ತಾಲ್ಲೂಕಿಗೆ ಹೊಂದಿಕೊಂಡಿರುವ ಗಡಿ ಗ್ರಾಮಗಳ ಬಗ್ಗೆ ನಿಗಾ ವಹಿಸಲು ಸಚಿವರ ಸೂಚನೆ!

ಚಿಕ್ಕನಾಯಕನಹಳ್ಳಿ:

      ಬಿಜಾಪುರ, ಗುಲ್ಬರ್ಗಾ ಜಿಲ್ಲೆಯ ಸಂಪರ್ಕದಲ್ಲಿದ್ದು ಇಲ್ಲಿ ನೆಲೆಸಿರುವವರ ಬಗ್ಗೆ ಹೆಚ್ಚಿನ ನಿಗಾವಹಿಸಿ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ಖಡಕ್ ಸೂಚನೆ ನೀಡಿದರು.

        ಕೊರೊನಾ ವೈರಸ್ ತಡೆ ಅನ್ವಯ ಲಾಕ್‍ಡೌನ್ ಸಂದರ್ಭದಲ್ಲಿ ನಡೆದಿರುವ ಕಾನೂನು ಪರಿಪಾಲನೆ ಹಾಗೂ ವಿವಿಧ ಇಲಾಖೆಗಳ ಕಾರ್ಯಪ್ರಗತಿಯ ಮಾಹಿತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಇದಕ್ಕೂ ಮೊದಲು ತಹಸೀಲ್ದಾರ್ ತೇಜಸ್ವಿನಿ ಮಾಹಿತಿ ನೀಡಿ ಬೆಸ್ಕಾ ಇಲಾಖೆಯಡಿ ನಡೆಯುವ ಕಾಮಗಾರಿ ಕೆಲಸಕ್ಕೆ ಚಿಕ್ಕೋಡಿ ಜಿಲ್ಲೆಯಿಂದ ನಾಲ್ಕುಮಂದಿ ದ್ವಿಚಕ್ರ ವಾಹನದಲ್ಲಿ ತಾಲ್ಲೂಕಿಗೆ ಬಂದಿದ್ದಾರೆ, ಇದಲ್ಲದೆ ತಮಿಳುನಾಡಿನ ಕೃಷ್ಣಗಿರಿ ಮೂಲದ ಲಾರಿ ಚಾಲಕ ತಾಲ್ಲೂಕಿನ ಅರೇನಹಳ್ಳಿಗೇಟ್ ಬಳಿ ನೆಲೆಸಿದ್ದರೆ, ಮತ್ತೊಬ್ಬ ಮುದ್ದೆಬಿಹಾಳದ ಲಾರಿ ಮಾಲಿಕ ಹಾಗೂ ಅವನೊಂದಿಗಿರುವ ಚಾಲಕನನ್ನೂ ಸಹ ಬಂದಿದ್ದು ಇವರೆಲ್ಲರನ್ನೂಸಹ ಐಸೋಲೇಷನ್‍ನಲ್ಲಿ ಇರಿಸಲಾಗಿದ್ದು ಯಾವುದೇ ಸೋಂಕಿನ ಲಕ್ಷಣ ಕಂಡುಬಂದಿಲ್ಲವೆಂದರು. ಈ ವಿವರದಿಂದ ಗಾಬರಿಗೊಂಡ ಸಚಿವರು ಇಂತಹ ವ್ಯಕ್ತಿಗಳ ಬಗ್ಗೆ ಹೆಚ್ಚು ನಿಗಾವಹಿಸಿ, ಇವರೆಲ್ಲಾ ಹೇಗೆ ಇಲ್ಲಿಗೆ ನುಸುಳಿದರೆಂದು ಪ್ರಶ್ನಿಸಿದರು.

