ಗುಬ್ಬಿ: ಶುದ್ಧೀಕರಣವಾಗದೇ ಮನೆಗಳಿಗೆ ಹೇರೂರು ಕೆರೆಯ ನೀರು!!

ಗುಬ್ಬಿ:

      ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಹೇರೂರು ಕೆರೆಯ ನೀರು ಯಾವುದೇ ಶುದ್ಧೀಕರಣವಾಗದೇ ನೇರ ಸಾರ್ವಜನಿಕರಿಗೆ ತಲುಪುತ್ತಿದೆ.

      ಈ ಅಶುದ್ದ ನೀರು ಬಳಸಿದರೂ ಅನಾರೋಗ್ಯ ಕಟ್ಟಿಟ್ಟ ಬುತ್ತಿ ಎಂದು ಆರೋಪಿಸಿ ಪಟ್ಟಣದ ಕೆಲ ಪ್ರಜ್ಞಾವಂತ ನಾಗರೀಕರು ಸಾಮಾಜಿಕ ಜಾಲತಾಣದ ಮೂಲಕ ಇಡೀ ದಿನ ಚಾಟಿಂಗ್ ಮೂಲಕ ಕೊರೋನಾ ಸಂಕಷ್ಟದಲ್ಲಿ ವಿನೂತನ ರೀತಿ ಪ್ರತಿಭಟಿಸಿದ ಘಟನೆ ಭಾನುವಾರ ಕಂಡುಬಂತು.

      ಪಟ್ಟಣದ ಹಲವು ಬಡಾವಣೆಗೆ ಬೆಳಿಗ್ಗೆ ಸರಬರಾಜು ಆದ ಹೇಮಾವತಿ ನೀರು ಕೆಂಪು ಮಣ್ಣಿನಿಂದ ಕೂಡಿದ್ದು ಕಂಡು ಫೋಟೋ ತೆಗೆದು ವಾಟ್ಸ್‍ಪ್ ಮೂಲಕ ಚರ್ಚಿ ಆರಂಭಿಸಿದ ಕೆಲವರ ಆಕ್ರೋಶಕ್ಕೆ ಸಾಥ್ ನೀಡಿದ ಬಹಳ ಮಂದಿ ಸಾಮಾಜಿಕ ಜಾಲತಾಣದಲ್ಲೇ ತಮ್ಮೆಲ್ಲಾ ಆಕ್ರೋಶ ಹೊರಹಾಕಿದರು. ಜಲ ಶುದ್ದೀಕರಣ ಘಟಕ ಬಹಳ ತಿಂಗಳಿಂದ ಕೆಲಸ ಮಾಡುತ್ತಿಲ್ಲ. ನೀರು ಶುದ್ದಗೊಳಿಸದೇ ಕೆರೆಯ ನೀರು ನೇರವಾಗಿ ಸಾರ್ವಜನಿಕರ ಸಂಪು ಸೇರುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ತಲೆ ಕಡೆಸಿಕೊಂಡಿಲ್ಲ ಎಂದ ಕಿಡಿನುಡಿ ವ್ಯಕ್ತವಾಯಿತು.

      ಪಟ್ಟಣದಲ್ಲಿ ವಾಸವಿಲ್ಲದ ಅಧಿಕಾರಿಗಳು ಮೊದಲು ಈ ನೀರು ಕುಡಿಯಬೇಕು. ಹಾಗಾಗಿ ಪಟ್ಟಣದಲ್ಲಿನ ಎಲ್ಲಾ ಸರ್ಕಾರಿ ಕಚೇರಿಗೆ ಪಟ್ಟಣ ಪಂಚಾಯಿತಿ ಒದಗಿಸುವ ನೀರು ಕುಡಿಯಲು ವ್ಯವಸ್ಥೆ ಮಾಡುವುದು ಮತ್ತು ಇದೇ ನೀರು ಅಧಿಕಾರಿಗಲು ಮತ್ತು ಸಿಬ್ಬಂದಿಗೆ ಕುಡಿಸಲು ಒಂದು ಆಂದೋಲನ ಮಾಡಲು ಸಾಮಾಜಿಕ ಕಾರ್ಯಕರ್ತ ನಾಗಸಂದ್ರ ವಿಜಯ್‍ಕುಮಾರ್ ಕರೆ ನೀಡಿದರು. ಸಾಮಾಜಿಕ ಜಾಲತಾಣದಲ್ಲೇ ಇವರ ಕರೆಗೆ ಬೆಂಬಲ ಸೂಚಿಸಿದ ಹಲವಾರು ಮಂದಿ ಸೋಮವಾರ ಈ ಆಂದೋಲನಕ್ಕೆ ಚಾಲನೆ ನೀಡಲು ಸನ್ನದ್ದರಾಗಿದ್ದಾರೆ. ವಾಟ್ಸ್‍ಪ್ ಸಂದೇಶದಲ್ಲೇ ಸುಮಾರು ಐದು ತಾಸು ನಿರಂತರವಾಗಿ ಚರ್ಚೆ ನಡೆಸಿದ ಹತ್ತಾರು ಮಂದಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.

