಗೂ ವಾಹನದ ನೋಂದಣಿ ರದ್ದತಿಯಾಗಲಿದೆ. ಹಾಗಾಗಿ ಸುರಕ್ಷತಾ ನಿಯಮಗಳು ಪಾಲಿಸಿ ಎಂದು ತಿಳಿಸಿದರು.
ಸಾಮಾಜಿಕ ಅಪರಾಧಗಳಿಗೆ ನಾಂದಿ: ಮಾದಕ ವ್ಯಸನಕ್ಕೆ ತಳ್ಳಲ್ಪಟ್ಟವರು ಹಣಕ್ಕಾಗಿ ಕಳವು, ದರೋಡೆ ಹಾಗೂ ಕೊಲೆಯಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಅಪಾಯವಿರುತ್ತದೆ. ೧೯೮೫ರ ಎನ್‌ಡಿಪಿಎಸ್ ಕಾಯ್ದೆ ೧೯೮೫ರ ಮಾದಕ ದ್ರವ್ಯಗಳ ಕಾಯ್ದೆಯಡಿ ಗಾಂಜಾ, ಅಫೀಮು ಮುಂತಾದ ಮಾದಕ ವಸ್ತುಗಳನ್ನು ಬೆಳೆಯುವುದು, ತಯಾರಿಸುವುದು, ಸಂಗ್ರಹಿಸುವುದು, ಸಾಗಣೆ ಮಾಡುವುದು ಅಥವಾ ಸೇವಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದರು.
ಪ್ಯಾನಲ್ ವಕೀಲರಾದ ಶ್ರೀ ಗಣೇಶ್ ಪ್ರಸಾದ್ ಕೆ. ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪೋಕ್ಸೊ ಹಾಗೂ ಬಾಲನ್ಯಾಯ ಕಾಯ್ದೆಗಳ ಕುರಿತು ವಿದ್ಯಾರ್ಥಿಗಳಿಗೆ ಕಾನೂನು ಜಾಗೃತಿ ಮೂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರಾಜಕುಮಾರ್ ಎಸ್. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಲಯ ಅರಣ್ಯಾಧಿಕಾರಿ ಬಸವರಾಜು ಗೋಗೇರಿ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
(Visited 1 times, 1 visits today)




