ಕೇಂದ್ರ ಸರ್ಕಾರ ಕೃಷಿ ಕಾರ್ಮಿಕರ ಬದುಕನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ : ಮರುಳೀಧರ್ ಹಾಲಪ್ಪ

ಗುಬ್ಬಿ :

      ಕೆಲವು ನಿಯಮಗಳೊಂದಿಗೆ ರೈತರಿಗೆ 6 ಸಾವಿರ ರೂಗಳನ್ನು ನೀಡಲು ಮುಂದಾದ ಕೇಂದ್ರ ಸರ್ಕಾರ ಪುಡಿ ಜಮೀನಿನ ರೈತರು ಹಾಗೂ ಕೃಷಿ ಕಾರ್ಮಿಕರ ಬದುಕನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಮರುಳೀಧರ್ ಹಾಲಪ್ಪ ಟೀಕಿಸಿದರು.

      ಪಟ್ಟಣದ ಕಾಂಗ್ರೆಸ್ ಕಚೇರಿಯ ಮುಂದೆ ಜಮಾಯಿಸಿದ ಕಾರ್ಯಕರ್ತರು, ಗಾಂಧೀಜಿ ಅವರನ್ನು ಅವಮಾನಿಸಿದ ಘಟನೆಯನ್ನು ಖಂಡಿಸಿ ಕಪ್ಪುಪಟ್ಟಿ ಪ್ರದರ್ಶನದೊಂದಿಗೆ ಮೌನ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು 2.5 ಹೆಕ್ಟೇರ್ ಪ್ರದೇಶ ಹೊಂದಿದ ರೈತರನ್ನು ಮಾತ್ರ ಪರಿಗಣಿಸಿ ಅತಿ ಸಣ್ಣ ರೈತರನ್ನು ಕಡೆಗಣಿಸಿರುವ ಜತೆಗೆ ಅವಿಭಕ್ತ ಕುಟುಂಬದಲ್ಲಿನ ರೈತರನ್ನು ಗಣನೆಗೆ ತೆಗೆದುಕೊಳ್ಳದಿರುವುದು ಅವೈಜ್ಞಾನಿಕ ಅನಿಸಿದೆ ಎಂದರು.

      ಕೇಂದ್ರ ಬಜೆಟ್‍ನಲ್ಲಿ ಸಾಕಷ್ಟು ನೂನ್ಯತೆಗಳಿವೆ. ಸಮಾಜ ಕಲ್ಯಾಣಕ್ಕೆ 72 ಸಾವಿರ ಕೋಟಿ ರೂ ಬಳಸಲಾಗಿದೆ. ಆದರೆ ರಾಜ್ಯ ಸರ್ಕಾರವೇ ಈ ಹಿಂದೆ ಸಮಾಜ ಕಲ್ಯಾಣಕ್ಕೆ 48 ಕೋಟಿ ಸಾವಿರ ರೂಗಳನ್ನ ಮೀಸಲಿಟ್ಟಿತ್ತು. ಇದನ್ನು ಸರಿದೂಗಿಸಲು ಎಲ್ಲಾ ರೈತರಿಗೆ 6 ಸಾವಿರ ರೂನಂತೆ ಹಂಚಲು 70 ಸಾವಿರ ಕೋಟಿ ರೂಗಳ ಬಳಕೆ ಊರ್ಜಿತವಾಗುವುದೇ ಎಂಬ ಸಂಶಯವಿದೆ ಎಂದ ಮೇಕಿನ್ ಇಂಡಿಯಾ ಹೆಸರಿನಲ್ಲಿ ಎಲ್ಲವೂ ಸ್ವದೇಶಿ ಬಳಕೆಗೆ ಮುಂದಾದ ಕೇಂದ್ರ ಸರ್ಕಾರದ ಸಚಿವರೇ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ವಿಪರ್ಯಾಸವೇ ಸರಿ ಎಂದರು.

      ಸ್ವಾತಂತ್ರ್ಯ ತಂದುಕೊಟ್ಟು ಪಿತಾಮಹ ಎನಿಸಿದ ಮಹಾತ್ಮ ಗಾಂಧೀಜಿ ಅವರ ಫೋಟೋಗೆ ಗುಂಡಿಕ್ಕಿ ಅವಮಾನಿಸಿದ ಹಿಂದೂ ಮಹಾಸಭಾ ಸದಸ್ಯರಿಗೆ ಉಗ್ರ ಶಿಕ್ಷೆಯಾಗಬೇಕಿದೆ. ಈ ಜತೆಗೆ ಹುತಾತ್ಮರ ದಿನಾಚರಣೆ ದಿನದಂದು ಗಾಂಧೀಜಿ ಹತ್ಯೆ ಮಾಡಿದ ಗೋಡ್ಸೆ ಅವರಿಗೆ ಹಾರ ಹಾಕಿ ಸಿಹಿ ಹಂಚಿದ ವಿಕೃತ ಮನೋಭಾವದ ಹಿಂದೂ ಪರ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಬೇಕು. ಇಂತಹ ಘಟನೆ ಖಂಡನಾರ್ಹ. ಗಾಂಧೀಜಿ ಅವರನ್ನು ಅವಮಾನಿಸಿದ್ದು ದೇಶವೇ ತಲೆ ತಗ್ಗಿಸಬೇಕಾಗಿದೆ ಎಂದು ವಿಷಾದಿಸಿದರು.

      ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣಯ್ಯ ಮಾತನಾಡಿ 2 ಕೋಟಿ ಉದ್ಯೋಗ ಸೃಷ್ಟಿ ಮಾತು ಕೊಟ್ಟ ಮೋದಿ ಅವರು ಸಾಮಾನ್ಯರಿಗೆ ಯಾವುದೇ ಯೋಜನೆ ರೂಪಿಸಲಿಲ್ಲ. ಉದ್ಯೋಗ ಖಾತ್ರಿ ಅಂತಹ ಯೋಜನೆ ಕೊಟ್ಟ ಯುಪಿಎ ಬಡವರ ಪರ ನಿಂತಿತ್ತು. ರಾಜ್ಯದಲ್ಲಿ ಕೂಡಾ ಶಾಸಕ ಖರೀದಿಗೆ ಮುಂದಾದ ಬಿಜೆಪಿ ವಿರೋಧಪಕ್ಷವಾಗಿ ಜನಪರ ಚಿಂತನೆ ನಡೆಸಬೇಕಿದೆ ಎಂದರು.

      ಈ ಸಂದರ್ಭದಲ್ಲಿ ಗುಬ್ಬಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್.ನರಸಿಂಹಯ್ಯ, ನಿಟ್ಟೂರು ಬ್ಲಾಕ್ ಅಧ್ಯಕ್ಷ ನಿಂಬೆಕಟ್ಟೆ ಜಯಣ್ಣ, ಜಿಲ್ಲಾ ಎಸ್‍ಟಿ ಘಟಕದ ಅಧ್ಯಕ್ಷ ಬಿ.ಟಿ.ಮಲ್ಲೇಶಯ್ಯ, ಪಪಂ ಸದಸ್ಯ ಮಹಮದ್ ಸಾದಿಕ್, ಮುಖಂಡರಾದ ನೇತ್ರಾವತಿ, ಸಲೀಂಪಾಷ, ಜಿ.ವಿ.ಮಂಜುನಾಥ್, ಮಹಮದ್ ರಫಿ, ಶಿವು, ರಂಗನಾಥ್ ಇತರರು ಇದ್ದರು.

 

(Visited 17 times, 1 visits today)

Related posts

Leave a Comment