ತುಮಕೂರು: ನಗರದ ಹಲವು ವಾರ್ಡ್ಗಳಲ್ಲಿ ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನೀರು ಸರಬರಾಜಿನಲ್ಲಿ ಆಗುತ್ತಿರುವ ವ್ಯತ್ಯಯದಿಂದ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಭಾರತ ಕಮ್ಯೂನಿಷ್ಟ ಪಕ್ಷ ನಗರ ಸಮಿತಿ ಮತ್ತು ನಾಗರಿಕರ ಹಿತರಕ್ಷಣ ಸಮಿತಿ ಜಂಟಿಯಾಗಿ ದಿನಾಂಕ;೨೫-೦೯-೨೦೨೬ ರಂದು ಪಾಲಿಕೆ ಎದರು ಪ್ರತಿಭಟನೆ ನಡೆಸಲಯಿತು.
ನಗರದ ಕೆಲವು ಪ್ರದೇಶಗಳಿಗೆ ನಿಗದಿತ ಸಮಯಕ್ಕೆ ನೀರು ಪೂರೈಕೆಯಾಗದೆ ಇರುವುದರಿಂದ ಕುಡಿಯಲು, ಅಡುಗೆ ಮಾಡಲು ಹಾಗೂ ದಿನನಿತ್ಯದ ಬಳಕೆಗೆ ಅಗತ್ಯವಾದ ನೀರಿನ ಕೊರತೆ ಉಂಟಾಗಿದೆ. ಹಲವು ಕುಟುಂಬಗಳು ದೂರದ ಪ್ರದೇಶಗಳಿಗೆ ತೆರಳಿ ನೀರು ತರುವ ಅನಿವಾರ್ಯ ಪರಿಸ್ಥಿತಿಗೆ ಸಿಲುಕಿವೆ.
ಕುಡಿಯುವ ನೀರು ಪ್ರತಿಯೊಬ್ಬ ನಾಗರಿಕನ ಮೂಲಭೂತ ಅಗತ್ಯವಾಗಿದ್ದು, ನೀರು ಪೂರೈಕೆಯಲ್ಲಿ ನಿರ್ಲಕ್ಷ್ಯಕ್ಕೆ ಅವಕಾಶ ನೀಡಬಾರದು. ನೀರು ಯಾವ ದಿನ, ಯಾವ ಸಮಯಕ್ಕೆ ಪೂರೈಕೆಯಾಗುತ್ತದೆ ಎಂಬ ಬಗ್ಗೆ ಕೆಲವು ವಾರ್ಡ್ಗಳಲ್ಲಿ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ಇಲ್ಲದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಈ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆ ವಾರ್ಡ್ವಾರು ನೀರು ಪೂರೈಕೆಯ ಸ್ಥಿತಿಯನ್ನು ತಕ್ಷಣ ಪರಿಶೀಲಿಸಿ, ನೀರು ಬಾರದಿರುವ ಪ್ರದೇಶಗಳನ್ನು ಗುರುತಿಸಿ ತುರ್ತು ಕ್ರಮ ಕೈಗೊಳ್ಳಬೇಕು. ನೀರು ಪೂರೈಕೆ ಸಹಜ ಸ್ಥಿತಿಗೆ ಬರುವವರೆಗೆ ಸಮಸ್ಯೆ ಇರುವ ಪ್ರದೇಶಗಳಿಗೆ ಪಾಲಿಕೆಯ ವತಿಯಿಂದ ಉಚಿತವಾಗಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಬೇಕು.
