ಗುಬ್ಬಿ : ಶಾಸಕ ಎಸ್.ಆರ್.ಶ್ರೀನಿವಾಸ್ ರಿಂದ ಗುಬ್ಬಿಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ!!

ಗುಬ್ಬಿ :

      ತಾಲ್ಲೂಕಿನ ಪ್ರಮುಖ ಕೆರೆಗಳಾದ ಕಡಬ ಮತ್ತು ಗುಬ್ಬಿ ಅಮಾನಿಕೆರೆಗೆ ನಿರಂತರವಾಗಿ ಒಂದು ತಿಂಗಳು ಕಾಲ ಹೇಮಾವತಿ ನೀರು ಹರಿಸಿಕೊಳ್ಳಲು ಜಲ ನಿಗಮ ಮತ್ತು ಜಿಲ್ಲಾಡಳಿತದೊಂದಿಗೆ ಚರ್ಚಿಸಿದ್ದೇನೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

      ತಾಲ್ಲೂಕಿನ ಗಡಿಭಾಗದ ಸಿಂಗಿಪುರ ಎಸ್ಕೇಪ್ ಗೇಟ್ ತೆರೆದು ಎಂ.ಎಚ್.ಪಟ್ಟಣ ಮತ್ತು ಗುಬ್ಬಿಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜನವರಿ ಮಾಹೆಯವರೆಗೆ ಹೇಮೆ ಹರಿಯಲಿದೆ. ನಮ್ಮ ತಾಲ್ಲೂಕಿನ ಉಳಿದ ಕೆರೆಗಳಿಗೆ ಬೇಕಿರುವ 1.50 ಟಿಎಂಸಿ ನೀರನ್ನು ಹರಿಸಿಕೊಳ್ಳಲು ಚಿಂತಿಸಲಾಗಿದೆ. ಡಿಸೆಂಬರ್ ಅಂತ್ಯಕ್ಕೆ ಕಡಬ ಮತ್ತು ಗುಬ್ಬಿಕೆರೆ ಭಾಗಶಃ ತುಂಬಿಸುವ ಕೆಲಸ ಮಾಡಲಾಗುವುದು ಎಂದರು.

       ನೀರಿನ ರಾಜಕಾರಣ ನಾನು ಎಂದೂ ನಡೆಸಿಲ್ಲ. ಕಳೆದ 20 ವರ್ಷದಿಂದ ಹೇಮಾವತಿ ನೀರು ಹರಿಸಿಕೊಳ್ಳಲು ಹೋರಾಟವನ್ನು ನಡೆಸಿದ್ದೇನೆ. ಜತೆಗೆ ಕಾನೂನಾತ್ಮಕವಾಗಿ ಕೂಡಾ ನೀರು ಹರಿಸಿಕೊಂಡಿದ್ದೇನೆ. ಚುನಾವಣಾ ಸಂದರ್ಭದಲ್ಲಿ ನೀರಿನ ಹೋರಾಟವನ್ನು ಬಳಸಿಕೊಳ್ಳುವ ಕೊಳಕು ರಾಜಕಾರಣ ನಾನು ಮಾಡುವುದಿಲ್ಲ. ನಾಲೆ ಮೇಲೆ ಉಳಿದುಕೊಂಡು ಹಗಲಿರುಳು ಅಲ್ಲಿಯೇ ಅಡುಗೆ ತಯಾರಿಸಿ ನೀರು ಹರಿಸಿಕೊಂಡ ಬಗ್ಗೆ ಜನರಿಗೆ ತಿಳಿದಿದೆ. ಪ್ರಚಾರಕ್ಕೆ ನಾನು ಎಂದೂ ಹೇಮೆ ನೀರು ಬಳಸಿಕೊಂಡಿಲ್ಲ. ಗಂಗೆಶಾಪ ಎಂದಿಗೂ ತಟ್ಟಿಲ್ಲ. ಕಳೆದ ವರ್ಷ ಮಳೆಯೇ ಬಾರದೇ ಡ್ಯಾಂನಲ್ಲಿ ನೀರು ಇರಲಿಲ್ಲ. ಅಂತಹ ಬರಗಾಲದಲ್ಲೂ ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ನೀರು ಹರಿಸಿದ್ದೆ. ಉಳಿದ ಕೆರೆಗಳು ಭಾಗಶಃ ತುಂಬಿಸಿಕೊಂಡಿದ್ದೆ ಎಂದು ತಿಳಿಸಿದರು.

