ನಗರದಲ್ಲಿ ನಾಲ್ಕು ಕೊಲೆ ಪ್ರಕರಣದಿಂದಾಗಿ ಸಾರ್ವಜನಿಕರಿಗೆ ಆತಂಕ – ಶಾಸಕ

ಗುಬ್ಬಿ:

      ಜಿಲ್ಲೆಯಲ್ಲಿ ಹೆಚ್ಚಿದ ಅಪರಾಧ ಕೃತ್ಯಗಳ ಬಗ್ಗೆ ಜನತೆಯಲ್ಲಿ ಆತಂಕ ಮೂಡಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಗಮನಹರಿಸಬೇಕಿದೆ. ಸೂಕ್ಷ್ಮವಾದ ಈ ವಿಚಾರವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಜರುಗಿಸಬೇಕು ಎಂದು ಮಾಜಿ ಸಚಿವ ಮತ್ತು ಶಾಸಕ ಎಸ್.ಆರ್.ಶ್ರೀನಿವಾಸ್ ಆಗ್ರಹಿಸಿದರು.

      ತಾಲ್ಲೂಕಿನ ಕೆ.ಜಿ.ಟೆಂಪಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ರೈತ ಸಂಘ, ಸ್ಥಳೀಯ ಮುಖಂಡರು, ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಹಾಗೂ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೃಹತ್ ಆರೋಗ್ಯ ಶಿಬಿರದಲ್ಲಿ ಮಾತನಾಡಿದ ಅವರು ತುಮಕೂರು ನಗರದಲ್ಲಿ ನಾಲ್ಕು ಕೊಲೆ ಪ್ರಕರಣ ಭಯ ಹುಟ್ಟಿಸಿದೆ. ಈ ಜತೆಗೆ ಕಳ್ಳತನ, ಸರಗಳ್ಳತನದಂತಹ ಕೃತ್ಯಗಳು ಈಚೆಗೆ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಗುಬ್ಬಿ ತಾಲ್ಲೂಕಿನಲ್ಲೂ ಅಪರಾಧ ಕೃತ್ಯಗಳು ಹೆಚ್ಚಾದ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದರು.

      ಗುಬ್ಬಿ ತಾಲ್ಲೂಕಿನಲ್ಲಿ ಸರಗಳ್ಳತನ, ದೇವಾಲಯ ಹುಂಡಿ, ಘಂಟೆ ಕಳವು ಸರಣಿಯಲ್ಲಿ ನಡೆದಿದೆ. ಈ ಜತೆಗೆ ಕೃಷಿಕರ ತೋಟ, ಹೊಲಗಳಿಗೆ ಲಗ್ಗೆ ಇಟ್ಟ ಕಳ್ಳರು ಮೋಟರ್, ಸ್ಟಾರ್ಟರ್, ಕೇಬಲ್ ಕಳವು ನಡೆಸಿದ್ದಾರೆ. ನನ್ನ ತೋಟದಲ್ಲೇ ಒಂದು ಸ್ಟಾರ್ಟರ್ ಕಳವು ಆಗಿದೆ. ರೈತರ ಬದುಕು ಕಟ್ಟುವ ಈ ಎಲೆಕ್ಟ್ರಿಕಲ್ಸ್ ವಸ್ತುಗಳ ಕಳ್ಳತನ ಬಗ್ಗೆ ಪೊಲೀಸ್ ಇಲಾಖೆ ಗಂಭೀರ ಕ್ರಮವಹಿಸಬೇಕಿದೆ. ಈ ಕ್ರೈಂ ವಿಚಾರವನ್ನು ಜಿಲ್ಲಾಡಳಿತ ಹಗುರವಾಗಿ ತೆಗೆದುಕೊಳ್ಳದೇ ಕಾನೂನು ಸುವ್ಯವಸ್ಥೆ ಮಾಡುವಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಸಲಹೆ ನೀಡಿದ ಅವರು ಜಿಲ್ಲಾ ಉಸ್ತುವಾರಿ ಸಚಿವರು ಕಾನೂನು ಸುವ್ಯವಸ್ಥೆ ಬಗ್ಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

