ಗಣೇಶ ವಿಗ್ರಹ ತಯಾರಕರಲ್ಲಿ ಮೂಡಿದ ಮಂದಹಾಸ..!

ತುಮಕೂರು:

      ಗಣೇಶ ಚೌತಿಯಂದು ಗೌರಿ-ಗಣೇಶರನ್ನು ಕೂರಿಸಿ ಸಾಂಪ್ರದಾಯಿಕವಾಗಿ ಹಬ್ಬ ಆಚರಣೆ ಮಾಡುವ ವಿಚಾರದಲ್ಲಿ ಸರ್ಕಾರ ವಿಧಿಸಿದ್ದ ನಿಬಂಧನೆಗಳು, ವಿಗ್ರಹಗಳ ತಯಾರಕ ಮತ್ತು ಮಾರಾಟಗಾರರಲ್ಲಿ ಉಂಟಾಗಿದ್ದು, ಗೊಂದಲಕ್ಕೆ ಮುಕ್ತಿ ಸಿಕ್ಕಿದಂತಾಗಿದೆ.

      ಮಾರ್ಚ್ ತಿಂಗಳಿನಲ್ಲಿ ವಕ್ಕರಿಸಿದ್ದ ಕೊರೋನಾ ಕೆಲ ದಿನಗಳಲ್ಲಿಯೇ ಉಲ್ಬಣವಾಗಿದ್ದರಿಂದ ಸಾರ್ವಜನಿಕ ಹಿತದೃಷ್ಠಿಯಿಂದ ಸೋಂಕು ತಡೆಗಟ್ಟುವ ಸಲುವಾಗಿ ವಿಧಿಯಿಲ್ಲದೆ ಲಾಕ್‍ಡೌನ್ ವಿಧಿಸಬೇಕಾಗಿದ್ದು ಅನಿವಾರ್ಯವಾಗಿತ್ತು. ಇದರಿಂದಾಗಿ ಸಾರ್ವಜನಿಕವಾಗಿ ಕೆಲಸವಿಲ್ಲದೆ ಹೊರ ಹೋಗದೇ ಮನೆಯಲ್ಲೇ ಕುಳಿತುಕೊಂಡಿರುವ ಪರಿಸ್ಥಿತಿಯುಂಟಾಗಿ ಜೀವನ ದುಸ್ತರವಾಗಿ ಮುಂದಿನ ದಾರಿ ಕಾಣದೆ ಜನ ತತ್ತರಿಸಿ ಹೋಗಿದ್ದಾರೆ. ದಿನ ಕಳೆದಂತೆ ಲಾಕ್‍ಡೌನ್ ಹಂತ ಹಂತವಾಗಿ ತೆರವುಗೊಳಿಸಿದ್ದರೂ ವ್ಯಾಪಾರ ವಹಿವಾಟುಗಳು ನಿರೀಕ್ಷಿಸಿದ ಮಟ್ಟ ತಲುಪಲೇ ಇಲ್ಲ, ಅನೇಕ ಕೈಗಾರಿಕೆಗಳು, ಅಂಗಡಿ ಮುಂಗಟ್ಟುಗಳು ಮುಚ್ಚಿದ ಕಾರಣ ಹಳ್ಳಿಗಳಿಂದ ನಗರಕ್ಕೆ ವಲಸೆ ಹೋಗಿದ್ದ ಸಾವಿರಾರು ಕುಟುಂಬಗಳು ಮರಳಿ ಗೂಡಿಗೆ ಎಂಬಂತೆ ತಮ್ಮ ಊರುಗಳಿಗೆ ಬರಲೇಬೇಕಾಯಿತು. ಹಲವರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು ಮತ್ತೆ ಹಲವರು ವೃತ್ತಿ ಆಧಾರಿತ ಕುಲ ಕಸುಬುಗಳನ್ನು ಆಶ್ರಯಿಸಬೇಕಾಯಿತು. ಅದರಲ್ಲಿ ಕುಂಬಾರಿಕೆ ವೃತ್ತಿದಾರರು ಮಡಕೆ ಕುಡಿಕೆಗಳನ್ನು ತಯಾರಿಸಿದ್ದರು, ಅದರಲ್ಲಿ ಶೇ 25 ರಷ್ಟು ಬಿಕರಿಯಾಗದೇ ಶೇಖರಿಸಲ್ಪಟ್ಟ ಸ್ಥಳದಲ್ಲೇ ಉಳಿದುಬಿಟ್ಟಿವೆ. ಇದರಿಂದಾಗಿ ಜೀವನ ನಿರ್ವಹಣೆ ದುಸ್ತರವಾಯಿತು.

