ಅಕ್ರಮ ಮದ್ಯ ಮಾರಾಟ ಕೇಂದ್ರಗಳ ಮೇಲೆ ದಾಳಿ : ಕಳೆದ 6 ತಿಂಗಳಲ್ಲಿ 203 ಆರೋಪಿಗಳ ಬಂಧನ!!

ತುಮಕೂರು :

      ಅಬಕಾರಿ ಉಪ ಆಯುಕ್ತ ಎಸ್. ನಾಗರಾಜಪ್ಪ ಅವರ ಮಾರ್ಗದರ್ಶನದಲ್ಲಿ 2020 ಜನವರಿ ಮಾಹೆಯಿಂದ ಜೂನ್ ಅಂತ್ಯದವರೆಗೆ ತುಮಕೂರು ಉಪ ವಿಭಾಗ ವ್ಯಾಪ್ತಿಯಲ್ಲಿರುವ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 683 ಕೇಂದ್ರಗಳ ಮೇಲೆ ದಾಳಿ ನಡೆಸಿ 203 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತುಮಕೂರು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಹೆಚ್.ಜಿ. ವಿರೂಪಾಕ್ಷಪ್ಪ ತಿಳಿಸಿದ್ದಾರೆ.

ತುಮಕೂರು ಉಪವಿಭಾಗ ವ್ಯಾಪ್ತಿಗೆ ಬರುವ ತುಮಕೂರು, ಕುಣಿಗಲ್ ಹಾಗೂ ಗುಬ್ಬಿ ತಾಲ್ಲೂಕುಗಳಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ. ಅಲ್ಲದೆ ಅಬಕಾರಿ ಕಾನೂನುಗಳನ್ನು ಉಲ್ಲಂಘಿಸಿದ ಸನ್ನದ್ದುಗಳ ಮೇಲೆ ದಾಖಲಿಸಿದ ಮೊಕದ್ದಮೆಗಳು ಸೇರಿದಂತೆ ಒಟ್ಟು 292 ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಹಾಗೂ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಸಾಗಾಣಿಕೆ ಮಾಡಲಾಗುತ್ತಿದ್ದ ಎರಡು ಕಾರು ಮತ್ತು 12 ದ್ವಿಚಕ್ರ ವಾಹನಗಳನ್ನು ರಸ್ತೆಗಸ್ತಿನ ಮೂಲಕ ಪತ್ತೆ ಮಾಡಿ 502 ಲೀಟರ್ ಮದ್ಯ, 45 ಲೀಟರ್ ಬಿಯರ್ ಹಾಗೂ 600 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಈವರೆಗೆ ಒಟ್ಟು 25,25,000 ರೂ.ಗಳ ದಂಡವನ್ನು ವಸೂಲಿ ಮಾಡಲಾಗಿದೆ.

      ಅಬಕಾರಿ ಅಕ್ರಮ ನಡೆಯುವ ಹಳ್ಳಿಗಳು, ಪೆಟ್ಟಿಗೆ ಅಂಗಡಿ ಹಾಗೂ ಮಾಂಸಾಹಾರಿ ಹೋಟೆಲ್‍ಗಳಲ್ಲಿ ಅಕ್ರಮ ಮದ್ಯ ಸಂಗ್ರಹಣೆ ಹಾಗೂ ಮಾರಾಟದಂತಹ ಸ್ಥಳಗಳ ಮೇಲೆ ನಿರಂತರವಾಗಿ ದಾಳಿ ಮಾಡಿ ಅಬಕಾರಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು.

      ಮದ್ಯ ಪಾನೀಕರು ಅಗತ್ಯವಿದ್ದಾಗ ಅಧಿಕೃತ ಸನ್ನದು ಹೊಂದಿರುವ ಮದ್ಯದಂಗಡಿಗಳಲ್ಲಿಯೇ ಮದ್ಯವನ್ನು ಖರೀದಿಸಿ ಉಪಯೋಗಿಸತಕ್ಕದ್ದು ಎಂದು ಅವರು ಮನವಿ ಮಾಡಿದ್ದಾರೆ.

     ಅಬಕಾರಿ ಜಂಟಿ ಆಯುಕ್ತರಾದ ನಾಗೇಶ್, ಡಿ. ನಾಗರಜಪ್ಪ ಅವರ ಮಾರ್ಗದರ್ಶನದಲ್ಲಿ ವಲಯ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ಈ ದಾಳಿ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

(Visited 1 times, 1 visits today)

Related posts

Leave a Comment