      ಸಣ್ಣಪುಟ್ಟ ಕೆರೆಗಳಾದ ಹೊದಲೂರು, ಬಾಗೂರು. ಕಿಟ್ಟದಕುಪ್ಪೆ, ದೊಡ್ಡನೆಟ್ಟಗುಂಟೆ, ಲಕ್ಕೇನಹಳ್ಳಿ ಕೆರೆಗಳಿಗೆ ನೀರು ಹರಿದಿದೆ. ಕೆಲವು ಈ ವಾರದಲ್ಲಿ ಭರ್ತಿಯಾಗಲಿದೆ. ಉಳಿದಂತೆ ಕಡಬ ಕೆರೆಗೆ ಈ ದಿನ ಕಾರೇಹಳ್ಳಿ ಎಸ್ಕೇಪ್ ಗೇಟ್ ಎತ್ತಲಾಗಿದೆ. ಶಿರಾ ತಾಲ್ಲೂಕಿಗೆ ಹೋಗುವ ನೀರಿನ ಪ್ರಮಾಣ ಅರಿತು ಗೇಟ್ ತೆರೆದು ಕಡಬದತ್ತ ಹರಿಸಲಾಗುತ್ತಿದೆ. ಯಾವ ಭಾಗದಿಂದ ನೀರು ಹರಿಸಿಕೊಳ್ಳಬೇಕು ಎಂಬುದು ಚೆನ್ನಾಗಿ ತಿಳಿದಿದ್ದು, ಎಲ್ಲಾ ಗೇಟ್‍ಗಳ ಕೀ ನನ್ನ ಬಳಿ ಇದೆ. ಯಾವ ಕೆರೆಗೆ ಯಾವ ಹಂತದಲ್ಲಿ ನೀರು ಹರಿಸಿಕೊಳ್ಳಬೇಕು. ಎಲ್ಲಿಂದ ಹೇಗೆ ನೀರು ಹರಿಯುತ್ತದೆ ಎಂಬ ಅರಿವು ನನಗಿದೆ. ವಿನಾಕಾರಣ ಕಳೆದ ವರ್ಷ ಒರ್ವನನ್ನು ನಾಲೆಗೆ ಬಲಿ ನೀಡಲಾಗಿತ್ತು. ನೀರಿಗಾಗಿ ಯಾರೇ ಹೋರಾಟ ಮಾಡಿದರೂ ಪ್ರಯೋಜನವಿಲ್ಲ. ಖುದ್ದು ನಾನು ಹಾಜರಾಗಿ ಗೇಟ್ ತೆರೆದು ನೀರು ಹರಿಸುತ್ತೇನೆ ಎಂದು ನೀರಿನ ರಾಜಕಾರಣ ಮಾಡುವರಿಗೆ ಟಾಂಗ್ ಕೊಟ್ಟರು.

      ಉಪಚುನಾವಣೆ ಬಗ್ಗೆ ನನಗೆ ಅರಿವಿಲ್ಲ. ಚುನಾವಣಾ ಕ್ಷೇತ್ರಗಳಿಗೆ ನನ್ನನ್ನು ಉಸ್ತುವಾರಿಯಾಗಿ ನೇಮಿಸಿಲ್ಲ. ನಾನು ಪ್ರಬುದ್ದ ರಾಜಕಾರಣಿ ಅಲ್ಲ. ಯೋಗ್ಯತೆ ನೋಡಿ ಚುನಾವಣಾ ನಿರ್ವಹಣೆ ಜವಾಬ್ದಾರಿ ನೀಡುತ್ತಾರೆ. ನಾನು ನನ್ನ ಕ್ಷೇತ್ರ ಬಿಟ್ಟು ಎಲ್ಲೂ ಹೋಗಿಲ್ಲ. ಯಾವ ಕ್ಷೇತ್ರದಲ್ಲಿ ಹೇಗೆ ಚುನಾವಣೆ ನಡೆದಿದೆ ನನಗೆ ತಿಳಿದಿಲ್ಲ ಎಂದು ಉಪಚುನಾವಣೆ ಬಗ್ಗೆ ನಿರಾಸಕ್ತಿ ತೋರಿದ ಶಾಸಕರು ದೊಡ್ಡ ರಾಜಕಾರಣಿ ಎಂದು ಬಿಂಬಿಸಿಕೊಂಡಿದ್ದರೆ ನಾನು ರೈತರ ಮಧ್ಯೆ ನೀರು ಹರಿಸುವ ಕೆಲಸ ಮಾಡುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಚುನಾವಣಾ ವಿಶ್ಲೇಷಣೆ ನೀಡುವ ಪ್ರಬುದ್ದ ನಾನಲ್ಲ. ಯಾರು ಗೆಲ್ಲುತ್ತಾರೆ ಭವಿಷ್ಯ ನಾನು ಹೇಳೋದಿಲ್ಲ ಎಂದರು.

      ಈ ಸಂದರ್ಭದಲ್ಲಿ ಮುಖಂಡರಾದ ಕೆ.ಆರ್.ವೆಂಕಟೇಶ್, ಎಚ್.ಡಿ.ರಂಗಸ್ವಾಮಿ, ಯು.ರಾಜಣ್ಣ, ಸಿ.ಜಿ.ಲೋಕೇಶ್, ಎಂ.ಎಚ್.ಪಟ್ಟಣ ವೆಂಕಟೇಶ್, ಕೇಬಲ್‍ರಾಜು, ಶಂಕರೇಗೌಡ, ಲಕ್ಷ್ಮೀಕಾಂತ್, ಪಪಂ ಸದಸ್ಯ ಕುಮಾರ್ ಇತರರು ಇದ್ದರು.

 

(Visited 70 times, 1 visits today)

Related posts

Leave a Comment