ಮುಚ್ಚಿರುವ ರಸ್ತೆ ತೆರವುಗೊಳಿಸಲು ತಹಶೀಲ್ದಾರ್‍ಗೆ ಮನವಿ!!

ಗುಬ್ಬಿ:

      ಪಟ್ಟಣದ ಪ್ರಮುಖ ಬಡಾವಣೆಗೆ ಓಡಾಡದಂತೆ ಮುಚ್ಚಿರುವ ರಸ್ತೆ ತೆರವುಗೊಳಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡುವುದು ಅಥವಾ ಪರ್ಯಾಯ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದ ತಹಸೀಲ್ದಾರ್ ಮತ್ತು ಪಪಂ ಅಧಿಕಾರಿಗಳು ರಸ್ತೆ ವಿವಾದಕ್ಕೆ ತೆರೆ ಎಳೆಯದೇ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಹಾಗೂ ಕೆಲ ಪಪಂ ಸದಸ್ಯರು ದಿಢೀರ್ ಪ್ರತಿಭಟನೆ ನಡೆಸಿದರು.

      ಪಟ್ಟಣದ ನಾಗಲಿಂಗೇಶ್ವರ ದೇವಾಲಯದ ಸಮೀಪದಲ್ಲಿ ಹೆದ್ದಾರಿಗೆ ಹೊಂದಿಕೊಂಡಂತೆ ಹೊಸ ಬಡಾವಣೆಯಲ್ಲಿ ನಿರ್ಮಿಸಲಾದ ರಸ್ತೆಯು ಇದು ನಮ್ಮ ಖಾಸಗಿ ಆಸ್ತಿ ಎಂದು ಒಂದು ಕುಟುಂಬದ ಸಹೋದರರು ಸಾರ್ವಜನಿಕ ರಸ್ತೆ ಮುಚ್ಚಿದ್ದಾರೆ ಎಂದು ಕಳೆದ 15 ದಿನಗಳ ಹಿಂದೆ ವಾದವಿವಾದಗಳು ನಡೆದಿತ್ತು. ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡುವುದಾಗಿ ಸಮಸ್ಯೆ ಸ್ಥಳಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ್ ಡಾ.ಪ್ರದೀಪ್‍ಕುಮಾರ್ ಹಿರೇಮಠ ಮತ್ತು ಪಪಂ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಒಂದು ವಾರದಲ್ಲಿ ಇತ್ಯರ್ಥ ಮಾಡುವ ಭರವಸೆ ನೀಡಿದ್ದರು. 15 ದಿನಗಳು ಕಳೆದರೂ ಸಾರ್ವಜನಿಕ ರಸ್ತೆಗೆ ಇದ್ದ ಅಡ್ಡಿ ತೆರವು ಮಾಡಲಿಲ್ಲ. ಪರ್ಯಾಯ ರಸ್ತೆಯನ್ನೂ ಸಹ ಮಾಡಿಕೊಡಲಿಲ್ಲ ಎಂದು ಅಲ್ಲಿನ ಸುಮಾರು 40 ಮನೆಗಳ ಮಾಲೀಕರು, ಕೆಲ ಪಪಂ ಸದಸ್ಯರು ಹಾಗೂ ಮುಖಂಡರು ದಿಢೀರ್ ಪ್ರತಿಭಟನೆ ನಡೆಸಿದರು.

      ಸುಮಾರು ಎರಡು ತಾಸು ವಿವಾದಿತ ರಸ್ತೆ ಬಳಿ ಧರಣಿ ನಡೆಸಿದ ಪ್ರತಿಭಟನಾಕಾರರು ತಾಲ್ಲೂಕು ಆಡಳಿತ ನಿರ್ಲಕ್ಷ್ಯಕ್ಕೆ ಧಿಕ್ಕಾರ ಕೂಗಿದರು. ಸುಮಾರು ಪ್ರಮುಖ ಮೂರು ಬಡಾವಣೆಗೆ ಸಂಪರ್ಕಿಸುವ ಈ ರಸ್ತೆ ಸಾರ್ವಜನಿಕರಿಗೆ ಅತ್ಯವಶ್ಯವಾಗಿದೆ. ರಸ್ತೆ ಬಳಕೆಗೆ ಅನುವು ಮಾಡಿಕೊಡಿ ಅಥವಾ ಪರ್ಯಾಯ ಮತ್ತೊಂದು ಹೊಸ ರಸ್ತೆ ನಿರ್ಮಿಸಿಕೊಡಲು ಒತ್ತಾಯಿಸಿದರು. ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್ ಡಾ,ಪ್ರದೀಪ್‍ಕುಮಾರ್ ಹಾಗೂ ಸಿಪಿಐ ರಾಮಕೃಷ್ಣಯ್ಯ ಇದರ ಮೂಲ ದಾಖಲೆ ಪರಿಶೀಲಿಸಿ ರಸ್ತೆ ಹುಡುಕಲು 20 ದಿನಗಳ ಗಡುವು ಕೇಳಿ, ಸದ್ಯಕ್ಕೆ 8 ಅಡಿಗಳ ರಸ್ತೆ ಸಾರ್ವಜನಿಕರಿಗೆ ತಾತ್ಕಾಲಿಕ ಉಪಯೋಗ ಮಾಡಲು ರಸ್ತೆ ಮುಚ್ಚಿರುವ ಒಂದು ಕುಟುಂಬದ ಸಹೋದರರನ್ನು ಒಪ್ಪಿಸಿ ಸದ್ಯದ ಪ್ರತಿಭಟನೆಗೆ ತೆರೆ ಎಳೆದರು.

      ಈ ಸಂದರ್ಭದಲ್ಲಿ ಪಪಂ ಮಾಜಿ ಸದಸ್ಯ ಜಿ.ಸಿ.ಲೋಕೇಶ್‍ಬಾಬು, ಸ್ಥಳೀಯ ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ, ಪಪಂ ಸದಸ್ಯರಾದ ಕುಮಾರ್, ರೇಣುಕಾಪ್ರಸಾದ್, ಶೌಕತ್‍ಆಲಿ, ವಕೀಲ ಕೆ.ಜಿ.ನಾರಾಯಣ್, ಮುಖಂಡರಾದ ಕೆ.ಆರ್.ವೆಂಕಟೇಶ್, ಭರತ್‍ಗೌಡ, ಬಾಬು, ಜಿ.ವಿ.ಮಂಜುನಾಥ್ ಇತರರು ಇದ್ದರು.

(Visited 4 times, 1 visits today)

Related posts