ತುಮಕೂರು : 4 ಸಿ.ಟಿ. ಸ್ಕ್ಯಾನಿಂಗ್ ಆಸ್ಪತ್ರೆಗಳಿಗೆ ನೋಟಿಸ್

ತುಮಕೂರು:

ಕೊರೋನಾ ಸೋಂಕು ಪತ್ತೆಗೆ ಸಿ.ಟಿ ಸ್ಕ್ಯಾನಿಂಗ್ ಮಾಡಲಾಗುತ್ತಿದ್ದು, ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚು ಹಣ ಪಡೆದಿರುವ ಆಸ್ಪತ್ರೆಗಳ ಪರವಾನಗಿ ರದ್ದುಪಡಿಸುವಂತೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, 4 ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ.
ಸಿ.ಟಿ ಸ್ಕ್ಯಾನಿಂಗ್ ಮಾಡಲು ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚು ಹಣ ಪಡೆಯಲಾಗುತ್ತಿದೆ. ಅಂತಹ ಆಸ್ಪತ್ರೆಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸುಧಾಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒತ್ತಾಯಿಸಿದ್ದರು.
ಇದಕ್ಕೆ ಸ್ಪಂದಿಸಿದ ಆರೋಗ್ಯ ಸಚಿವರು, ಈವರೆಗೂ ಕ್ರಮ ಕೈಗೊಳ್ಳದಿರುವುದಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ದುಬಾರಿ ಶುಲ್ಕ ವಸೂಲಿ ಮಾಡಿದ ಆಸ್ಪತ್ರೆಗಳ ಪರವಾನಗಿ ರದ್ದುಪಡಿಸಿ, ಅಗತ್ಯ ಕ್ರಮ ಕೈಗೊಂಡು ನನಗೆ ವರದಿ ಮಾಡಬೇಕು ಎಂದು ಸೂಚಿಸಿದ್ದರು. ಈಗಾಗಲೇ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದರು. ಆದರೆ ಈಗ ಮತ್ತೆ ನೋಟಿಸ್ ಕೊಟ್ಟಿದ್ದಾರೆ.
ಈಗಾಗಲೇ ನೋಟಿಸ್‍ಗೆ ಕೊಟ್ಟಿರುವ ವಿವರಣೆಯನ್ನು ಇಟ್ಟುಕೊಂಡು ದೂರು ಕೊಟ್ಟವರಿಂದಲೇ ಅಧಿಕ ಶುಲ್ಕ ವಸೂಲಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪಡೆದುಕೊಂಡು ಕ್ರಮ ಕೈಗೊಳ್ಳಬಹುದಿತ್ತು ಎಂಬ ಚರ್ಚೆಯೂ ನಡೆದಿದೆ.
ಜೀವ ಸ್ಕ್ಯಾನಿಂಗ್ ಸೆಂಟರ್, ಟಿಎಚ್‍ಎಸ್ ಸ್ಕ್ಯಾನಿಂಗ್ ಸೆಂಟರ್, ಸಿದ್ಧಗಂಗಾ ಆಸ್ಪತ್ರೆ, 1ನೇ ಪುಟದಿಂದ
ಸಿದ್ಧಗಂಗಾ ಡಯಾಗ್ನಾಸ್ಟಿಕ್ಸ್ ಸೆಂಟರ್‍ಗೆ ನೋಟಿಸ್ ನೀಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು ಕಚೇರಿಯ ರೇಡಿಯೇಷನ್ ಸೇಪ್ಟಿ ವಿಭಾಗದ ಉಪನಿರ್ದೇಶಕ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸ್ಕ್ಯಾನಿಂಗ್ ಸೆಂಟರ್‍ಗಳಿಗೆ ಭೇಟಿನೀಡಿ ಪರಿಶೀಲಿಸಿ ನೋಟಿಸ್ ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನೋಟಿಸ್‍ನಲ್ಲಿ ಕೇಳಿರುವ ಕಾರಣ: ಎಇಆರ್‍ಬಿ ನೋಂದಣಿ ಆಗಿರುವುದಿಲ್ಲ, ಕ್ಯೂಎ ದೃಢೀಕರಣ ಇರುವುದಿಲ್ಲ, ಸಿ.ಟಿ ಸ್ಕ್ಯಾನಿಂಗ್ ದರವನ್ನು ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಜಾಸ್ತಿ ಪಡೆಯುತ್ತಿರುವುದು ಕಂಡು ಬಂದಿದೆ. ಸ್ಕ್ಯಾನಿಂಗ್ ಸೆಂಟರ್‍ನಲ್ಲಿ ಬಾತ್ ರೂಂ, ಬಟ್ಟೆ ಬದಲಿಸುವ ಡ್ರಸಿಂಗ್ ರೂಂ ಇರುವುದಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಸ್ಕ್ಯಾನಿಂಗ್ ಹಾಗೂ ಎಕ್ಸ್-ರೇ ದರಗಳನ್ನು ಪ್ರದರ್ಶಿಸಿರುವುದಿಲ್ಲ. ಸ್ಕ್ಯಾನಿಂಗ್ ಕೊಠಡಿಯಲ್ಲಿ ಬೆಡ್‍ಶೀಟ್ ಬಾಗಿಲು ಇರುವುದಿಲ್ಲ. ಇವೇ ಮೊದಲಾದ ಕಾರಣಗಳನ್ನು ನೀಡಿ ನೋಟಿಸ್ ಕೊಡಲಾಗಿದೆ.
ಮೇ 21ರಂದು ನೋಟಿಸ್ ನೀಡಲಾಗಿದ್ದು, ಮೂರು ದಿನಗಳ ಒಳಗೆ ವಿವರಣೆ ಸಲ್ಲಿಸುವಂತೆ ಸೂಚಿಸಲಾಗಿದೆ. ತಪ್ಪಿದ್ದಲ್ಲಿ ಕೆಪಿಎಂಇ ಕಾಯ್ದೆ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಚ್‍ಒ ಎಚ್ಚರಿಕೆ ನೀಡಿದ್ದಾರೆ.

 

(Visited 2 times, 1 visits today)

Related posts

Leave a Comment