ಇಸ್ರೋ : 100 ಕೋಟಿ ರೂ. ವೆಚ್ಚದಲ್ಲಿ ಟ್ಯಾಂಕರ್ ನಿರ್ಮಾಣ!

 ತುಮಕೂರು: 

      ನಗರದ ಇಸ್ರೋ ಕ್ಯಾಂಪಸ್‍ನಲ್ಲಿಂದು 100 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸುಮಾರು 15 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಟ್ಯಾಂಕರ್‍ಗಳ ನಿರ್ಮಾಣದ ಮೊದಲ ಹಂತದ ಕಾಮಗಾರಿಗೆ ಭೂಮಿಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಲಾಯಿತು.

      ಭೂಮಿಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರು ತುಮಕೂರಿನಲ್ಲಿ ವಿಶ್ವ ವಿಖ್ಯಾತ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತನ್ನ ಕಾರ್ಯಾರಂಭ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಇಂತಹ ಮಹತ್ವದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಲೋಕಸಭಾ ಅಧಿವೇಶನವನ್ನು ಬಿಟ್ಟು ಬಂದಿದ್ದೇನೆ ಎಂದು ತಿಳಿಸಿದರು.

      ದಿವಂಗತ ಕೆ.ಲಕ್ಕಪ್ಪನವರ ಪರಿಶ್ರಮದಿಂದ ತುಮಕೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಚ್.ಎಂ.ಟಿ ಕಾರ್ಖಾನೆ ದುರಾದೃಷ್ಠವಶಾತ್ ನಷ್ಟವುಂಟಾಗಿ ಮುಚ್ಚಲ್ಪಟ್ಟಾಗ ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಮನ ಒಲಿಸಿ ಇಸ್ರೋ ಸಂಸ್ಥೆಯನ್ನು ತುಮಕೂರಿಗೆ ತರುವಲ್ಲಿ ಸಹಕರಿಸಿದ ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಹಾಗೂ ಅವರ ತಂಡದವರ ಪರಿಶ್ರಮವನ್ನು ಅಭಿನಂದಿಸಿದರು. ಇಸ್ರೋ ಸಂಸ್ಥೆಯು ಇತ್ತೀಚಿನ ದಿನಮಾನಗಳಲ್ಲಿ ಅನೇಕ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಉಡಾವಣೆ ಮಾಡುವ ಮೂಲಕ ವಿಶ್ವದಾದ್ಯಂತ ತನ್ನ ಸಾರ್ವಭೌಮತೆಯನ್ನು ಮೆರೆಯುತ್ತಿದೆ. ಇಸ್ರೋ ಸಂಸ್ಥೆಯಿಂದ ತುಮಕೂರು ನಗರವು ವಿಶ್ವ ಭೂಪಟದಲ್ಲಿ ಸ್ಥಾನ ಪಡೆದುಕೊಂಡಿದೆ ಎಂದು ತಿಳಿಸಿದರು.

      ಇಸ್ರೋದ ಅಧ್ಯಕ್ಷ ಹಾಗೂ ಕೇಂದ್ರ ಸರ್ಕಾರದ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಡಾ.ಕೆ.ಶಿವನ್ ಮಾತನಾಡಿ ಈ ಟ್ಯಾಂಕರ್‍ಗಳನ್ನು ಉಪಗ್ರಹದಲ್ಲಿ ಇಂಧನ ಭರ್ತಿ ಮಾಡಲು ಬಳಸಲಾಗುವುದು. ಬಾಹ್ಯಾಕಾಶಕ್ಕೆ ಉಡಾವಣೆಗೊಳ್ಳುವ ಉಪಗ್ರಹಗಳಿಗೆ ಅಗತ್ಯವಿರುವ ಟ್ಯಾಂಕರ್‍ಗಳಿಗೆ ಪ್ರಪಂಚದಾದ್ಯಂತ ಬಹಳ ಬೇಡಿಕೆಯಿದ್ದು, ಕೇವಲ 6 ತಿಂಗಳೊಳಗೆ ಘಟಕದ ನಿರ್ಮಾಣದ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶವಿದೆ. ಅಂತರಿಕ್ಷಕ್ಕೆ ಇನ್ನೂ ಹೆಚ್ಚು ಉಪಗ್ರಹಗಳ ಉಡಾವಣೆಯ ಅಗತ್ಯತೆ ಮತ್ತು ಅನಿವಾರ್ಯತೆಯಿರುವುದರಿಂದ ತುಮಕೂರಿನ ಇಸ್ರೋ ಕ್ಯಾಂಪಸ್‍ನಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಇಂತಹ ಅನೇಕ ವಿಭಾಗಗಳ ಪ್ರಾರಂಭ ನಡೆಯಲಿದೆಯೆಂದು ಹೇಳಿದರು.

      ಸಮಾರಂಭದಲ್ಲಿ ಉಪಸ್ಥಿತರಿದ್ದಂತಹ ಇಸ್ರೋ ಹಿರಿಯ ಅಧಿಕಾರಿಗಳಾದ ಡಾ.ಗಂಗಾಧರ್, ಡಾ.ಶರ್ಮ, ಡಾ.ನಾರಾಯಣನ್, ಡಾ.ವೆಂಕಟಕೃಷ್ಣ, ಡಾ.ನಾಗೇಶ್ ಮಾತನಾಡಿದರು. ಇಸ್ರೋನ ಹಿರಿಯ ಅಧಿಕಾರಿ ಸರಸ್ವತಿ ವಂದಿಸಿದರು.

(Visited 12 times, 1 visits today)

Related posts

Leave a Comment