ತುಮಕೂರು: ನಮ್ಮ ಜೀವನದಲ್ಲಿ ಶಿಕ್ಷಣ, ಉದ್ಯೋಗ, ಸ್ಪರ್ಧೆ, ಭವಿಷ್ಯದ ಚಿಂತೆ, ಸಾಮಾಜಿಕ ಜವಾಬ್ದಾರಿ ಹೀಗೆ ಅನೇಕ ಒತ್ತಡಗಳಿವೆ. ಇಂತಹ ಸಂದರ್ಭದಲ್ಲಿ ಒಂದು ಸಣ್ಣ ನಗು ಕೂಡ ನಮ್ಮ ಮನಸ್ಸಿಗೆ ನೆಮ್ಮದಿ ನೀಡಬಲ್ಲದು. ಅದಕ್ಕಾಗಿಯೇ ನಗು ಆರೋಗ್ಯದ ಔಷಧಿ ಎಂಬ ಮಾತು ಜನಪ್ರಿಯವಾಗಿದೆ ಎಂದು ದೂರದರ್ಶನದ ಹಾಸ್ಯ ಹಾಗೂ ಮಿಮಿಕ್ರಿ ಕಲಾವಿದರಾದ ನಿಟ್ಟೂರು ನರಸಿಂಹರಾಜು ಅವರು ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಸ್ನಾತಕ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸೆ. ೨೬ ಶನಿವಾರ ದಂದು ಆಯೋಜಿಸಿದ್ದ ಸ್ವಾಗತ ಹಾಗೂ ೨೦೨೬-೨೭ನೇ ಶೈಕ್ಷಣಿಕ ಸಾಲಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭವಾದ ‘ಸಂಕಲ್ಪ-೨೦೨೬’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಾಸ್ಯವು ಸಮಾಜದ ಸಮಸ್ಯೆಗಳನ್ನು ಪ್ರಶ್ನಿಸುವ ಶಕ್ತಿಯನ್ನೂ ಹೊಂದಿದೆ. ವ್ಯಂಗ್ಯ, ವಿಡಂಬನೆ, ಕಾರ್ಟೂನ್, ನಾಟಕ, ಸಿನಿಮಾ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಭ್ರಷ್ಟಾಚಾರ, ಅಂಧಶ್ರದ್ಧೆ, ಸಾಮಾಜಿಕ ಅಸಮಾನತೆ, ರಾಜಕೀಯ ಮತ್ತು ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಜನರಲ್ಲಿ ಚಿಂತನೆ ಮೂಡಿಸಬಹುದು. ಒಳ್ಳೆಯ ಹಾಸ್ಯ ಮೊದಲು ನಮ್ಮನ್ನು ನಗಿಸುತ್ತದೆ, ನಂತರ ಯೋಚಿಸುವಂತೆ ಮಾಡುತ್ತದೆ ಎಂದರು.
ತುಮಕೂರು ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಸ್. ಶ್ರೀನಿವಾಸ್ ಅವರು ಮಾತನಾಡಿ ಮನುಷ್ಯರಿಗೆ ಸಂತೃಪ್ತಿ, ಸಂತೋಷಗಳು ಪ್ರಮುಖವಾದದ್ದು, ವಿದ್ಯಾರ್ಥಿಗಳು ವೇದಿಕೆಗಳನ್ನು ಉಪಯೋಗಿಸಿಕೊಂಡು ಮೇಲೆ ಬರಬೇಕು ಎಂದರು.
ವಿವಿಧ ಘಟಕಗಳ ಸಂಯೋಜಕರಾದ ಡಾ. ಅರುಣ ಕುಮಾರ್ ಡಿ.ಬಿ., ಡಾ. ಎಂ. ಮಂಜುನಾಥ್, ಡಾ. ನರೇಂದ್ರ ಎನ್., ಡಾ. ಚೇತನ್ ಪ್ರತಾಪ್, ಡಾ. ನಾರಾಯಣ ಗಾಂವ್ಕರ್, ಡಾ. ಚಿಕ್ಕಪ್ಪ ಉಡುಗಣಿ, ಡಾ. ಮಂಗಳಗೌರಿ ಎಂ., ಡಾ. ಭಾಗ್ಯಲಕ್ಷಿ÷್ಮÃ ಎಂ., ಡಾ. ಪರಿಮಳ ಬಿ., ಡಾ. ರಮಣಿ ಆರ್. ಹಾಗೂ ಡಾ. ರಾಮಕೃಷ್ಣ ಜಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕರಾದ ಡಾ. ಆಶಾರಾಣಿ ಬಗ್ಗನಡು ಅವರು ನಿರೂಪಿಸಿದರು.
(Visited 1 times, 1 visits today)





