ಜೆ.ಡಿ.ಎಸ್ ಶಾಸಕರ ಪ್ರಾಬಲ್ಯವಿರುವ ಗುಬ್ಬಿ ಪಟ್ಟಣದಲ್ಲಿ ಬಿ.ಜೆ.ಪಿ. ಜಯಭೇರಿ

ತುಮಕೂರು:

       ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಇಂದು ಚುನಾವಣೆ ನಡೆದು ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ ಮೀಸಲು ಇದ್ದ ಕಾರಣ ಬಿಜೆಪಿಯ ಅಭ್ಯರ್ಥಿ ಒಬ್ಬರೇ ಇದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸದಸ್ಯ ಜಿ.ಎನ್.ಅಣ್ಣಪ್ಪಸ್ವಾಮಿಯವರು ಅವಿರೋಧವಾಗಿ ಆಯ್ಕೆ ಯಾಗಿದ್ದು, ಇದರಿಂದ ಪಟ್ಟಣ ಪಂಚಾಯಿತಿಯು ಭಾರತೀಯ ಜನತಾ ಪಾರ್ಟಿಯ ಪಾಲಾಯಿತು.

      ಪಟ್ಣ ಪಂಚಾಯಿತಿಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಬಿಜೆಪಿ ಅಧಿಕಾರವನ್ನು ಹಿಡಿದಿದ್ದು, ಇದರಿಂದ ಜೆಡಿಎಸ್ ಪಕ್ಷದ ಶಾಸಕರಿಗೆ ಹಿನ್ನೆಡೆಯಾಗಿದ್ದು, ಇದರಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿ ಸವಿತಾ ಅವರು ಸಾಮಾನ್ಯ ಮಹಿಳಾ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಥಿಸಿದ್ದರೂ ಸಹ ಒಂದು ಮತವನ್ನು ಪಡೆದು ಸೋಲನ್ನು ಅನುಭವಿಸುವಂತಹ ಸ್ಥಿತಿಯನ್ನು ಸ್ಥಳೀಯ ಶಾಸಕ ಎಸ್ ಆರ್ ಶ್ರೀನಿವಾಸ್ ಅವರು ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿ ಪಕ್ಷದ ಅಭ್ಯರ್ಥಿಗೆ ದ್ರೋಹವೆಸಗಿದ್ದಾರೆ ಎಂದು ಸದಸ್ಯೆ ಸವಿತಾ ಅವರು ಆರೋಪಿಸಿದರು.

      ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 19 ವಾರ್ಡ್‍ಗಳಿದ್ದು, ಬಿಜೆಪಿ ಪಕ್ಷವು 06 ಸ್ಥಾನವನ್ನು ಗಳಿಸಿದ್ದು, ಜೆಡಿಎಸ್ ಪಕ್ಷವು 10 ಸ್ಥಾನ ಗಳಿಸಿದರೆ, ಕಾಂಗ್ರೆಸ್ ಪಕ್ಷವು 02 ಸ್ಥಾನ ಗಳಿಸಿದ್ದು, ಪಕ್ಷೇತರ ಒಂದು ಸ್ಥಾನವನ್ನು ಗಳಿಸಿದ್ದು, ಇದರಲ್ಲಿ ಜೆಡಿಎಸ್ ಪಕ್ಷವು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸಹ ಅಧಿಕಾರವನ್ನು ಪಡೆಯಲು ವಂಚಿತವಾಗುವ ಸ್ಥಿತಿ ನಿರ್ಮಾಣವಾಗಿದ್ದು ಜೆಡಿಎಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ದುರಂತ.

      ಪಕ್ಷದ ಚಿಹ್ನೆಯಡಿ ಗೆದ್ದಂತಹ ಮಹಿಳಾ ಅಭ್ಯರ್ಥಿಗೆ ಬೆಂಬಲ ನೀಡದೆ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಲು ಕಾರಣವೇನು ಕೇವಲ 06 ಸ್ಥಾನ ಗಳಿಸಿರುವ ಬಿಜೆಪಿಯ ಅಭ್ಯರ್ಥಿಗೆ ಮೀಸಲು ಬಂದ ಕಾರಣ ಅಧಿಕಾರವನ್ನು ಹಿಡಿಯುವಲ್ಲಿ ಯಶಸ್ವಿಯಾಗಿರುವುದು ಒಂದೆಡೆಯಾದರೆ ಪಕ್ಷದ ಅಭ್ಯರ್ಥಿಯ ವಿರುದ್ದವೇ ಶಾಸಕರೇ ಮತ ಚಲಾವಣೆ ಮಾಡಿರುವುದು ಎಷ್ಟು ಸರಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಮುಂದಿನ ಭವಿಷ್ಯವೇನು ಎಂಬ ಮಾತು ಜೆಡಿಎಸ್ ಪಕ್ಷದ ಕೆಲವು ಕಾರ್ಯಕರ್ತರ ಮಾತಾಗಿದೆ.

     ಚುನಾವಣೆಯಲ್ಲಿ ಒಂದು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಒಬ್ಬ ಮಹಿಳಾ ಅಭ್ಯರ್ಥಿ, ಜೆಡಿಎಸ್ ಪಕ್ಷದಿಂದ ಒಬ್ಬ ಅಭ್ಯರ್ಥಿ ಪಕ್ಷೇತರ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದು ಪಕ್ಷೇತರ ಅಭ್ಯರ್ಥಿಗೆ 11 ಮತಗಳು, ಬಿಜೆಪಿ ಅಭ್ಯರ್ಥಿಗೆ 09 ಮತಗಳು ಹಾಗೂ ಜೆಡಿಎಸ್ ಅಭ್ಯರ್ಥಿಗೆ 01 ಮತಗಳು ಚಲಾವಣೆಯಾದವು. ಅತಿ ಹೆಚ್ಚು ಮತ ಪಡೆದ ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾದ ಕೆ. ಮಹಾಲಕ್ಷ್ಮೀ ಅವರು ಪಟ್ಟಣ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಆದರೆ ಜೆಡಿಎಸ್ ಪಕ್ಷದ ಅಭ್ಯರ್ಥಿಯು ತನ್ನ ಮತವನ್ನು ತಾನೇ ಹಾಕಿಕೊಂಡು ತನ್ನ ತನವನ್ನು ಉಳಿಸಿಕೊಂಡರು.

       ಚುನಾವಣೆಯಲ್ಲಿ ಸಂಸದ ಜಿ.ಎಸ್.ಬಸವರಾಜು ಮತ್ತು ಶಾಸಕ ಎಸ್.ಆರ್.ಶ್ರೀನಿವಾಸ್‍ರವರು ತಮ್ಮ ಮತ ಚಲಾಯಿಸಿದರು. ಇದೇ ಸಂದರ್ಭದಲ್ಲಿ ಸಾವಿರಾರು ತಾಲ್ಲೂಕಿನ ಬಿ.ಜೆ.ಪಿ ಕಾರ್ಯಕರ್ತರು ಭಾಗವಹಿಸಿದ್ದರು.

(Visited 5 times, 1 visits today)

Related posts