ತುಮಕೂರು :
ಶಾಲೆಯಿಂದ ಹೊರಗುಳಿದ ಅಲ್ಪಸಂಖ್ಯಾತ ಮಕ್ಕಳನ್ನು ಮುಖ್ಯವಾಹಿನಿಗೆ ಕರೆ ತನ್ನಿ ಎಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ನಡೆದ ಅಲ್ಪಸಂಖ್ಯಾತ ಕಲ್ಯಾಣದ ಪ್ರಧಾನ ಮಂತ್ರಿಗಳ 15 ಅಂಶಗಳ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಗುಬ್ಬಿ ಹಾಗೂ ತುಮಕೂರು ತಾಲ್ಲೂಕಿನಲ್ಲಿ ಒಟ್ಟು 114 ಅಲ್ಪಸಂಖ್ಯಾತರ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಹೊರಗುಳಿದ ಮಕ್ಕಳನ್ನು ವಿಶೇಷ ದಾಖಲಾತಿ ಆಂದೋಲನಡಿಯಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸಿ ಶಾಲೆಗೆ ದಾಖಲಿಸಬೇಕು ಹಾಗೂ ತಂದೆ-ತಾಯೆಂದರಿಗೆ ಮಕ್ಕಳ ಭವಿಷ್ಯದ ಬಗ್ಗೆ ಅರಿವು ಮೂಡಿಸಬೇಕೆಂದರು.
ಅಲ್ಪಸಂಖ್ಯಾತ ಶಾಲೆಗಳಲ್ಲಿ ವಿದ್ಯಾರ್ಥಿನಿಯರ ದಾಖಲಾತಿ ಹೆಚ್ಚಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆ ಕಡಿಯಾಗುತ್ತಿರುವ ಬಗ್ಗೆ ಕಾರಣವೇನೆಂದು ಕೇಳಿ ನಿಖರ ಮಾಹಿತಿ ನೀಡಲು ಡಿಡಿಪಿಐ ಕಾಮಾಕ್ಷಿ ಅವರಿಗೆ ಸೂಚಿಸಿದಾಗ ಆರ್ಥಿಕವಾಗಿ ಹಿಂದುಳಿದಿರುವುದರಿಂದ ಮಕ್ಕಳ ಪೋಷಕರೇ ಗ್ಯಾರೇಜು, ಮತ್ತಿತರ ಕಡೆ ಕೆಲಸಕ್ಕೆ ಕಳುಹಿಸುತ್ತಿರುವುದರಿಂದ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಮಾಹಿತಿ ನೀಡಿದರು. ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ಉರ್ದು ಶಾಲೆಗಳಿಗೆ ಅವಶ್ಯಕತೆಯಿರುವ ಶೌಚಾಲಯ, ಶಾಲಾ ಕಟ್ಟಡ ಸಾಮಗ್ರಿಗಳು, ಆವರಣ ಗೋಡೆ ಹಾಗೂ ಗ್ರಂಥಾಲಯದ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಒಟ್ಟು 228 ಅಲ್ಪಸಂಖ್ಯಾತರ ಅಂಗನವಾಡಿ ಕೇಂದ್ರಗಳಿದ್ದು, ಈ ಅಂಗನವಾಡಿ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರದ ಕೊರತೆಯಾಗದಂತೆ ಪೂರೈಸಬೇಕು. ಸಂಬಂಧಪಟ್ಟ ಮೇಲ್ವಿಚಾರಕರು ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿರುವ ಮಕ್ಕಳ ಮನೆ-ಮನೆಗೆ ತೆರಳಿ ಅಪೌಷ್ಠಿಕತೆ ಬಗ್ಗೆ ತಿಳಿದು ತಮಗೆ ವರದಿ ಸಲ್ಲಿಸಬೇಕು. ಅಪೌಷ್ಠಿಕತೆ ಮಕ್ಕಳ ಬಗ್ಗೆ ವರದಿಯಾದರೆ ಆಯಾ ಮೇಲ್ವಿಚಾರಕರನ್ನೇ ಹೊಣೆಗಾರರನ್ನಾಗಿಸಲಾಗುವುದೆಂದು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್ ಮಾತನಾಡಿ ಇಲಾಖೆ ಯೋಜನೆಯಡಿ ಅಲ್ಪಸಂಖ್ಯಾತ ಮಹಿಳೆಯರಿಗೆ 2019ನೇ ಸಾಲಿನ ಭಾಗ್ಯಲಕ್ಷ್ಮಿ, ಉದ್ಯೋಗಿನಿ, ಸಮೃದ್ಧಿ, ಧನಶ್ರೀ, ಮುಂತಾದ ಯೋಜನೆಗಳ ಮಹಿಳಾ ಫಲಾನುಭವಿಗಳಿಗೆ ತರಬೇತಿ ನೀಡಿ ಚೆಕ್ ವಿತರಿಸಲಾಗಿದೆ ಎಂದು ತಿಳಿಸಿದರು.
