ಕೋವಿಡ್ ಲಸಿಕೆ ಬಗೆಗಿನ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ : ಸಚಿವ ಜೆ.ಸಿ.ಎಂ

ಚಿಕ್ಕನಾಯಕನಹಳ್ಳಿ:

      ಎರಡು ಹಂತದ ಲಸಿಕಾ ಅಭಿಯಾನದಲ್ಲಿ ರಾಜ್ಯದಲ್ಲಿ ತುಮಕೂರು ಜಿಲ್ಲೆ ಪ್ರಥಮಸ್ಥಾನದಲ್ಲಿದ್ದು ಮೂರನೇ ಲಸಿಕೆ ಹಂತದಲ್ಲಿಯುಸಹ ನಮಗೆ ನೀಡಿದ ಗುರಿಯನ್ನು ಸಾಧಿಸಲಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

      ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂರನೇ ಹಂತದ ಲಸಿಕಾ ಅಭಿಯಾನದಲ್ಲಿ ತಾವೇ ಲಸಿಕೆಯನ್ನು ಹಾಕಿಸಿಕೊಳ್ಳುವ ಮೂಲಕ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ಅವರು ಮಾತನಾಡಿ ಕೇಂದ್ರ ಸರ್ಕಾರದ ತೀರ್ಮಾನದಂತೆ ಮೂರನೇ ಹಂತದ ಲಸಿಕಾ ಅಭಿಯಾನದಲ್ಲಿ 60ವರ್ಷ ಮೇಲ್ಪಟ್ಟವರಿಗೆಲ್ಲಾ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ, ಅದರಲ್ಲೂ ಬಿಪಿ. ಮದುಮೇಹ, ಹೃದಯಸಂಬಂಧಿ ಇನ್ನಿತರ ಖಾಯಿಲೆಯಿಂದ ಬಳಲುತ್ತಿರುವವರೂಸಹ ವೈದ್ಯರ ಸಲಹೆಯಂತೆ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ ಇದರಿಂದ ಯಾವುದೇ ತೊಂದರೆ ಇರುವುದಿಲ್ಲ, ಅಪಪ್ರಚಾರಕ್ಕೆ ಕಿವಿಕೊಡದೆ 60ವರ್ಷ ಮೇಲ್ಪಟ್ಟವರು ನೊಂದಣಿ ಮಾಡಿಸಿ ಲಸಿಕೆ ಪಡೆಯಿರಿ ಎಂದರು. ಖಾಸಗಿಯಾಗಿ ರೂ.250 ಶುಲ್ಕ ನಿಗಧಿಯಾಗಿದ್ದು ಅಲ್ಲಿಯೂಸಹ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ. ನಮಗೆ ಜಿಲ್ಲೆಗೆ 50 ಸಾವಿರ ಗುರಿಯಿದ್ದು ಈಗ 10 ಸಾವಿರ ವ್ಯಾಕ್ಸಿನ್ ಬಂದಿದೆ. ಈಗಾಗಲೇ ಮೊದಲ ಹಾಗೂ ಎರಡನೇ ಹಂತದ ಲಸಿಕಾ ಅಭಿಯಾನದಲ್ಲಿ ಜೆಲ್ಲೆ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ 3 ನೇ ಹಂತದಲ್ಲೂ ನಾವು ಯಶಕಾಣುತ್ತೇವೆ ಎಂದರು.

      ಜಿಲ್ಲಾ ಆರೋಗ್ಯಾಧಿಕಾರಿ ನಾಗೇಂದ್ರಪ್ಪ ಮಾತನಾಡಿ ಮೊದಲ ಹಾಗೂ ಎರಡನೇ ಹಂತದಲ್ಲಿ ಕೊರೊನಾ ವಾರಿಯರ್ಸ್‍ಗಳು ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ನೀಡಿದ್ದು ಇದೀಗ ಸಾರ್ವಜನಿಕರಿಗೆ ನೀಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಮ್ಮ, ಜಿಲ್ಲಾ ಬಿಜೆಪಿಯ ಮಾಜಿ ಅಧ್ಯಕ್ಷ ಶಿವಪ್ರಸಾದ್, ನರುವಗಲ್ಲು ಅನಂತಯ್ಯ, ಎನ್.ಜಿ. ನಾಗರಾಜ್ ಮುಂತಾದವರು ಲಸಿಕೆ ಹಾಕಿಸಿಕೊಂಡರು. ತಾಲ್ಲೂಕು ವೈದ್ಯಾಧಿಕಾರಿ ನವೀನ್, ವೈದ್ಯರಾದ ವಿಜಯಭಾಸ್ಕರ್, ಕುಮಾರಸ್ವಾಮಿ, ನಟರಾಜ್ ಮತ್ತು ಸಿಬ್ಬಂದಿ ಹಾಜರಿದ್ದರು.

(Visited 4 times, 1 visits today)

Related posts