ಬೇಡಿಕೆ ಇಲ್ಲದೇ ತಿಪ್ಪೆ ಪಾಲಾದ ಜರ್ಬೇರಾ-ಕಾರ್ನೇಷನ್ ಹೂ!!

ಕೊರಟಗೆರೆ:

      ಕೃಷಿ ಸಚಿವರ ಸಹಾಯವಾಣಿಯು ಫಲ ನೀಡಲಿಲ್ಲ. ತೋಟಗಾರಿಕೆ ಇಲಾಖೆಯಿಂದ ಸ್ಪಂದನೆಯೇ ಸಿಕ್ಕಿಲ್ಲ. ಕಂದಾಯ ಇಲಾಖೆಯು ಅಂತರ್‍ಜಿಲ್ಲಾ ಪಾಸ್ ನೀಡಲಿಲ್ಲ. ತುಮಕೂರು ಜಿಲ್ಲಾಡಳಿತ ರೈತನ ಮನವಿಗೆ ಕ್ಯಾರೇ ಎನ್ನದ ಪರಿಣಾಮ ಪಾಲಿಹೌಸ್‍ನಲ್ಲಿ ಬೆಳೆದಿರುವ ಕೋಟ್ಯಾಂತರ ರೂ ಮೌಲ್ಯದ ಹತ್ತಾರು ಬಗೆಯ ಜರ್ಬೇರಾ ಮತ್ತು ಕಾರ್ನೇಷನ್ ಹೂಗಳಿಗೆ ಮಾರುಕಟ್ಟೆ, ವಹಿವಾಟು ಹಾಗೂ ಬೇಡಿಕೆ ಇಲ್ಲದೇ ತಿಪ್ಪೆಗೆ ಕಸವಾಗಿರುವ ಘಟನೆ ನಡೆದಿದೆ.

      ಕಲ್ಪತರುನಾಡು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಗ್ರಾಮದ ಹೂವು ಬೆಳೆಗಾರ ಗಿರೀಶ್ ಎಂಬಾತ ತನ್ನ 10ಎಕರೇ ಜಮೀನಿನಲ್ಲಿ 5ಕೋಟಿಗೂ ಅಧಿಕ ಬಂಡವಾಳ ಹೂಡಿಕೆ ಮಾಡಿ ಪಾಲಿಹೌಸ್ ನಿರ್ಮಾಣ ಮಾಡಿದ್ದಾರೆ. ಶುಭ ಸಮಾರಂಭದ ವೇದಿಕೆ ಮತ್ತು ದೇವಾಲಯದ ಅಲಂಕಾರಕ್ಕೆ ಬಳಕೆಯಾಗುವ ಡಿಸೈನ್ ಹೂವು ಕೊರೊನಾ ಲಾಕ್‍ಡೌನ್ ಸಂಕಷ್ಟದಿಂದ ರೈತನಿಗೆ 80ಲಕ್ಷಕ್ಕೂ ಅಧಿಕ ರೂ ನಷ್ಟವಾಗಿದೆ.

      ರಾಷ್ಟ್ರೀಯ ತೋಟಗಾರಿಕಾ ಮಿಷನ್ ಮತ್ತು ಮಂಡಳಿಯ ನೆರವಿನಿಂದ ಕೃಷಿಕ ಕೋಳಾಲ ಗಿರೀಶ್ ಕಳೆದ 10ವರ್ಷದ ಹಿಂದೆ 1ಎಕರೇ ಭೂಮಿಯಲ್ಲಿ ಪ್ರಾರಂಭವಾದ ಹೂವಿನ ಬೆಳೆಗೆ ಬೇಡಿಕೆ ಹೆಚ್ಚಾಗಿ ಇಂದು 5ಕೋಟಿ ಬಂಡವಾಳದಿಂದ 10ಎಕರೇ ಜಮೀನಿನಲ್ಲಿ ಪಾಲಿಹೌಸ್ ನಿರ್ಮಾಣ ಮಾಡಿ 4ಎಕರೇ ಜರ್ಬೇರಾ ಮತ್ತು 6ಎಕರೇಯಲ್ಲಿ ಕಾರ್ನೇಷನ್ ಹೂವು ಬೆಳೆದು ಕಳೆದ 6ವರ್ಷದಿಂದ ದೇಶದ ಹತ್ತಾರು ರಾಜ್ಯಗಳಿಗೆ ವಹಿವಾಟು ನಡೆಸುತ್ತಾರೆ.