      ಲಾಕ್‍ಡೌನ್ ಸಮಯದಲ್ಲಿ ಬೇರೆ ವೃತ್ತಿದಾರರಿಗೆ ನೀಡಿದಂತೆ ಕುಂಬಾರರಿಗೂ ನೆರವು ಬೇಕೆಂದು ಮನವಿ ಮಾಡಿದ್ದರೂ ಇದುವರೆವಿಗೂ ಸರ್ಕಾರದಿಂದ ಯಾವುದೇ ಸಹಾಯ, ಸಹಕಾರ ದೊರೆತಿರುವುದಿಲ್ಲ. ಇದು ಈ ಜನಾಂಗಕ್ಕೆ ಇರುವ ಶಾಪವೋ ಅಥವಾ ರಾಜಕಾರಣಿಗಳ ಬೇಜವಾಬ್ದಾರಿಯೋ ತಿಳಿಯದಾಗಿದೆ. ಇನ್ನು ಮುಂದಾದರೂ ಕಡೆ ಗಮನ ಹರಿಸಿ ಸರ್ಕಾರ ಈ ಜನಾಂಗದ ನೆರವಿಗೆ ಬರಬೇಕಾಗಿದೆ.

      ಕೆಲ ತಿಂಗಳುಗಳ ಮುಂಚಿತವಾಗಿ ಗಣೇಶ ಹಬ್ಬಕ್ಕೆಂದೇ ಗೌರಿ-ಗಣೇಶ ವಿಗ್ರಹಗಳನ್ನು ತಯಾರಿಸಿಕೊಂಡು ಮಾರಾಟ ಹೇಗೆಂಬ ಗೊಂದಲದಿಂದ ಸರ್ಕಾರದ ಮಾರ್ಗ ಸೂಚನೆಗಳಿಗೆ ಕಾಯುತ್ತಾ ಕುಳಿತಿರುವ ಕೆಲಸ ಇವರದ್ದಾಗಿತ್ತು. ಇದನ್ನರಿತ ತುಮಕೂರು ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷರಾದ ಎನ್. ಶ್ರೀನಿವಾಸ್, ಉಪಾಧ್ಯಕ್ಷರಾದ ಗುರುಮೂರ್ತಿ, ಕಾರ್ಯದರ್ಶಿ ಆದಿಮೂರ್ತಿ, ಖಜಾಂಚಿ ರಾಮಭೀಮಯ್ಯ ಮತ್ತು ಇತರರು ಗಣೇಶ ವಿಗ್ರಹಗಳ ಮಾರಾಟಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದ ನಂತರ ಮಾನ್ಯ ಜಿಲ್ಲಾಧಿಕಾರಿಗಳು ಸ್ಪಂದಿಸಿ ಆಗಸ್ಟ್ 17 ರಂದು ನಿಬಂಧನೆಗಳೊಂದಿಗೆ ತುಮಕೂರು ಜೂನಿಯರ್ ಕಾಲೇಜಿನ ಮೈದಾನದಲ್ಲಿ ಅವಕಾಶ ಕಲ್ಪಿಸಿ ಕೊಟ್ಟಿರುತ್ತಾರೆ. ಇದರಿಂದ ಗಣೇಶ ವಿಗ್ರಹಗಳ ಮಾರಾಟಗಾರರು ಸಂತದ ವ್ಯಕ್ತಪಡಿಸಿದ್ದಾರೆ.

(Visited 3 times, 1 visits today)

Related posts