ತುಮಕೂರು:

      ಹೇಮಾವತಿ ಯೋಜನೆ ಅಡಿಯಲ್ಲಿ ಭೂಮಿಯನ್ನು ಪಡೆಯಲು 2013ನೇ ಕಾಯ್ದೆ ಪ್ರಕಾರ ಕೆಲ ಗ್ರಾಮಗಳಲ್ಲಿ ರೈತರ ಜಮೀನುಗಳ ಖರೀದಿಗೆ ನಿರ್ದಿಷ್ಠ ಮೊತ್ತವನ್ನು ನಿಗದಿ ಮಾಡಿದ್ದು, ಇದಕ್ಕೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಒಂದು ತಿಂಗಳೊಳಗಡೆ ಸಲ್ಲಿಸಿ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ತಿಳಿಸಿದರು.

      ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಚಿಕ್ಕನಾಯಕನಹಳ್ಳಿಯ ಕೆಲ ಹಳ್ಳಿಗಳಲ್ಲಿ ಹೇಮಾವತಿ ನಾಲಾ ಯೋಜನೆಗೆ ರೈತರ ಜಮೀನು ಪಡೆಯಲು ಗುಂಟೆಗೆ 8900, 9250 ರೂಗಳಂತೆ ನಿಗದಿ ಪಡಿಸಲಾಗಿದೆ. ಒಂದು ಗುಂಟೆಗೆ 8900 ರೂಗಳಂತೆ 1:4 ಅನುಪಾತದಲ್ಲಿ ಒಂದು ಎಕರೆಗೆ 14 ಲಕ್ಷದಷ್ಟು ಹಣ ನೀಡಿ ಜಮೀನು ನೇರ ಖರೀದಿ ಮಾಡಲಾಗುವುದು ಎಂದರು.

       ಸಭೆಯಲ್ಲಿ ಮಾತನಾಡಿದ ರೈತರು, ಈ ಮುಂಚೆ ಕೆಲ ರೈತರ ಜಮೀನುಗಳು ವಿವಿಧ ಯೋಜನೆಗಳಿಗೆ ಹೋಗಿದ್ದು, ಅದಕ್ಕೆ ಇಲ್ಲಿಯವರೆಗೆ ಹಣ ಬಂದಿಲ್ಲ. ಈಗ ಮತ್ತೆ ಹೇಮಾವತಿ ಯೋಜನೆ ಹೆಸರಿನಲ್ಲಿ ಜಮೀನು ಪಡೆಯಲು ದರ ನಿಗಧಿ ಮಾಡಿದ್ದೀರಾ. ಇದಕ್ಕೆ ಜಮೀನು ನೀಡಿ ಹಣಕ್ಕಾಗಿ ಅಲೆಯಬೇಕಾಗುತ್ತದೆ. ಇದಕ್ಕೆ ಪರಿಹಾರ ಹೇಗೆ ನೀಡುತ್ತೀರಾ ಎಂದು ಪ್ರಶ್ನಿಸಿದರು.

       ರೈತರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಆಯಾ ರೈತರ ಜಮೀನುಗಳನ್ನು ಸರ್ವೇ ಮಾಡಲು ಬರುವ ಅಧಿಕಾರಿಗಳೇ ಸ್ಥಳದಲ್ಲಿ ನಿಮಗೆ ಮಾಹಿತಿ ನೀಡುವ ಜೊತೆಗೆ ಕರಾರು ಪತ್ರಕ್ಕೆ ಸಹಿ ಮಾಡಿಸಿಕೊಳ್ಳುತ್ತಾರೆ. ಅಲ್ಲದೆ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಅಧಿಕಾರಿಗಳೇ ನಿಮ್ಮ ಬಳಿ ಬಂದು ಪಡೆದುಕೊಳ್ಳುತ್ತಾರೆ. ಯಾರಾದರೂ ಕಚೇರಿಗೆ ರೈತರನ್ನು ಅಲೆದಾಡಿಸಿದರೆ, ನನ್ನ ಗಮನಕ್ಕೆ ತನ್ನಿ ಎಂದರು.

