ಹುಳಿಯಾರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಿ ಐದಾರು ತಿಂಗಳು ಕಳೆದರೂ ಹಣ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ತಮ್ಮಡಿಹಳ್ಳಿ ಗೊಲ್ಲರಹಟ್ಟಿ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಶನಿವಾರದೊಳಗೆ ಬಾಕಿ ಹಣ ರೈತರ ಖಾತೆಗೆ ಜಮೆಯಾಗದಿದ್ದರೆ, ಬರುವ ಸೋಮವಾರ ತಾಲೂಕು ಕಚೇರಿ ಮುಂದೆ ಧರಣಿ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮಳೆ ಕೈಕೊಟ್ಟ ಪರಿಣಾಮ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ಕಷ್ಟಪಟ್ಟು ಬೆಳೆದ ರಾಗಿಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ರೈತರು ದಿನಗಟ್ಟಲೆ ಕಾದು, ಕೆಲವೊಮ್ಮೆ ರಾತ್ರಿಯೂ ರಸ್ತೆಯಲ್ಲೇ ಕಾಲ ಕಳೆಯಬೇಕಾಯಿತು. ಆದರೆ ರಾಗಿ ಮಾರಾಟವಾಗಿ ತಿಂಗಳುಗಳೇ ಕಳೆದರೂ ಹಣ ಮಾತ್ರ ಕೈ ಸೇರಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಈಗಾಗಲೇ ಬರಗಾಲದ ಪರಿಸ್ಥಿತಿಯಿಂದ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ರಾಗಿ ಮಾರಾಟದ ಹಣ ನಮ್ಮದೇ ಹಣವಾಗಿದ್ದು, ಅದನ್ನು ಶೀಘ್ರವಾಗಿ ಬಿಡುಗಡೆ ಮಾಡಿದರೆ ಕುಟುಂಬ ನಿರ್ವಹಣೆಗೆ ಅನುಕೂಲವಾಗಲಿದೆ ಎಂದು ರೈತರು ತಿಳಿಸಿದ್ದಾರೆ.
ಬರಗಾಲದ ಹಿನ್ನೆಲೆಯಲ್ಲಿ ಯಳನಾಡು ಸುತ್ತಮುತ್ತ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಈ ಭಾಗದಲ್ಲಿ ಗೋಶಾಲೆ ಆರಂಭಿಸಿ ಜಾನುವಾರುಗಳಿಗೆ ರಕ್ಷಣೆ ನೀಡಬೇಕು ಹಾಗೂ ಕುಡಿಯುವ ನೀರಿನ ಸಮಸ್ಯೆಗೂ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ರೈತರ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಬಾಕಿ ಹಣ ಬಿಡುಗಡೆ ಮಾಡಬೇಕು. ಜನಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷಗಳು ರಾಜಕೀಯ ಚಟುವಟಿಕೆಗಳಿಗೆ ಸೀಮಿತವಾಗದೆ ರೈತರ ಸಮಸ್ಯೆಗಳತ್ತ ಗಮನಹರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ತಮ್ಮಡಿಹಳ್ಳಿ ಗೊಲ್ಲರಹಟ್ಟಿಯ ರೈತರಾದ ಕಾಟಯ್ಯ, ಪೂಜಾರಿ ಕಾಟಲಿಂಗಯ್ಯ, ಚಂದ್ರಯ್ಯ, ಗೋವಿಂದಪ್ಪ, ಗಂಗಾಧರಯ್ಯ, ಕೃಷ್ಣಮೂರ್ತಿ, ಸತ್ತೇನ ಕಾಟಯ್ಯ ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು.
(Visited 1 times, 1 visits today)





