ಪಾವಗಡ: ಶ್ರವಣ ದೋಷದಿಂದ ಬಳಲುತ್ತಿರುವ ಪಾವಗಡ ತಾಲ್ಲೂಕಿನ ಪುಟ್ಟ ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ಶ್ರವಣ ಸಾಧನಗಳನ್ನು ವಿತರಿಸುವ ವಿನೂತನ ಯೋಜನೆಗೆ ಸೋಮವಾರ ಚಾಲನೆ ನೀಡಲಾಯಿತು.
ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಪಾವಗಡ ಹಾಗೂ ಬೆಂಗಳೂರಿನ ಡಾ. ಎಸ್.ಆರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ಯೋಜನೆಯ ಮೊದಲ ಹಂತದಲ್ಲಿ ಗುರುತಿಸಲಾದ ಐವರು ಮಕ್ಕಳಿಗೆ ಒಟ್ಟು ಸುಮಾರು ೨.೭೦ ಲಕ್ಷ ಮೌಲ್ಯದ ಶ್ರವಣ ಸಾಧನಗಳನ್ನು ಉಚಿತವಾಗಿ ವಿತರಿಸಲಾಯಿತು. ನಾಲ್ವರು ಮಕ್ಕಳಿಗೆ ಎರಡೂ ಕಿವಿಗಳಿಗೆ ಹಾಗೂ ಓರ್ವ ಮಗುವಿಗೆ ಒಂದು ಕಿವಿಗೆ ಸಾಧನ ಅಳವಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ತಜ್ಞ ವೈದ್ಯ ಡಾ. ಜಿ. ವೆಂಕಟರಾಮಯ್ಯ, ಒಂದು ಕಿವಿಗೆ ಸುಮಾರು ೩೦ ಸಾವಿರ ವೆಚ್ಚವಾಗುವ ಶ್ರವಣ ಸಾಧನಗಳನ್ನು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯ ಎಂದರು. ಗ್ರಾಮೀಣ ಭಾಗದ ಮಕ್ಕಳಿಗೆ ಇಂತಹ ಸೇವೆ ಹೊಸ ಜೀವನ ನೀಡುವಂತಾಗಿದೆ ಎಂದು ಹೇಳಿದರು.
ಪಾವಗಡ ತಾಲ್ಲೂಕಿನ ಅಂಗನವಾಡಿ, ಶಾಲೆಗಳು ಹಾಗೂ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ವಾಕ್ ಮತ್ತು ಶ್ರವಣ ದೋಷಗಳ ಕುರಿತು ನಡೆಸುತ್ತಿರುವ ಸಮೀಕ್ಷೆಯಲ್ಲಿ ಜೂನ್ ೨೦೨೪ರಿಂದ ಸೆಪ್ಟೆಂಬರ್ ೨೦೨೬ರವರೆಗೆ ೧೨,೫೬೮ ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ ಅಗತ್ಯವಿರುವವರಿಗೆ ಔಷಧೋಪಚಾರ, ವಾಕ್ ಚಿಕಿತ್ಸೆ ಹಾಗೂ ಶ್ರವಣ ಸಾಧನಗಳನ್ನು ಒದಗಿಸಲಾಗಿದೆ.
ಈಗಾಗಲೇ ಆರ್ಥಿಕವಾಗಿ ಹಿಂದುಳಿದ ೧೬೫ ಹಿರಿಯರಿಗೆ ಉಚಿತ ಶ್ರವಣ ಸಾಧನಗಳನ್ನು ವಿತರಿಸಲಾಗಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು ೧೯.೮೦ ಲಕ್ಷ ಎಂದು ಸಂಸ್ಥೆ ತಿಳಿಸಿದೆ.