 ಗಡಿ ಗ್ರಾಮಗಳ ಬಗ್ಗೆ ನಿಗಾ:

     ತಾಲ್ಲೂಕಿಗೆ ಹೊಂದಿಕೊಂಡಂತೆ ಹಿರಿಯೂರು, ಹೊಸದುರ್ಗ, ಶಿರಾ, ಅರಸೀಕೆರೆ, ಚಿಕ್ಕಮಗಳೂರು ಜಿಲ್ಲೆ ಹಾಗೂ ತಾಲ್ಲೂಕಿನ ಗಡಿ ಗ್ರಾಮಗಳಲ್ಲಿ ಮನೆಮನೆಯಲ್ಲಿ ಆರೋಗ್ಯ ತಪಾಸಣೆ ನಡೆಸಬೇಕೆಂದು ಸಚಿವರು ಸೂಚಿಸಿದರು. ಚೆಕ್‍ಪೋಸ್ಟ್‍ಗಳಲ್ಲಿ ಸರಕು ಸಾಗಣೆ ವಾಹನಗಳ ತಪಾಸಣೆ ಕಟ್ಟುನಿಟ್ಟಾಗಿ ಪಾಲಿಸಿರೆಂದರು.

      ಕಟ್ಟುನಿಟ್ಟಾಗಿ ಪಾಲಿಸಲಿ:

      ಲಾಕ್ ಡೌನ್ ಸಂದರ್ಭದಲ್ಲಿ ಕಾನೂನು ಪರಿಪಾಲನೆ ಕಟ್ಟುನಿಟ್ಟಾಗಿ ನಡೆಯಲಿ ಎಂದ ಸಚಿವರು, ರೈತರ ಉಪಯೋಗಕ್ಕೆ ಬೇಕಿರುವ ಸ್ಟಾರ್ಟರ್, ಪೈಪು, ಡ್ರಿಪ್‍ನಂತರ ಉಪಕರಣಗಳ ಅಂಗಡಿಗಳಿಗೆ ರೈತರು ಬಂದಾಗ ಮಾತ್ರ ತೆಗೆದುಕೊಡುವುದಕ್ಕೆ ಅವಕಾಶ ನೀಡಿ, ಇಲ್ಲಿ ಸಾಮಾಜಿಕ ಅಂತರದಂತಹ ಎಲ್ಲಾ ನಿಯಮಗಳು ಪಾಲನೆ ಕಡ್ಡಾಯವಾಗಬೇಕೆಂದರು. ದ್ವಿಚಕ್ರ ವಾಹನದಲ್ಲಿ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿ ಎಂದರು. ತರಕಾರಿ, ಹೂ, ಹಣ್ಣುಗಳ ಕೊಳ್ಳುವ ಹಾಗೂ ಮಾರಾಟ ಮಾಡುವ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆಯಲಾಯಿತು. ಹೊಟೆಲ್‍ಗಳಲ್ಲಿ ಆಹಾರ ತಯಾರಿಸಿ ಪಾರ್ಸೆಲ್‍ಗಳಿಗೆ ಮಾತ್ರ ಅವಕಾಶ ನೀಡಬಹುದೆಂದರು. ಮೆಡಿಕಲ್ ಶಾಪ್‍ಗಳಲ್ಲಿ ವೈದ್ಯರ ಚೀಟಿಇದ್ದರೆ ಮಾತ್ರ ಔಷಧಿ ನೀಡಬೇಕೆಂಬ ನಿಯಮ ಕಡ್ಡಾಯ ಜಾರಿಯಾಗಬೇಕು. ಈ ಬಗ್ಗೆ ಎಲ್ಲಾ ಔಷಧಿ ಅಂಗಡಿಯವರಗೂ ಎಚ್ಚರಿಸಿ ಎಂದರು.