ನಗರದ ನಾಗರಿಕರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಮುಂದುವರಿಯಲು ಅವಕಾಶ ನೀಡದೆ, ತುಮಕೂರು ಮಹಾನಗರ ಪಾಲಿಕೆ ತಕ್ಷಣ ತುರ್ತು ಕ್ರಮ ಕೈಗೊಂಡು ಎಲ್ಲಾ ಪ್ರದೇಶಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಸಬೇಕು ಎಂದು ಒತ್ತಾಯಿಸಲಾಗಿದೆ.ಮನವಿಯನ್ನು ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿರ್ವಕ ಅಭಿಯಂತ್ರರಾದ ಸಂದೀಪ್ ರವರಿಗೆ ಮನವಿಸಲ್ಲಿಸಲಾಯಿತು.ಮನವಿ ಸ್ವೀಕರಿಸಿ ಮತನಾಡಿ ನಾಳೆಯಿಂದ ನೀರಿನ ಸಮಸ್ಯೆ ಬಗೆಹರಿಯವುದಾಗಿ ತಿಳಿಸಿದರು.
ಹೋರಾಟದಲ್ಲಿ ಸಿಪಿಐಎಂ ನ ಬಿ.ಉಮೇಶ್, ನಗರ ಕಾರ್ಯದರ್ಶಿ ಎ.ಲೋಕೆಶ್, ಮಧು.ವೈ.ಎಸ್, ಬಾಲಕೃಷ್ಣ .ಆರ್, ವಿಶ್ವಾನಾಥ, ರಫೀಕ್ಪಾಷ್, ಶಿವರೆಡ್ಡಿ, ಅಶ್ವಥಯ್ಯ, ನಿಶ್ಚಯ ಮುತಂದಾವರು ಭಾಗವಹಿಸಿದ್ದರು.
ಸಾರ್ವಜನಿಕರ ಪ್ರಮುಖ ಒತ್ತಾಯಗಳು
ನೀರು ಪೂರೈಕೆಯಾಗದ ವಾರ್ಡ್ಗಳು ಹಾಗೂ ಪ್ರದೇಶಗಳನ್ನು ತಕ್ಷಣ ಗುರುತಿಸಿ ಸಮಸ್ಯೆ ಬಗೆಹರಿಸಬೇಕು.
ಎಲ್ಲಾ ವಾರ್ಡ್ಗಳಿಗೆ ನಿಯಮಿತ ಹಾಗೂ ಸಮರ್ಪಕ ಕುಡಿಯುವ ನೀರು ಪೂರೈಸಬೇಕು.
ವಾರ್ಡ್ವಾರು ನೀರು ಪೂರೈಕೆಯ ವೇಳಾಪಟ್ಟಿಯನ್ನು ಸಾರ್ವಜನಿಕರಿಗೆ ಮುಂಚಿತವಾಗಿ ತಿಳಿಸಬೇಕು.
ನೀರು ಬಾರದ ಪ್ರದೇಶಗಳಿಗೆ ತುರ್ತು ಸಂದರ್ಭದಲ್ಲಿ ಉಚಿತ ಟ್ಯಾಂಕರ್ ನೀರು ಪೂರೈಕೆ ಮಾಡಬೇಕು.
ಪೈಪ್ಲೈನ್, ಮೋಟಾರ್, ವಾಲ್ವ್, ನೀರು ಸರಬರಾಜು ವ್ಯವಸ್ಥೆ ಸೇರಿದಂತೆ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಶೀಲಿಸಿ ದುರಸ್ತಿ ಮಾಡಬೇಕು.
ನೀರು ಪೂರೈಕೆಯಲ್ಲಿ ವ್ಯತ್ಯಯಕ್ಕೆ ಕಾರಣವಾಗಿರುವ ಸಮಸ್ಯೆಗಳನ್ನು ಪತ್ತೆಹಚ್ಚಿ ಶಾಶ್ವತ ಪರಿಹಾರ ಕಲ್ಪಿಸಬೇಕು.
ಟ್ಯಾಂಕರ್ ನೀರು ಪೂರೈಕೆಯಲ್ಲಿ ಯಾವುದೇ ರೀತಿಯ ಹಣ ವಸೂಲಿ ಅಥವಾ ಅಕ್ರಮ ನಡೆಯದಂತೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಬೇಕು.
ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಮರುಕಳಿಸದಂತೆ ವಾರ್ಡ್ವಾರು ನೀರು ಪೂರೈಕೆ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ನಿರ್ವಹಿಸಬೇಕು.