      ಗುಬ್ಬಿ ಪಟ್ಟಣದಲ್ಲಿ ನಡೆದ ಯುಜಿಡಿ ಕಾಮಗಾರಿ ಪೂರ್ಣಗೊಳಿಸಲು ಬಾಕಿ ಇರುವ 67 ಲಕ್ಷ ರೂಗಳನ್ನು ನೀಡಬೇಕಿದೆ. ಈಚೆಗೆ ನಗರತ್ಥೋನ ನಿಧಿಯ 9 ಕೋಟಿ ರೂ ಸರ್ಕಾರ ವಾಪಸ್ ಪಡೆದ ಹಿನ್ನಲೆಯಲ್ಲಿ ಯುಜಿಡಿ ಕೆಲಸ ವಿಳಂಬವಾಗಿದೆ. ಸರ್ಕಾರ ಡಿಸೆಂಬರ್ ಅಂತ್ಯದೊಳಗೆ ಅನುದಾನ ಮರು ಬಿಡುಗಡೆ ಭರವಸೆ ನೀಡಿದೆ. ಈ ನಿಟ್ಟಿನಲ್ಲಿ ಅನುದಾನಕ್ಕೆ ಕಾಯುತ್ತಿದ್ದೇವೆ ಎಂದ ಅವರು ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರ ನಡೆಸುತ್ತಿರುವ ಸಂಘಸಂಸ್ಥೆಗಳ ಕಾರ್ಯ ಮೆಚ್ಚುವಂತಹದು. ಹೊಸ ರೋಗಗಳು ಹುಟ್ಟಿಕೊಳ್ಳುತ್ತಿರುವ ಈ ಕಾಲದಲ್ಲಿ ಎಲ್ಲವೂ ಮಾರಕವಾಗುತ್ತಿದೆ. ಚಿಕ್ಕ ವಯಸ್ಸಿಗೆ ರಕ್ತದೊತ್ತಡ, ಸಕ್ಕರೆ ಕಾಯಲೆಗೆ ತುತ್ತಾಗುತ್ತಿದ್ದಾರೆ. ಇಂತಹ ರೋಗಗಳ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಮೂಡಬೇಕಿದೆ. ಈ ಕಾರ್ಯ ಮಾಡುತ್ತಿರುವ ಬಿಜಿಎಸ್ ಆಸ್ಪತ್ರೆಯ ವೈದ್ಯ ತಂಡಕ್ಕೆ ಅಭಿನಂದಿಸಬೇಕಿದೆ ಎಂದರು.

      ಎಪಿಎಂಸಿ ಸದಸ್ಯ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಆರೋಗ್ಯ ಮತ್ತು ಶಿಕ್ಷಣ ನಿಜವಾದ ಸೇವೆ ಸೂಚಿಸುತ್ತದೆ. ಆದರೇ ಈ ಕ್ಷೇತ್ರಗಳು ಮಲೀನಗೊಂಡು ವ್ಯಾಪಾರೀಕರಣವಾಗಿದೆ. ಆದರೂ ಕೆಲ ಆರೋಗ್ಯ ಸಂಸ್ಥೆಗಳು ಗ್ರಾಮೀಣ ಭಾಗದ ಜನರ ಯೋಗಕ್ಷೇಮ ವಿಚಾರಿಸುತ್ತಿದೆ. ಈ ಕಾರ್ಯಕ್ಕೆ ಸಂಘಸಂಸ್ಥೆಗಳು ಕೈ ಜೋಡಿಸಿರುವುದು ಸ್ವಾಗತಾರ್ಹ ಎಂದರು.

      ಇದೇ ಸಂದರ್ಭದಲ್ಲಿ ಸಾವಿರಾರು ಮಂದಿ ಗ್ರಾಮಸ್ಥರು, ವಿದ್ಯಾರ್ಥಿಗಳು ತಪಾಸಣೆಗೆ ಒಳಪಟ್ಟರು. 40 ಮಂದಿ ನುರಿತ ವೈದ್ಯರ ತಂಡ ವಿವಿಧ ಕೌಂಟರ್ ತೆರೆದು ಪರೀಕ್ಷೆ ನಡೆಸಿದರು. ಎಲ್ಲಾ ಶಸ್ತ್ರ ಚಿಕಿತ್ಸಾ ತಜ್ಞರು ಬೆಳಿಗ್ಗೆಯಿಂದ ಸಂಜೆಯವರೆಗೆ ರೋಗಿಗಳ ತಪಾಸಣೆ ನಡೆಸಿ ಶಸ್ತ್ರಚಿಕಿತ್ಸೆಗೆ ಬರಲು ಸೂಚಿಸಿದರು.

      ಶಿಬಿರಕ್ಕೆ ಭೇಟಿ ನೀಡಿದ ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ರಕ್ತದಾನ ನೀಡಿ ಶಿಬಿರದ ಯಶಸ್ಸಿಗೆ ಕಾರಣರಾದರು.
ಕಾರ್ಯಕ್ರಮದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ, ಲಯನ್ಸ್ ಮಾಜಿ ಜಿಲ್ಲಾ ಗೌರ್ನರ್ ರೇಣುಕಯ್ಯ, ಗುಬ್ಬಿ ಲಯನ್ಸ್ ಅಧ್ಯಕ್ಷ ಉಂಡೆ ರಾಮಯ್ಯ, ವಿದ್ಯಾ, ರುದ್ರೇಶ್, ಎ.ಮುನಿಯಪ್ಪ, ಎಪಿಎಂಸಿ ಅಧ್ಯಕ್ಷ ಜಿ.ಟಿ.ರೇವಣ್ಣ, ಗ್ರಾಪಂ ಅಧ್ಯಕ್ಷೆ ಗೀತಾ ಪ್ರತಾಪ್, ಮುಖಂಡರಾದ ಕೆ.ಆರ್.ವೆಂಕಟೇಶ್, ತಿಮ್ಮೇಗೌಡ, ಬಸವರಾಜು, ಗಿರೀಶ್, ಪ್ರತಾಪ್, ಕೆ.ಎನ್.ವೆಂಕಟೇಗೌಡ, ಸಿ.ಟಿ.ಕುಮಾರ್, ಸಿ.ಜಿ.ಲೋಕೇಶ್ ಇತರರು ಇದ್ದರು.

(Visited 16 times, 1 visits today)

Related posts