      ಕಾರ್ನೇಷನ್ 1ಎಕರೇ ಹೂವಿನ ಪಾಲಿಹೌಸ್ ನಿರ್ಮಾಣಕ್ಕೆ 25ಲಕ್ಷ, ಗಿಡ ನೆಡಲು 10ಲಕ್ಷ, ಹನಿನೀರಾವರಿಗೆ 5ಲಕ್ಷ ಸೇರಿದಂತೆ ಸಹಾಸರಿ 45ಲಕ್ಷ ಖರ್ಚು ಆಗಲಿದೆ. ಪ್ರತಿತಿಂಗಳು ಎಕರೇಗೆ 4ಲಕ್ಷದಂತೆ 10ಎಕರೇಗೆ 40ಲಕ್ಷ ಆದಾಯ ಸಿಗಲಿದೆ. ಪ್ರತಿನಿತ್ಯ ದೆಹಲಿ, ಹೈದರಾಬಾದ್, ತಮಿಳುನಾಡು, ಬೆಂಗಳೂರು ವಹಿವಾಟು ನಡೆಯಬೇಕಾದ ಕೋಟ್ಯಾಂತರ ಮೌಲ್ಯದ ಹೂವು ಭೂತಾಯಿ ಮಡಿಲು ಮತ್ತು ರಾಸುಗಳಿಗೆ ಮೇವಾಗಿರುವ ಪರಿಣಾಮ ಜಿಲ್ಲಾಡಳಿತ ತಕ್ಷಣ ರೈತನ ಮನವಿಗೆ ಸ್ಪಂದಿಸಿ ಮಾರುಕಟ್ಟೆ ಮತ್ತು ವಹಿವಾಟಿಗೆ ಅನುಕೂಲ ಕಲ್ಪಿಸಬೇಕಾಗಿದೆ.

ಹೂವಿನ ಬದಲಾಗಿ ಶುಂಠಿ ಬೆಳೆ:

      10ಎಕರೇ ಭೂವಿಸ್ತೀರ್ಣದ ಪಾಲಿಹೌಸ್‍ನಲ್ಲಿ ಪ್ರತಿನಿತ್ಯ 30ಜನ ಹೊರರಾಜ್ಯದ ಕೂಲಿಕಾರ್ಮಿಕರು ಕೆಲಸ ಮಾಡುತ್ತಾರೆ. ಲಾಕ್‍ಡೌನ್‍ನಿಂದ ಹೂವಿನ ವಹಿವಾಟು ಇಲ್ಲದೇ 4ಎಕರೇ ಹೂವಿನ ಬೆಳೆ ನಾಶಪಡಿಸಿರುವ ಭೂಮಿಯಲ್ಲಿ ಶುಂಠಿ ಬೆಳೆಯನ್ನು ನಾಟಿ ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ತೋಟಗಾರಿಕೆ ಇಲಾಖೆ ರೈತನಿಗೆ ಪರವಾನಗಿ ಪತ್ರ ಕೊಡದಿರುವ ಪರಿಣಾಮ ಅಂತಃಜಿಲ್ಲಾ ಕೇಂದ್ರದಿಂದ ಶುಂಠಿ ಪೈರು ಖರೀದಿಸಲು ರೈತನಿಗೆ ಸಂಕಷ್ಟ ಎದುರಾಗಿದೆ.

ವಹಿವಾಟು ಇಲ್ಲದೇ ಮುದುಡಿದ ಹೂ:

ಕೋಳಾಲದ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆ ಕಳೆದ 1ವರ್ಷದಿಂದ ಖಾಲಿಯಿರುವ ಪರಿಣಾಮ ಹೂವಿನ ಬೆಳೆಗಾರರ ಸಂಕಷ್ಟ ಕೇಳೋರೇ ಇಲ್ಲದಾಗಿದೆ. 60ದಿನದ ಲಾಕ್‍ಡೌನ್‍ನಿಂದ ಜರ್ಬೇರಾ ಮತ್ತು ಕಾರ್ನೇಷನ್ ಹೂವಿನ ಬೇಡಿಕೆ ಇಲ್ಲದೇ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ವಹಿವಾಟು ಇಲ್ಲದೆ ಮುದುಡಿರುವ ಹೂವಿನ ಬೆಳೆಗೆ ಬೇಡಿಕೆ ಹೆಚ್ಚಾಗಲು ದೇವಾಲಯ ಹಾಗೂ ಶುಭಸಮಾರಂಭಗಳಿಗೆ ಅವಕಾಶ ಕಲ್ಪಿಸಿ ಅಂರ್ತರಾಜ್ಯ ಮತ್ತು ಜಿಲ್ಲೆಗಳಿಗೆ ಹೂವಿನ ಸಾಕಾಣಿಕೆಗೆ ಅವಕಾಶ ಕಲ್ಪಿಸಬೇಕಾಗಿದೆ.

(Visited 84 times, 1 visits today)

Related posts