ಕೃಷಿ ಜಂಟಿ ನಿರ್ದೇಶಕ ಜಯಸ್ವಾಮಿ ಮಾತನಾಡಿ ಕೃಷಿ ಇಲಾಖೆ ವತಿಯಿಂದ ಅಲ್ಪಸಂಖ್ಯಾತ ರೈತರಿಗೆ ಕೃಷಿ ಭಾಗ್ಯ ಯೋಜನೆಯಡಿ ತುಂತುರು ನೀರಾವರಿ ಸಾಮಗ್ರಿಗಳು, ಸ್ಪಿಂಕ್ಲರ್, ಬೀತ್ತನೆ ಬೀಜ, ಕೃಷಿ ಯಾಂತ್ರೋಪಕರಣಗಳನ್ನು ಫಲಾನುಭವಿ ರೈತರಿಗೆ ವಿತರಿಸಲಾಗುತ್ತಿದೆ.
ರೇಷ್ಮೆ ಅಭಿವೃದ್ಧಿ ಯೋಜನೆಯಡಿ ಅಲ್ಪಸಂಖ್ಯಾತ ವರ್ಗದ ರೇಷ್ಮೆ ಬೆಳೆಗಾರರಿಗೆ ಹನಿ ನೀರಾವರಿ, ಗೂಡು/ಚಾಕಿಗೆ ಪ್ರೋತ್ಸಾಹಧನವನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ 30 ಅಲ್ಪಸಂಖ್ಯಾತರಿಗೆ ಏ.ಸಿ ದುರಸ್ತಿ ತರಬೇತಿ ನೀಡಲಾಗುವುದು. ಕೈಮಗ್ಗ ಮತ್ತು ಜವಳಿ ಇಲಾಖೆಯಡಿ 2019ನೇ ಸಾಲಿನಲ್ಲಿ ವಾರ್ಷಿಕ 198 ಫಲಾನುಭವಿಗಳಿಗೆ ಸಿದ್ಧ ಉಡುಪುಗಳ ತರಬೇತಿ ನೀಡಲಾಗುತ್ತಿದೆ. ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ಶಾದಿಭಾಗ್ಯ ಯೋಜನೆಯಡಿ 73 ಕ್ರೈಸ್ತ ಸಮುದಾಯದವರಿಗೆ ವಿವಾಹ ಮಾಡಿಸಲಾಗಿದೆ. ವಿವಿಧ ಯೋಜನೆಗಳಾದ ಸ್ವಯಂ ಉದ್ಯೋಗ, ಶ್ರಮಶಕ್ತಿ ಯೋಜನೆ, ಮೈಕ್ರೋ(ಸಣ್ಣ) ಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಪಶು ಸಂಗೋಪನಾ, ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ, ಅರಿವು(ಶೈಕ್ಷಣಿಕ) ಸಾಲ, ಮುಂತಾದ ಯೋಜನೆಗಳ ಸೌಲಭ್ಯವನ್ನು ಅಲ್ಪಸಂಖ್ಯಾತರಿಗೆ ಒದಗಿಸಲಾಗುತ್ತಿದೆ ಎಂದು ಆಯಾ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ 15 ಅಂಶಗಳ ಸಮಿತಿ ಸದಸ್ಯ ಖಧೀರ್ ಅಹಮದ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಬಿ. ರಘು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಚಂದ್ರಿಕಾ ಹಾಗೂ ಮತ್ತಿತರ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.