1 ಕೋಟಿ ರೂ.ಗಳ ಎಸ್‍ಸಿಪಿ ಟಿಎಸ್‍ಪಿ ಯೋಜನೆಗೆ ಶಾಸಕರಿಂದ ಚಾಲನೆ

ಗುಬ್ಬಿ : 

      ಸಚಿವ ಸಂಪುಟ ವಿಸ್ತರಣೆಯಲ್ಲೇ ಕಾಲಕಳೆದ ರಾಜ್ಯ ಸರ್ಕಾರಕ್ಕೆ ತಟ್ಟುವ ಅಸಮಾಧಾನದ ಹೊಗೆಯಿಂದ ಇನ್ನೂ ಮುಂದೆ ಕೂಡಾ ಟೇಕಾಫ್ ಆಗುವ ಲಕ್ಷಣ ಕಾಣುತ್ತಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಟೀಕಿಸಿದರು.

      ತಾಲ್ಲೂಕಿನ ಪ್ರಭುವನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಆಯೋಜಿಸಿದ್ದ ಗುದ್ದಲಿಪೂಜಾ ಕಾರ್ಯಕ್ರಮದಲ್ಲಿ ಒಟ್ಟು 1 ಕೋಟಿ ರೂಗಳ ವಿವಿಧ ಗ್ರಾಮಗಳ ಎಸ್‍ಸಿಪಿ ಟಿಎಸ್‍ಪಿ ಯೋಜನೆಯ ಸಿಸಿ ರಸ್ತೆಗೆ ಚಾಲನೆ ನೀಡಿ ಮಾತನಾಡಿದ ಅವರು ಈ ವರ್ಷ ಆರ್ಥಿಕ ಸಂಕಷ್ಟ ಎದುರಿಸಿದೆ. ಸರ್ಕಾರಕ್ಕೆ ನೆರೆಹಾವಳಿ ಮತ್ತು ಕೊರೋನಾದಿಂದ ಚೇತರಿಸಿಕೊಳ್ಳಲು ಸಮಯ ಬೇಕಿದೆ. ಈ ಬಾರಿ ಲಘು ಗಾತ್ರದ ಬಜೆಟ್ ಮನ್ನಣೆ ಮಾಡುವ ಹಂತದಲ್ಲಿರುವ ಸರ್ಕಾರ ಸಚಿವರ ನೇಮಕದಲ್ಲಿ ಸಮಯ ಕಳೆದಿರುವುದು ಸರಿಯಲ್ಲ ಎಂದರು.

       ಬಿಜೆಪಿ ಮತ್ತು ಯಡಿಯೂರಪ್ಪನವರನ್ನು ಹೊಗಳಿಕೊಂಡು ಬಿಜೆಪಿ ಸೇರಿದ ಎಚ್.ವಿಶ್ವನಾಥ್ ಅಧಿಕಾರದ ಆಸೆ ಈಡೇರಿಲ್ಲ. ಪ್ರಪಂಚದ ಎಲ್ಲಾ ಕಾನೂನು ಮಾತನಾಡುವ ವಿಶ್ವನಾಥ್ ಅವರಿಗೆ ನಾಮಿನಿ ಸದಸ್ಯರ ಅರ್ಹತೆ ಬಗ್ಗೆ ತಿಳಿದಿಲ್ಲವೇ, ಸುಪ್ರೀಂಕೋರ್ಟ್ ಹೇಳಿದಂತೆ ನಾಮಿನಿ ಸದಸ್ಯರಿಗೆ ಸಚಿವ ಸ್ಥಾನ ನೀಡಿಲ್ಲ. ಬಿಜೆಪಿಯಲ್ಲಿ ಆರೇಳು ಬಾರಿ ಶಾಸಕರಾದವರಿಗೆ ಮೊದಲ ಆದ್ಯತೆ ನೀಡಬೇಕಿದೆ. ಎಲ್ಲಾ ಪಕ್ಷದಲ್ಲೂ ವಾಡಿಕೆ ಇದ್ದಹಾಗೇಯೇ ಅರ್ಹತೆ ಇದ್ದವರಿಗೆ ಸಚಿವ ಸ್ಥಾನ ನೀಡಲಾಗುವುದು. ಈಚೆಗೆ ಬಿಜೆಪಿ ಸೇರಿ ಅಧಿಕಾರ ಪಡೆದವರು ಮತ್ತೊಮ್ಮೆ ಎತ್ತ ಸಾಗುತ್ತಾರೋ ಎಂದು ವ್ಯಂಗ್ಯವಾಡಿದ ಅವರು ಸಿಡಿ ಬೆದರಿಕೆಯೊಡ್ಡಿ ಸಚಿವ ಸ್ಥಾನ ಎಂಬ ವದಂತಿ ಸುಳ್ಳು ಎಂದರು.

      ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನಡವಳಿಕೆ ಸರಿಯಾಗಿದೆ. ಜಡ್ಡು ಹಿಡಿದ ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳಲು ಬೈಗುಳ ಬಳಸಲೇಬೇಕಾದ ಅನಿವಾರ್ಯ ಎದುರಾಗಿದೆ. ಅಭಿವೃದ್ದಿ ಕೆಲಸಗಳ ಕ್ರಿಯಾ ಯೋಜನೆ ಸಿದ್ದಪಡಿಸಲು ಸಾಕಷ್ಟು ಸಮಯ ಪಡೆದ ಅಧಿಕಾರಿಗಳ ವಿಳಂಬಕ್ಕೆ ಅನುದಾನಗಳು ಮರಳಿ ಸರ್ಕಾರಕ್ಕೆ  ಹೋಗಲಿದೆ. ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರ ವೈಪಲ್ಯ ಎಂ ಚರ್ಚೆ ಸಾರ್ವಜನಿಕವಾಗಲಿದೆ. ಈ ನಿಟ್ಟಿನಲ್ಲಿ ತರಾಟೆಗೆ ತೆಗೆದುಕೊಂಡು ಅಧಿಕಾರಿಗಳಿಗೆ ಚಳಿ ಬಿಡಿಸಿರುವುದು ಸಮಂಜಸ ಎಂದು ಜಿಲ್ಲಾ ಸಚಿವರನ್ನು ಸಮರ್ಥಿಸಿಕೊಂಡ ಅವರು ಹೇಮಾವತಿ ನೀರು ಈ ತಿಂಗಳಲ್ಲಿ ನಿಲ್ಲಿಸುವ ಚರ್ಚೆ ನಡೆದಿತ್ತು. ಈಚೆಗೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಗೆ ಹೋಗಲು ಸಾಧ್ಯವಾಗಿಲ್ಲ. ನೀರು ನಿಲ್ಲಿಸುವ ಬಗ್ಗೆ ಅಗತ್ಯ ಮಾಹಿತಿ ಪಡೆಯಬೇಕಿದೆ ಎಂದರು.

      ಹೇಮೆ ನೀರಿಗಾಗಿ ಚುನಾವಣೆ ಬಹಿಷ್ಕರಿಸಿದ ಮಂಚಲದೊರೆ ಮತ್ತು ಅಂಕಸಂದ್ರ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿರ್ಣಯ ಮಾಡಲು ಮುಂದಾದ ಜಿಲ್ಲಾಡಳಿತದ ಜತೆ ಚರ್ಚಿಸುತ್ತೇನೆ. ಚುನಾವಣೆ ನಡೆಯದ ಪಂಚಾಯಿತಿ ಮೀಸಲು ಘೋಷಣೆ ಅಸಂಬದ್ದವಾಗಲಿದೆ. ಚುನಾವಣೆಗೆ ಮುನ್ನಾ ಮೀಸಲು ನಿರ್ಣಯವಾಗುವಂತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಖುದ್ದು ಚರ್ಚಿಸುತ್ತೇನೆ ಎಂದ ಅವರು ಕೊರೋನಾ ಹೆಸರಿನಲ್ಲಿ ಕೆಲಸ ಮಾಡದ ಅಧಿಕಾರಿಗಳಿಂದ ಅಭಿವೃದ್ದಿ ಕೆಲಸ ಮಾಡಿಸುವುದು ಕಷ್ಟವಾಗಿದೆ. ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಗಳು ನಿರಂತರ ನಡೆಸಿ ಅಭಿವೃದ್ದಿ ಚುರುಕು ಮಾಡುವ ಕೆಲಸ ಮಾಡಲಾಗುವುದು ಎಂದರು.

       ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಕಳ್ಳಿಪಾಳ್ಯ ಲೋಕೇಶ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ, ಗ್ರಾಪಂ ಸದಸ್ಯ ಜಗದೀಶ್, ಮುಖಂಡರಾದ ಬಸವರಾಜು, ರಂಗಪ್ಪ, ಕೇಬಲ್‍ರಾಜು, ಎಇಇ ವಿಜಯ್‍ಕುಮಾರ್ ಇತರರು ಇದ್ದರು.

(Visited 6 times, 1 visits today)

Related posts

Leave a Comment