ಲಿಂಗಪ್ಪನಪಾಳ್ಯ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸುವಂತೆ ಮನವಿ

ಹುಳಿಯಾರು  : 

     ಹುಳಿಯಾರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಲಿಂಗಪ್ಪನಪಾಳ್ಯ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸುವಂತೆ ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

      ಸುಮಾರು 200 ಮನೆಗಳಿರುವ ಗ್ರಾಮದಲ್ಲಿ 650 ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಆದರೆ ರಸ್ತೆ, ನೀರು, ಬೀದಿ ದೀಪ, ಚರಂಡಿ ಸೇರಿದಂತೆ ಮೂಲಸೌಲಭ್ಯಗಳ ಕೊರತೆ ಇಲ್ಲಿದೆ. ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಒಳಪಟ್ಟರೂ ಅಲ್ಲಿನ ಅಧಿಕಾರಿಗಳ ಅವಕೃಪೆಯಿಂದ ಗ್ರಾಪಂಗೂ ಕಡೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

     ಇಡೀ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಕಾಲದಲ್ಲಿ ಮಾಡಿದ 2 ಬೀದಿ ಸಿಮೆಂಟು ರಸ್ತೆಗಳು ಬಿಟ್ಟರೆ ಉಳಿದ ಕಡೆಯಲ್ಲೆಲ್ಲ ಕಲ್ಲುಮಣ್ಣಿನ ರಸ್ತೆಗಳಿವೆ. ಗ್ರಾಮದಲ್ಲಿ ಒಳಚರಂಡಿ ವ್ಯವಸ್ಥೆಯಿಲ್ಲದೆ ತ್ಯಾಜ್ಯ ನೀರು ಅಲ್ಲಲ್ಲಿ ನಿಂತಿದ್ದು, ಅನೈರ್ಮಲ್ಯಕ್ಕೆ ಕಾರಣವಾಗಿದೆ. ರಸ್ತೆಗೆ ಕೊಳಚೆ ನೀರು ಹರಿಯುತ್ತಿದ್ದರೂ ಪಪಂ ಸಿಬ್ಬಂದಿ ಸ್ವಚ್ಚಮಾಡದ ಪರಿಣಾಮ ಮೂಗು ಮುಚ್ಚಿಕೊಂಡು ಜನ ಓಡಾಡುವಂತ್ತಾಗಿದೆ ಎಂದು ಗ್ರಾಮಸ್ಥರ ದೂರಾಗಿದೆ.

       ಇನ್ನು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲು ದಶಕಗಳಿಂದ ಮನವಿ ಮಾಡಿದರೂ ಸ್ಪಂಧಿಸದ ಪರಿಣಾಮ ಎರಡ್ಮೂರು ಕಿ.ಮೀ ದೂರ ಕ್ರಮಿಸಿ ಶುದ್ಧ ನೀರು ತರಬೇಕಿದೆ. ಅಲ್ಲದೆ ಪಂಚಾಯ್ತಿಯಿಂದ ಅಸಮರ್ಪಕವಾಗಿ ನೀರು ಪೂರೈಸುತ್ತಿರುವುದರಿಂದ ನಿತ್ಯವೂ ಅವರಿವರ ಜಮೀನಿನ ಕೊಳವೆ ಬಾವಿಯಲ್ಲಿ ಕಾಡಿಬೇಡಿ ನೀರು ತರುವ ಅನಿವಾರ್ಯ ಕರ್ಮ ನಮ್ಮದಾಗಿದೆ ಎಂದು ಅಳಲನ್ನು ತೋಡಿಕೊಳ್ಳುತ್ತಾರೆ.

       ಹುಳಿಯಾರು ಪಟ್ಟಣದ ಸಮೀಪದಲ್ಲಿರುವ ಹಿಂದುಳಿದ ವರ್ಗದವರು, ರೈತಾಪಿವರ್ಗದವರು, ಕೂಲಿಕಾರ್ಮಿಕರು ವಾಸಿಸುತ್ತಿರುವ ಈ ಗ್ರಾಮದ ಸಮಸ್ಯೆಗೆ ಜನಪ್ರತಿನಿಧಿಗಳೂ ಸ್ಪಂದಿಸುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ನೀಡಲು ಮಾತ್ರ ರಾಜಕಾರಣಿಗಳು ಬರುತ್ತಾರೆ. ಚುನಾವಣೆಯಲ್ಲಿ ಗೆದ್ದ ತರವಾಯ ಇತ್ತ ತಿರುಗಿಯೂ ನೋಡದಂತ್ತಾಗಿದ್ದಾರೆ. ಇನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ತಿರುಗಿ ನೋಡಿ ಸಮಸ್ಯೆ ಪರಿಹರಿಸುವಂತೆ ಇಲ್ಲಿನ ಜನರು ಒತ್ತಾಯಿಸಿದ್ದಾರೆ.

(Visited 5 times, 1 visits today)

Related posts

Leave a Comment