ಕೋವಿಡ್ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾ ಆಚರಣೆಗೆ ಮಾರ್ಗಸೂಚಿ ಪ್ರಕಟ

ತುಮಕೂರು : 

      ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾಡಹಬ್ಬ ದಸರಾ ಆಚರಣೆಯಲ್ಲಿ ಕೋವಿಡ್-19ರ ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು.

      ಕೋವಿಡ್-19 ವೈರಾಣು ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷದ ನಾಡಹಬ್ಬ ದಸರಾವನ್ನು ಅತ್ಯಂತ ಸರಳವಾಗಿ ಮತ್ತು ಭಕ್ತಿಪೂರ್ವಕವಾಗಿ ಆಚರಿಸುವುದು, ದಸರಾ ಆಚರಣೆಯ ಕಾರ್ಯಕ್ರಮಗಳಲ್ಲಿ 100ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಹಾಗೂ ಸಾಮಾಜಿಕ ಅಂತರವಿಲ್ಲದೆ ನಡೆಸಲಾದ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಹಾನಗರಪಾಲಿಕೆ, ಅಗ್ನಿಶಾಮಕ ಇಲಾಖೆ, ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆ/ಪ್ರಾಧಿಕಾರಗಳಿಂದ ಹೊರಡಿಸಲಾಗುವ ಎಲ್ಲಾ ಆದೇಶ/ ನಿರ್ದೇಶನ ಹಾಗೂ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.

      ದಸರಾ ಹಬ್ಬವನ್ನು ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯದಿಂದ ಆಚರಿಸುವ ಮೂಲಕ ಸಮಾಜದ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಭಂಗ ಬಾರದಂತೆ ಕಾಪಾಡುವುದು. ದಸರಾ ಹಬ್ಬದ ತಯಾರಿ ಮತ್ತು ಚಟುವಟಿಕೆಗಳ ಕುರಿತು ಸಂಬಂಧಿಸಿದ ಪ್ರಾಧಿಕಾರಗಳು ಆಗ್ಗಿಂದಾಗ್ಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾಗಿದೆ.

       ಈ ಮಾರ್ಗಸೂಚಿಗಳು ನವರಾತ್ರಿ ಹಾಗೂ ದುರ್ಗಾ ಪೂಜೆಯ ಆಚರಣೆಗೂ ಅನ್ವಯವಾಗುತ್ತದೆ. ದಸರಾ, ಪ್ರವಾಸಿ ಸ್ಥಳಗಳಲ್ಲಿ ಹಾಗೂ ಹೆಚ್ಚು ಜನ ಸಂದಣಿ ಸ್ಥಳಗಳಲ್ಲಿ ಈ ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ನಿಯಮಗಳು ಉಲ್ಲಂಘನೆಯಾದಲ್ಲಿ ದಂಡ ವಿಧಿಸಲಾಗುವುದು.
ಸರ್ಕಾರದ ಕೋವಿಡ್-19 ಮಾರ್ಗಸೂಚಿಗಳನ್ನು ಜಿಲ್ಲೆಯ ಸಾರ್ವಜನಿಕರು ತಪ್ಪದೇ ಪಾಲಿಸಿ ಜಿಲ್ಲೆಯಲ್ಲಿ ಕೋವಿಡ್-19 ರೋಗವನ್ನು ತಡೆಗಟ್ಟಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕಾಗಿ ತುಮಕೂರು ಉಪವಿಭಾಗಾಧಿಕಾರಿ ಅಜಯ್ ಮನವಿ ಮಾಡಿದ್ದಾರೆ.

(Visited 3 times, 1 visits today)

Related posts