ಹುಳಿಯಾರು:

      ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿಯ ದೊಡ್ಡಎಣ್ಣೇಗೆರೆ ಸರ್ಕಲ್‍ನಿಂದ ಗವಿರಂಗಾಪುರ ಪುಣ್ಯ ಕ್ಷೇತ್ರಕ್ಕೆ ಹೋಗುವ ರಸ್ತೆಯು ಸಂಪೂರ್ಣ ಹಾಳಾಗಿದ್ದು ತಕ್ಷಣ ದುರಸ್ಥಿ ಮಾಡಿಸುವಂತೆ ದೊಡ್ಡಎಣ್ಣೇಗೆರೆಯ ಜ್ಞಾನಭಾರತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ್ ಮನವಿ ಮಾಡಿದ್ದಾರೆ.

      ತಿಪಟೂರಿನಿಂದ ಹಂದನಕೆರೆ ಮಾರ್ಗವಾಗಿ ಇದೇ ರಸ್ತೆಯಲ್ಲಿ ಹೊಸದುರ್ಗಕ್ಕೆ ಪ್ರತಿದಿನ ಅನೇಕ ಕೆ.ಎಸ್.ಆರ್.ಟಿ.ಸಿ ಬಸ್‍ಗಳು ಸಂಚರಿಸುತ್ತವೆ. ಅಲ್ಲದೆ ಗಂವಿರಂಗಾಪುರದ ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ ನಿತ್ಯ ಅಪಾರ ಸಂಖ್ಯೆಯಲ್ಲಿ ಬೈಕ್, ಕಾರುಗಳಲ್ಲಿ ಭಕ್ತರು ಬಂದೋಗುತ್ತಾರೆ. ಈ ಭಾಗದಲ್ಲಿ ಜಮೀನುಳ್ಳ ರೈತರು ಸಹ ನಿತ್ಯ ಇಲ್ಲಿ ಓಡಾಡುತ್ತಾರೆ.

      ಆದರೆ ಈ ರಸ್ತೆ ಅನೇಕ ವರ್ಷಗಳಿಂದ ಗುಂಡಿಗಳು ಬಿದ್ದು ರಸ್ತೆಯ ಜಲ್ಲಿಗಳು ಮೇಲೆದ್ದು ಸುಗಮ ಸಂಚಾರಕ್ಕೆ ತೊಡಕಾಗಿದೆ. ಬೈಕ್ ಸವಾರರಂತೂ ಬಿದ್ದು ಪೆಟ್ಟು ಮಾಡಿಕೊಂಡಿರುವ ನಿದರ್ಶನಗಳು ಬಹಳಷ್ಟಿವೆ. ಮಳೆಗಾಲದಲ್ಲಂತೂ ಗುಂಡಿಯಾವುದು ರಸ್ತೆಯಾವುದು ಎಂದು ತಿಳಿಯದೆ ಅಪಘಾತಗಳು ಸಹ ಆಗಿವೆ. ಈ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

      ವಾರಾಂತ್ಯ ಶನಿವಾರದಂದು ಗವಿರಂಗಾಪುರ ಪುಣ್ಯಕ್ಷೇತ್ರಕ್ಕೆ ದೊಡ್ಡೆಡೆ ವಿಶೇಷ ಪೂಜೆಗಳು ನಡೆಯುವುದರಿಂದ ತಿಪಟೂರು ಅಣ್ಣಾಪುರದಿಂದ ಅನೇಕ ಭಕ್ತರು ಕಾಲ್ನಡಿಗೆಯಲ್ಲಿ ಬಂದು ದರ್ಶನ ಪಡೆಯುತ್ತಾರೆ. ಇನ್ನಾದರೂ ಈ ರಸ್ತೆಯನ್ನು ದುರಸ್ಥಿ ಮಾಡಿಸಿ ಈ ಭಾಗದ ಸುಗಮ ಸಂಚಾರಕ್ಕೆ ನೆರವಾಗುವಂತೆ ಪ್ರಶಾಂತ್ ಮನವಿ ಮಾಡಿದ್ದಾರೆ.

(Visited 6 times, 1 visits today)