ತುಮಕೂರಿನಲ್ಲಿ ಇದುವರೆಗೂ ಕಂಡುಬರದ ಕೊರೋನಾ ವೈರಸ್ ಪಾಸಿಟಿವ್!!

ತುಮಕೂರು:

      ತುಮಕೂರು ಜಿಲ್ಲೆಗೆ ವಿವಿಧ ದೇಶಗಳಿಂದ ಬಂದಿರುವಂತಹ 277 ಜನರನ್ನು ಕೊರೊನಾ ತಪಾಸಣೆಗೊಳಪಡಿಸಿ, ಅವರೆಲ್ಲರೂ ತೀವ್ರ ನಿಗಾವಣೆಯಲ್ಲಿ ವೈದ್ಯರ ಸಂಪರ್ಕದಲ್ಲಿದ್ದಾರೆ. ಜಿಲ್ಲೆಯಲ್ಲಿ ಇದುವರೆವಿಗೂ ಯಾವುದೇ ಕೊರೋನಾ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲವೆಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್‍ಕುಮಾರ್ ತಿಳಿಸಿದರು.

      ಅವರು ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಕರೆಯಲಾಗಿದ್ದ ಕೊರೊನಾ ಸೋಂಕು ತಡೆಯುವ ಮುಂಜಾಗ್ರತಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಆರೋಗ್ಯ ಇಲಾಖೆಯವರು ಹೊರಡಿಸಿರುವ “ನಿಮ್ಮನ್ನು ಮತ್ತು ಇತರರನ್ನು ರಕ್ಷಿಸಿ” ಎಂಬ ಕರ ಪತ್ರದೊಂದಿಗೆ ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ಭೇಟಿ ನೀಡಿ ಕೊರೋನಾ ಸೋಂಕಿನ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದ್ದು, ಪಾಲಿಕೆ ಹಾಗೂ ನಗರ ಸ್ಥಳೀಯ ವ್ಯಾಪ್ತಿಯಲ್ಲಿ ಮನೆಮನೆಗೆ ತೆರಳಿ ಕೊರೋನಾ ನಿಯಂತ್ರಣ ಮುಂಜಾಗ್ರತಾ ಕ್ರಮಗಳ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ವಿದೇಶದಿಂದ ಬರುವವರ ಬಗ್ಗೆ ಮಾಹಿತಿ:-

      ವಿದೇಶಗಳಿಂದ ಬಂದಿರುವ ಪ್ರಯಾಣಿಕರ ಬಗ್ಗೆ ಅಕ್ಕಪಕ್ಕದ ಮನೆಯ ಸಾರ್ವಜನಿಕರು ಮಾಹಿತಿಯನ್ನು ಜಿಲ್ಲಾ ಸಹಾಯವಾಣಿ ಕೇಂದ್ರದ ಆರೋಗ್ಯ ಸಹಾಯವಾಣಿ ಸಂಖ್ಯೆ: 0816-2252936ಕ್ಕೆ ಹಾಗೂ ಮೊ.ಸಂ.9449843179/ 9449843064ಕ್ಕೆ ಕರೆ ಮಾಡಿ ತಿಳಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

      ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಿಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಂತದಲ್ಲಿ ಜನಜಾಗೃತಿ ಮೂಡಿಸುವ ಬಗ್ಗೆ ತರಬೇತಿ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಟರಾಜ್ ಸಭೆಗೆ ತಿಳಿಸಿದರು.

      ಮನೆ ಮನೆಗೆ ಭೇಟಿ ನೀಡುವ ಕಾರ್ಯಕರ್ತರುಗಳ ಉಪಯೋಗಕ್ಕಾಗಿ 5ಸಾವಿರ ಮಾಸ್ಕ್‍ಗಳನ್ನು ಸಿದ್ಧಪಡಿಸಲು ವಿವಿಧ ಸ್ತ್ರೀಶಕ್ತಿ ಗುಂಪುಗಳಿಗೆ ತಿಳಿಸಲಾಗಿದೆ. ಗ್ರಾಮಪಂಚಾಯತಿ ಸದಸ್ಯರುಗಳ ಸಹಕಾರವನ್ನೂ ಸಹ ಪಡೆದು ಮನೆ-ಮನೆ ಭೇಟಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದರು.

      ಹೋಂ ಕ್ವಾರೆಂಟೈನ್‍ನಲ್ಲಿರುವವರ ತಪಾಸಣೆಗಾಗಿ ಹೋಗುವ ವೈದ್ಯರ ತಂಡದೊಂದಿಗೆ ಪೊಲೀಸ್ ಇಲಾಖೆಯ ಸಿಬ್ಬಂದಿಯವರೂ ಕೂಡ ಭೇಟಿಯಲ್ಲಿ ಸಾತ್ ನೀಡುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೊನ ವಂಶಿಕೃಷ್ಣ ಅವರು ತಿಳಿಸಿದರು. ಸಾರ್ವಜನಿಕರು ಯಾವುದೇ ಕಾರಣಕ್ಕೆ ಭಯಪಡದೆ ಮುನ್ನೆಚ್ಚರಿಕೆ ಕ್ರಮವಾಗಿ ಜನರಿಂದ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವುದು, ಜ್ವರ, ಕೆಮ್ಮು, ನೆಗಡಿ ಪೀಡಿತರು ಹತ್ತಿರದ ಆಸ್ಪತ್ರೆಗಳಲ್ಲಿ ತಪಾಸಣೆಗೊಳಪಡಬೇಕು ಎಂದರು.

      ಸಭೆಯಲ್ಲಿ ಪಾಲಿಕೆ ಆಯುಕ್ತ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಚಂದ್ರಿಕಾ, ಜಿಲ್ಲಾ ಸರ್ಜನ್ ಡಾ|| ವೀರಭದ್ರಯ್ಯ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ನೊಡೆಲ್ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 10 times, 1 visits today)

Related posts