ಅತ್ಯಾಧುನಿಕ ತಪಾಸಣಾ ಸೌಲಭ್ಯ
ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಬೆಂಗಳೂರಿನ ಡಾ. ಎಸ್.ಆರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯ ಉಪಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಜನರಿಗೆ ಅತ್ಯಾಧುನಿಕ ವಾಕ್, ಶ್ರವಣ ಹಾಗೂ ಕಿವಿ, ಮೂಗು, ಗಂಟಲು ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಕೇಂದ್ರದಲ್ಲಿ Pure Tone Audiometry, Impedance Audiometry, BERA, OAE, Speech Evaluation and Speech Therapy, Endoscopic ENT Examination ಸೇರಿದಂತೆ ವಿವಿಧ ತಪಾಸಣೆಗಳು ನಡೆಯುತ್ತಿವೆ. ENT ಶಸ್ತçಚಿಕಿತ್ಸೆ ಹಾಗೂ ನವಜಾತ ಶಿಶುಗಳ ಶ್ರವಣ ತಪಾಸಣೆಯ ಸೌಲಭ್ಯವೂ ಇದೆ.
ಪಾವಗಡ ತಾಲ್ಲೂಕಿನ ಶಾಲೆ ಹಾಗೂ ಅಂಗನವಾಡಿಗಳಲ್ಲಿ ಶ್ರವಣ ಮತ್ತು ವಾಕ್ ದೋಷವುಳ್ಳ ಮಕ್ಕಳನ್ನು ಗುರುತಿಸಿ, ಅಗತ್ಯವಿರುವ ಮಕ್ಕಳನ್ನು ಹೆಚ್ಚಿನ ತಪಾಸಣೆಗೆ ಆಸ್ಪತ್ರೆಗೆ ಕರೆತರಲಾಗುತ್ತಿದೆ. ವಿಶೇಷವಾಗಿ ಃಇಖಂ ಪರೀಕ್ಷೆಯಂತಹ ಅತ್ಯಾಧುನಿಕ ತಪಾಸಣಾ ಸೌಲಭ್ಯ ಗ್ರಾಮೀಣ ಭಾಗದ ಮಕ್ಕಳಿಗೆ ದೊರೆಯುತ್ತಿರುವುದು ಯೋಜನೆಯ ಪ್ರಮುಖ ವಿಶೇಷತೆಯಾಗಿದೆ.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಆರೋಗ್ಯ ಸೇವೆ ಹಾಗೂ ಅಗತ್ಯ ವೈದ್ಯಕೀಯ ಪರಿಕರಗಳನ್ನು ಒದಗಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶ್ರವಣ ದೋಷದಿಂದ ಮುಕ್ತಿ ನೀಡಿ ಅವರಲ್ಲಿ ಹೊಸ ಜೀವನದ ಭರವಸೆ ಮೂಡಿಸುವ ಕಾರ್ಯ ಮುಂದುವರಿಯಲಿದೆ ಎಂದು ತಿಳಿಸಿದರು.
ಈ ಯೋಜನೆಯಡಿ ಆಯ್ಕೆಯಾದ ಮಕ್ಕಳಿಗೆ ತಜ್ಞರು ವೈಜ್ಞಾನಿಕವಾಗಿ ಕಿವಿಯ ಅಳತೆ ಹಾಗೂ ಮೋಲ್ಡ್ ಪಡೆದು, ಅಗತ್ಯಕ್ಕೆ ಅನುಗುಣವಾಗಿ ಶ್ರವಣ ಸಾಧನಗಳನ್ನು ಸಿದ್ಧಪಡಿಸಿ ಅಳವಡಿಸಿದರು. ಮಕ್ಕಳ ಪೋಷಕರಿಗೆ ಸಾಧನಗಳ ಬಳಕೆ ಹಾಗೂ ನಿರ್ವಹಣೆ ಕುರಿತು ಮಾರ್ಗದರ್ಶನ ನೀಡಲಾಗಿದ್ದು, ವಾರಕ್ಕೆ ಮೂರು ಬಾರಿ ಮಕ್ಕಳನ್ನು ಕೇಂದ್ರಕ್ಕೆ ಕರೆತಂದು ತಜ್ಞರಿಂದ ಅಗತ್ಯ ತರಬೇತಿ ಮತ್ತು ಹೊಂದಾಣಿಕೆ ಮಾಡಿಸಿಕೊಳ್ಳುವಂತೆ ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ತಜ್ಞ ವೈದ್ಯರು, ಬೆಂಗಳೂರಿನ ಡಾ. ಎಸ್.ಆರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯ ತಜ್ಞರು, ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
(Visited 1 times, 1 visits today)