        ಸಭೆಯಲ್ಲಿ ಇನ್ನೊಬ್ಬ ರೈತ ಮಾತನಾಡಿ, ಸರ್ಕಾರಕ್ಕೆ ನೀಡುವ ಜಮೀನಿನಲ್ಲಿ ವಿವಿಧ ಬೆಲೆ ಬಾಳುವ ಮರಗಳಿರುತ್ತವೆ. ಪಂಪ್‍ದೆಟ್, ಬೋರ್ವೆಲ್‍ಗಳಿರುತ್ತದೆ. ಜೊತೆಗೆ ಕೆಲವರು ಗುಡಿಸಲುಗಳನ್ನು ಹಾಕಿಕೊಂಡು ಜೀವನ ಮಾಡುತ್ತಾರೆ. ಅವರ ಪರಿಸ್ಥಿತಿ ಏನು? ಅವರಿಗೆ ಪರಿಹಾರ ಹೇಗೆ ಎಂದು ಪ್ರಶ್ನಿಸಿದರು.

      ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ ರಾಕೇಶ್‍ಕುಮಾರ್, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಜಮೀನುಗಳಿಗೆ ಹೆಚ್ಚಿನ ದರ ನಿಗದಿ ಪಡಿಸಲಾಗುವುದು. ಅಲ್ಲದೆ, ಜಮೀನುಗಳಲ್ಲಿರುವ ಬೋರ್ವೆಲ್, ಪಂಪ್‍ಸೆಟ್, ವಿವಿಧ ಮರಗಳಿಗೆ ಪ್ರತ್ಯೇಕ ದರವನ್ನು ನಿಗದಿ ಮಾಡಿ ನೀಡಲಾಗುವುದು. ಜಿಲ್ಲಾಡಳಿತ ವ್ಯಾಪ್ತಿಯಲ್ಲಿ ನೀಡಬಹುದಾದ ಬೆಲೆಯನ್ನು ನೀಡಲು ಪ್ರಯತ್ನಿಸುತ್ತೇವೆ. ಹೆಚ್ಚಿನ ಬೆಲೆ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದರು.

     ಸದ್ಯದಲ್ಲಿ ಬೆಲೆ ನಿಗದಿ ಮಾಡಿದ ಪ್ರಕಾರ ಚಿಕ್ಕನಾಯಕನಹಳ್ಳಿಯ ಬಿಳಿಗೆರೆ ಗ್ರಾಮಕ್ಕೆ 8900 ರೂ, ತಿಗಡನಹಳ್ಳಿ 9250 ರೂ., ಲಕ್ಕಗೊಂಡನಹಳ್ಳಿಗೆ 9448 ರೂ., ಗುಬ್ಬಿಯ ನಂದಿಹಳ್ಳಿಗೆ 6,797ರೂ.ಗಳು ಸೇರಿದಂಯೆ ಇನ್ನಿತರ ಕೆಲ ಹಳ್ಳಿಗಳಿಗೆ 8900 ರಿಂದ 9500ರ ಮಧ್ಯೆಯಲ್ಲಿ ದರ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.

      ಇದಕ್ಕೆ ಪ್ರತಿಯಾಗಿ ಮಾತನಾಡಿದ ಕೆಲ ರೈತರು ಎಲ್ಲರೂ ಒಂದೇ, ಜಮೀನು ಎಲ್ಲರದ್ದು ಒಂದೇ ಆಗಿರುತ್ತದೆ. ಹಾಗಿದ್ದಲ್ಲಿ ಬೆಲೆಯಲ್ಲಿ ತಾರತಮ್ಯ ಏನಕ್ಕೆ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಕಳೆದ ಮೂರು ವರ್ಷಗಳಲ್ಲಿ ನಿಮ್ಮ ಜಮೀನುಗಳಿಗೆ ರಿಜಿಸ್ಟ್ರಾರ್ ಕಚೇರಿಯಲ್ಲಿ ನೊಂದಣಿ ಮಾಡಿಸಿದ್ದರಲ್ಲಿ, ಉದಾಹರಣೆಯಾಗಿ 10 ಜನ ರೈತರನ್ನು ಪರಿಗಣನೆಗೆ ತೆಗೆದುಕೊಂಡಾಗ ಅದರಲ್ಲಿ ಹೆಚ್ಚಿನ ದರ ನೀಡಲಾದ 5 ಜನ ರೈತರನ್ನು ಸಮತೂಗಿ ಅದರಲ್ಲಿ ಸರಾಸರಿಯ ಮೇಲೆ ದರ ನಿಗಧಿ ಮಾಡಲಾಗಿದೆ ಎಂದು ವಿಸ್ತರಿಸಿದರು.

      ಸಭೆಯಲ್ಲಿ ವಿವಿಧ ತಾಲ್ಲೂಕುಗಳ ತಹಸೀಲ್ದಾರರು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಯಸ್ವಾಮಿ, ಹೇಮಾವತಿ ಕಚೇರಿಯ ವಿವಿಧ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.

(Visited 14 times, 1 visits today)