ಜಯಮಂಗಲಿ ಕೃಷ್ಣ ಮೃಗ ವನ್ಯ ಧಾಮಕ್ಕೆ ಭಾರೀ ಅಗ್ನಿ ಅನಾಹುತ

ಮಧುಗಿರಿ:

      ತಾಲ್ಲೂಕಿನ ಜಯಮಂಗಲಿ ಕೃಷ್ಣ ಮೃಗ ವನ್ಯ ಧಾಮಕ್ಕೆ ಹೊಂದಿಕೊಂಡಿರುವ ಹುಲ್ಲುಗಾವಲು ಪ್ರದೇಶದಲ್ಲಿ ಭಾನುವಾರ ಭಾರೀ ಅಗ್ನಿ ಅನಾಹುತ ಸಂಭವಿಸಿದೆ.

      ಜಯಮಂಗಲಿ ಕೃಷ್ಣ ಮೃಗ ವನ್ಯಜೀವಿ ಧಾಮದಲ್ಲಿ ನೂರಾರು ಸಂಖ್ಯೆಯಲ್ಲಿ ಕೃಷ್ಣ ಮೃಗಗಳು ವಾಸಿಸುತ್ತಿವೆ. ರಾಜ್ಯದ ಕೆಲವೇ ಕಡೆಗಳಲ್ಲಿ ಕಂಡು ಬರುವ ಅಪರೂಪದ ಪಕ್ಷಿ ಸಂಪತ್ತುಗಳನ್ನು ಇಲ್ಲಿ ಕಾಣಬಹುದಾಗಿದ್ದು, ದೇಶ ವಿದೇಶಗಳಿಂದ ಪಕ್ಷಿ ಪ್ರಿಯರು ಇಲ್ಲಿಗೆ ಆಗಮಿಸುತ್ತಾರೆ.

      ಇಂತಹ ಪ್ರದೇಶದಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ನೂರಾರು ಎಕರೆ ಹುಲ್ಲುಗಾವಲು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ.
ಬೆಂಕಿಗಾಹುತಿಯಾಗಿರುವ ಪ್ರದೇಶವು ಕೃಷ್ಣ ಮೃಗಗಳು ವಿಹರಿಸುವ ಹುಲ್ಲುಗಾವಲಾಗಿದ್ದು, ಕೃಷ್ಣ ಮೃಗಗಳ ಜೀವಕ್ಕೆ ಆಪತ್ತುಂಟಾಗಿದೆ. ನೂರಾರು ಸಂಖ್ಯೆಯಲ್ಲಿ ಪಕ್ಷಿಗಳು, ಅವುಗಳ ಮೊಟ್ಟೆ, ಮರಿಗಳು ಸುಟ್ಟು ಕರಕಲಾಗಿವೆ.
ಬೆಂಕಿಯ ಕೆನ್ನಾಲಿಗೆಯು ರಸ್ತೆಗೂ ವ್ಯಾಪಿಸಿದೆ. ಸ್ಥಳೀಯರು ಬೆಂಕಿ ಗಮನಿಸಿ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರಾದರೂ ಗಂಟೆ ಕಳೆದರೂ ಅಗ್ನಿಶಾಮಕ ವಾಹನ ಸ್ಥಳಕ್ಕೆ ಬಂದಿರಲಿಲ್ಲ.

ಬದಲಾಗಿ ಅಗ್ನಿ ಶಾಮಕ ವಾಹನ ಕೆಟ್ಟು ನಿಂತಿದೆ ಎಂಬ ಉತ್ತರ ಬಂದಿತೆಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.
ಮುಖ್ಯವಾಗಿ ಇಷ್ಟೆಲ್ಲಾ ಆದರೂ ಸಮೀಪದಲ್ಲಿ ಇರಬೇಕಾದ ಕೃಷ್ಣಮೃಗ ಧಾಮದ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿರಲಿಲ್ಲ, ಸ್ಥಳೀಯರು ಮಾಹಿತಿ ನೀಡಿದ ಬಳಿಕವೂ ಇಲಾಖೆ ಸಿಬ್ಬಂದಿ ಗಮನ ಹರಿಸಲಿಲ್ಲ. ಇದರಿಂದಾಗಿ ನೂರಾರು ಎಕರೆ ಹುಲ್ಲುಗಾವಲು ಪ್ರದೇಶ ಅಗ್ನಿಗಾಹುತಿಯಾಗಿದ್ದು, ನೂರಾರು ಬಗೆಯ ಪ್ರಾಣಿ, ಪಕ್ಷಿಗಳು ಸಾವನ್ನಪ್ಪಿರುವ ಬಗ್ಗೆ ಪಕ್ಷಿ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.

     ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಡಿಎಫ್‍ಓ ಎಚ್.ಸಿ ಗಿರೀಶ್, “ಜಯಮಂಗಲಿ ಕೃಷ್ಣ ಮೃಗ ವನ್ಯಜೀವಿ ಧಾಮದ ಹೊರವಲಯದ ಕಂದಾಯ ಭೂಮಿಯಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿದ್ದಾರೆ. ಬೆಂಕಿಯು ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ವ್ಯಾಪಿಸದಂತೆ ತಡೆಯಲಾಗುವುದು” ಎಂದು ತಿಳಿಸಿದರು.

(Visited 6 times, 1 visits today)

Related posts

Leave a Comment