      ಹೇರೂರು ಕೆರೆ ನೀರು ನೇರವಾಗಿ ಮನೆಯ ಸೊಂಪಿಗೆ ಬಂದಿದ್ದು, ಆರ್‍ಓ ಅಳವಡಿಸಿಕೊಂಡವರು ನೀರು ಶುದ್ದೀಕರಿಸಿ ಕುಡಿಯಲು ಮುಂದಾದರೆ, ಹಲವು ಬಡ ಕುಟುಂಬಗಳು ಈ ಹೇಮೆ ನೀರನ್ನೇ ಕುಡಿಯಲು ಮತ್ತು ಅಡುಗೆಗೆ ಬಳಸುತ್ತಾರೆ. ಈಗಾಗಲೇ ಕೊರೋನಾದಿಂದ ಕಂಗೆಟ್ಟ ಜನ ಅಶುದ್ದ ನೀರು ಕುಡಿದು ಇನ್ಯಾವ ಕಾಯಿಲೆಗೆ ತುತ್ತಾಗಬೇಕೂ ತಿಳಿಯುತ್ತಿಲ್ಲ. ಆರ್‍ಓ ಬಳಸುವವರಿಗೆ ಫಿಲ್ಟರ್ ಬದಲಿಸುವ ಸ್ಥಿತಿ ಜೇಬಿಗೆ ಬಿದ್ದ ಕತ್ತರಿಯಾಗಿದೆ. ಮೂರು ತಿಂಗಳು ಬರುವ ಫಿಲ್ಟರ್ ಒಂದೇ ತಿಂಗಳಲ್ಲಿ ಬದಲಿಸುವ ಅನಿವಾರ್ಯ ಈ ಕೆರೆ ನೀರು ಮಾಡಿದೆ. ಈ ಬಗ್ಗೆ ಕೇಳಿದರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೆರೆಯಲ್ಲಿ ಮೀನು ಹಿಡಿಯುವ ಕಾರಣಕ್ಕೆ ಹೀಗೆ ಆಗಿದೆ ಎಂಬ ಹಾಸ್ಯಾಸ್ಪದ ಹೇಳಿಕೆ ನೀಡುತ್ತಾರೆ ಎಂದು ಬಿಜೆಪಿ ಮುಖಂಡ ಭೈರಪ್ಪ ದೂರಿದರು.

      ಕೆಲ ಗ್ರೂಪಿನಲ್ಲಿ ಇಷ್ಟೆಲ್ಲಾ ಚರ್ಚೆ ಗಮನಿಸದ ಅಧಿಕಾರಿಗಳು ಜಾಣ ಮೌನವಹಿಸಿದ್ದು ಸಹ ಚರ್ಚೆ ಮಾಡಿದ ಮಂದಿ ವಿನೂತನ ಹೋರಾಟಕ್ಕೆ ನಾಂದಿ ಹಾಡಿ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಪಟ್ಟಣದ ಹೇರೂರು ಕೆರೆ ನೀರು ಕುಡಿಯಲು ವ್ಯವಸ್ಥೆ ಮಾಡಿ ಮುಖ್ಯಾಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳಿಗೆ ಪ್ರಶ್ನಿಸಲು ಮುಂದಾಗಿದ್ದಾರೆ.

      ಸಾಮಾಜಿಕ ಜಾಲತಾಣದ ಚರ್ಚೆ ಸಾರ್ಥಕತೆ ಪಡೆಯಲು ಇಂದು ನೆಲ್ಲಿಯಲ್ಲಿ ಬಂದ ನೀರನ್ನು ಬಾಟಿಲಿನಲ್ಲಿ ಹಿಡಿದು ಅಧಿಕಾರಿಗಳಿಗೆ ಕುಡಿಸಲು ಮುಂದಾದ ಕೆಲ ಪ್ರಜ್ಞಾವಂತರ ತಂಡ ಶುದ್ದೀಕರಣ ಘಟಕ ದುರಸ್ಥಿಗೆ ಒತ್ತಾಯಿಸಲಿದೆ.

(Visited 11 times, 1 visits today)

Related posts

Leave a Comment