ಗುಬ್ಬಿ: ಪ.ಪಂ. ಕಚೇರಿಗೆ ನಾಗರೀಕರಿಂದ ದಿಢೀರ್ ಮುತ್ತಿಗೆ!!

ಗುಬ್ಬಿ:

      ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಹೇರೂರು ಕೆರೆಯ ನೀರು ಯಾವುದೇ ಶುದ್ಧೀಕರಣವಾಗದೇ ನೇರ ಸಾರ್ವಜನಿಕರಿಗೆ ತಲುಪುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಪಟ್ಟಣದ ನಾಗರೀಕರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆಯಿತು.

      ಕಳೆದ ಮೂರು ತಿಂಗಳಿಂದ ಕೆಂಪು ಬಣ್ಣದಿಂದ ಕೂಡಿದ ನೀರು ಸಾರ್ವಜನಿಕರಿಗೆ ಸರಬರಾಜು ಆಗುತ್ತಿದೆ. ಇತ್ತೀಚೆಗೆ ಸಂಪೂರ್ಣ ಅಶುದ್ಧ ನೀರು ಕಂಡು ಹೌಹಾರಿದ ಸ್ಥಳೀಯರು ವಾಟ್ಸ್‍ಪ್ ಮೂಲಕ ತಮ್ಮ ಮನೆಯ ಸಂಪಿನ ನೀರಿನ ಪೋಟೋ ಹಾಕಿ ಸಿಡಿಮಿಡಿ ವ್ಯಕ್ತಪಡಿಸಿದ್ದರು.

      ಈ ಅಶುದ್ಧ ನೀರು ಬಳಸಿದರೂ ಅನಾರೋಗ್ಯ ಕಟ್ಟಿಟ್ಟ ಬುತ್ತಿ ಎಂದು ಆರೋಪಿಸಿ ಪಟ್ಟಣದ ಕೆಲ ಪ್ರಜ್ಞಾವಂತ ನಾಗರೀಕರು ಸಾಮಾಜಿಕ ಜಾಲತಾಣದಲ್ಲೇ ಇಡೀ ದಿನ ಚಾಟಿಂಗ್ ಮೂಲಕ ವಿನೂತನ ರೀತಿ ಆಕ್ರೋಶ ಹೊರಹಾಕಿದ್ದರು. ಸೂಕ್ತ ಉತ್ತರ ಸಿಗದ ಕಾರಣ ಮುಂದುವರೆದು ಸೋಮವಾರ ಬೆಳಿಗ್ಗೆ ಪಪಂ ಕಚೇರಿಗೆ ದಿಢೀರ್ ಮುತ್ತಿಗೆ ಹಾಕಿದ ನಾಗರೀಕರ ದಂಡು ಮುಖ್ಯಾಧಿಕಾರಿಗಳಿಗೆ ಮುತ್ತಿಗೆ ಹಾಕಿ ಪ್ರಶ್ನಿಸಿದರು.

      ಜಲ ಶುದ್ಧೀಕರಣ ಘಟಕ ಬಹಳ ತಿಂಗಳಿಂದ ಕೆಲಸ ಮಾಡುತ್ತಿಲ್ಲ. ನೀರು ಶುದ್ಧಗೊಳಿಸದೇ ಕೆರೆಯ ನೀರು ನೇರವಾಗಿ ಸಾರ್ವಜನಿಕರ ಸಂಪು ಸೇರುತ್ತಿದೆ. ಕ್ಲೋರಿನ್ ಮತ್ತು ಆಲಂ ಬಳಕೆ ಕೂಡಾ ವೈಜ್ಞಾನಿಕವಾಗಿ ನಡೆದಿಲ್ಲ. ಈ ನೀರು ಕುಡಿದರೆ ಕೊರೊನಾಗಿಂತ ಭಯಾನಕ ರೋಗಕ್ಕೆ ತುತ್ತಾಗುತ್ತೇವೆ ಎಂದು ಕಿಡಿಕಾರಿದರು.