      ಗ್ರಾಮಗಳಲ್ಲಿ ಜೂಜಿನ ಮೋಜು: ತಾಲ್ಲೂಕಿನ ಪ್ರತಿ ಹಳ್ಳಿಗಳಲ್ಲೂ ನಗರದಿಂದ ಬಂದವರು ಸುಮಾರು 15 ಸಾವಿರಕ್ಕೂ ಮಿಗಿಲಾಗಿದ್ದಾರೆ. ಪ್ರತಿ ಗ್ರಾಮದಲ್ಲಿ 30ಕ್ಕಿಂತ ಹೆಚ್ಚಿನ ಜನರಿದ್ದಾರೆ, ಇವರಲ್ಲಿ ಹೆಚ್ಚಿನ ಜನ ಬೆಂಗಳೂರಿನವರಾಗಿದ್ದು ಈಗ ಅವರಿಗೆ ಮೋಜಿನ ರಜೆಕಳೆಯುವ ದಿಶೆಯಲ್ಲಿ ಜೂಜುಗಳ ಚಾಳಿ ಹೆಚ್ಚಾಗಿರುತ್ತದೆ ಇದರ ಬಗ್ಗೆ ಹೆಚ್ಚು ನಿಗಾವಹಿಸಲು ಸಿಪಿಐ ವೀಣಾರವರಿಗೆ ಸಚಿವರು ಸೂಚಿಸಿದರು.

   ಕೃಷಿ ಚಟುವಟಿಕೆ ಅಡ್ಡಿಬೇಡ:

      ಮುಂದಿನ ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರ ದಾಸ್ತಾನನ್ನು ಮಾಡಿಕೊಳ್ಳಬೇಕು ಹಾಗೂ ಕಳಪೆಗೊಬ್ಬರ ಮಾರಾಟ ಮತ್ತು ಅಧಿಕ ಬೆಲೆಗೆ ಮಾರುವವರ ಮೇಲೆ ಹದ್ದಿನ ಕಣ್ಣಿಡಿ ಎಂದು ಕೃಷಿ ಸಹಾಯಕ ನಿರ್ದೇಶಕ ಹನುಮಂತರಾಜುರವರಿಗೆ ಸಚಿವರು ಆದೇಶಿಸಿದರು. ಬೇಸಿಗೆ ಸಂದರ್ಭದಲ್ಲಿ ನೀರಿನ ಅಭಾವವಿರುವ ಗ್ರಾಮಗಳಿಗೇ ಯಾವುದೇ ಮೂಲದಿಂದಾದರೂ ನೀರುಕೊಡಿ ಎಂದು ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

     ಪಡಿತರ ವಿತರಣೆ ಸಮರ್ಪಕ:

      ತಹಸೀಲ್ದಾರ್ ತೇಜಸ್ವಿನಿ ಮಾತನಾಡಿ ತಾಲ್ಲೂಕಿನಲ್ಲಿ ಶೇ.95ರಷ್ಟು ಪಡಿತರ ವಿತರಣೆ ಸಮರ್ಪಕವಾಗಿ ನಡೆದಿದೆ. ಇದಲ್ಲದೆ ಪಡಿತರ ಕಾರ್ಡ್ ಹೊಂದಿರದ ಕುಟುಂಬಗಳಿಗೂ ಸಹ ಎರೆಡೆರಡು ಬಾರಿ ಪಡಿತರ ವಸ್ತುಗಳನ್ನು ನೀಡಲಾಗಿದೆ ಎಂದರು. ಈಗಾಗಲೇ ಗಡಿ ಗ್ರಾಮಗಳಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ತಾಲ್ಲೂಕಿನಲ್ಲಿ ಎಲ್ಲಿಯೇ ಸಾವು ಬಂದರೆ ಈ ಸಾವಿನ ವಿವರವನ್ನು ತಕ್ಷಣ ದಾಖಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

      ಎರೆಡೆರಡು ಮೊಬೈಲ್ ಸ್ಕ್ವಾಡ್ ಗಳನ್ನು ರಚಿಸಲಾಗಿದ್ದು ಎರಡು ಪಾಳಿಯಂತೆ ಪಟ್ಟಣ ಹಾಗೂ ನಗರಗಳಲ್ಲಿ ಲಾಕ್‍ಡೌನ್ ನಿಯಮಗಳನ್ನು ಜಾರಿಗೆ ತರುವಲ್ಲಿ ನಿರತರಾಗಿದ್ದಾರೆ ಎಂದರು.

 

(Visited 5 times, 1 visits today)

Related posts

Leave a Comment