      ಈ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ ಎಂಬ ಕಿಡಿನುಡಿ ಅಲ್ಲಿ ವ್ಯಕ್ತವಾಯಿತು. ಪ್ರತಿ ತಿಂಗಳು 125 ರೂಗಳ ನೀರಿನ ತೆರಿಗೆ ಕಟ್ಟಿಸಿಕೊಳ್ಳುವ ಸ್ಥಳೀಯ ಪಟ್ಟಣ ಪಂಚಾಯಿತಿ ಶುದ್ಧ ನೀರು ಕೊಡಲು ಮಾತ್ರ ನಿರ್ಲಕ್ಷ್ಯವಹಿಸಿದರೆ ಯಾರನ್ನು ಕೇಳುವುದು, ಈ ನೀರಿನ ಘಟಕ ದುರಸ್ಥಿಗೆ ಅಧಿಕಾರಿಗಳು ಜನಪ್ರತಿನಿಧಿಗಳು ನಾಮಕಾವಸ್ಥೆ ಭೇಟಿ ನೀಡಿರುವುದು ಎಲ್ಲರಿಗೂ ತಿಳಿದಿದೆ ಎಂದು ದೂರಿದರು.

      ನಾಗರೀಕರು ಹಾಗೂ ಮುಖಂಡರ ಪ್ರಶ್ನೆ ಆಲಿಸಿದ ಪಪಂ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಜಲ ಶುದ್ಧೀಕರಣ ಘಟಕದಲ್ಲಿ ತಾಂತ್ರಿಕ ಸಮಸ್ಯೆಯನ್ನು ತಂತ್ರಜ್ಞರಿಂದ ತಿಳಿದುಕೊಂಡಿದ್ದೇನೆ. ಕಳೆದ 20 ವರ್ಷದಿಂದ ಈ ಸಮಸ್ಯೆ ಹಾಗೆಯೇ ಇದ್ದು ಸಂಪೂರ್ಣ ದುರಸ್ಥಿಗೆ ಕ್ರಿಯಾಯೋಜನೆ ಸಿದ್ದಗೊಳಿಸಿ 7.19 ಲಕ್ಷ ರೂಗಳಲ್ಲಿ ಫಿಲ್ಟರ್ ಮೀಡಿಯಾ ಬದಲಾವಣೆ ಕಾಮಗಾರಿಗೆ ಜಿಲ್ಲಾಧಿಕಾರಿಗಳ ಮೂಲಕ ಅನುಮೋದನೆ ದೊರೆಕಿದೆ. ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್ 5 ರೊಳಗೆ ಕಾಮಗಾರಿ ಆರಂಭ ಮಾಡಿ ನೀರಿನ ಘಟಕ ಸರಿಪಡಿಸಲಾಗುವುದು. ಜತೆಗೆ ಅಲ್ಲಿಯವರೆಗೆ ಪಟ್ಟಣಕ್ಕೆ ಶುದ್ಧ ನೀರು ಕೊಡಲು ಕ್ರಮವಹಿಸಲಾಗುವುದು. ಬೋರ್ ನೀರು ಬಳಕೆಗೆ ಆದ್ಯತೆ ನೀಡಿ ಸದ್ಯದ ಪರಿಸ್ಥಿತಿ ಸರಿದೂಗಿಸುವ ಭರವಸೆ ನೀಡಿದರು.

      ಈ ಸಂದರ್ಭದಲ್ಲಿ ಮುಖಂಡರಾದ ಎಚ್.ಟಿ.ಭೈರಪ್ಪ, ಸಿ.ಆರ್.ಶಂಕರ್‍ಕುಮಾರ್, ಜಿ.ಎಸ್.ಮಂಜುನಾಥ್, ನಾಗಸಂದ್ರ ವಿಜಯ್‍ಕುಮಾರ್, ಹನುಮಂತಯ್ಯ, ಬಿ.ಲೋಕೇಶ್, ಜಿ.ಆರ್.ರಮೇಶ್, ಪಪಂ ಸದಸ್ಯರಾದ ರೇಣುಕಾಪ್ರಸಾದ್, ಶೌಕತ್ ಆಲಿ, ಕುಮಾರ್ ಇದ್ದರು.

(Visited 18 times, 1 visits today)

Related posts

Leave a Comment