ಮೂಡನಂಬಿಕೆ ಹೆಸರಲ್ಲಿ ವಂಚನೆ ; ಆರೋಪಿಗಳಿಗೆ ಸಜೆ

ಮಧುಗಿರಿ:

      ಜನರ ಮೂಡನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ವಂಚಿಸುತ್ತಿದ್ದ ವಂಚಕರಿಗೆ ನ್ಯಾಯಾಲಯ ದಿಂದ ಕಠಿಣ ಕಾರಾಗೃಹ ಶಿಕ್ಷೆ ನೀಡಲಾಗಿದೆ.

      ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಹಕ್ಕಿಪಿಕ್ಕಿ ಕಾಲೋನಿಯ ಆನಂದ, ದೀಪ, ಜಯ, ಅಜಯ್, ವಿಜಯ ಕುಮಾರ್, ಎನ್ನುವವರು ಜನರಿಗೆ ಐದು ಬೆರಳಿನ ಗೂಬೆ ಮತ್ತು ಎರಡು ತಲೆಗಳ ಹಾವನ್ನು ಮನೆಯಲ್ಲಿ ಇಟ್ಟುಕೊಂಡು ಸಾಕಿದರೆ ಬೇಗ ಶ್ರೀಮಂತರಾಗುತ್ತೀರಾ ಎಂದು ನಂಬಿಸಿ ಹಣ ವಸೂಲಿ ಮಾಡುತ್ತಿದ್ದರು.

       ಈ ಮಾಹಿತಿಯನ್ನಾಧರಿಸಿ ಸುವರ್ಣ ನ್ಯೂಸ್ ಚಾನೆಲ್‍ನ ವರದಿಗಾರರಾದ ರಾಘವೇಂದ್ರ ಮತ್ತು ರವಿ ಕುಮಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಂದಿನ ಸಿಇಎನ್ ಪೊಲೀಸ್ ಠಾಣೆಯ ರಾಘವೇಂದ್ರ ಕೆ.ಆರ್.ರವರು ತನ್ನ ಸಿಬ್ಬಂದಿಯೊಂದಿಗೆ ಆರೋಪಿತರ ಮೇಲೆ ದಾಳಿ ಮಾಡಿ ಅವರ ಬಳಿ ಇದ್ದ ಕಬ್ಬಿಣದ ಚಾಕು, ರಾಡು ಮತ್ತು ಕಾರದ ಪುಡಿ ವಶಪಡಿಸಿಕೊಂಡಿದ್ದರು.

       ಇದರ ಸಂಬಂಧ ಕೊರಟಗೆರೆಯ ನೀರೀಕ್ಷಕರಾದ ಮನಿರಾಜು ಮತ್ತು ಪ್ರಭಾಕರ್ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾದ ನಿರಂಜನ ಮೂರ್ತಿಯವರು ವಾದ ಮಂಡಿಸಿದ್ದರು. ಮಧುಗಿರಿಯ ನಾಲ್ಕನೇ ಅಧಿಕ ಮತ್ತು ಸತ್ರ ನ್ಯಾಯಾಧೀಶರಾದ ತಾರಾಕೇಶ್ವರ ಗೌಡ ಪಾಟೀಲ್‍ರವರು 5 ಜನ ಆರೋಪಿತರಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ್ದು, ಮತ್ತು 10,000 ದಂಡ ವಿಧಿಸಿದೆ. ದಂಡದ ಹಣದಲ್ಲಿ ಸುವರ್ಣ ನ್ಯೂಸ್ ಚಾನೆಲ್‍ನ ವರದಿಗಾರರಾದ ರಾಘವೇಂದ್ರ ಮತ್ತು ರವಿಕುಮಾರ್‍ಗೆ ತಲಾ 15 ಸಾವಿರದಂತೆ ಪರಿಹಾರ ನೀಡುವಂತೆ ತೀರ್ಪು ನೀಡಿರುತ್ತಾರೆ.

(Visited 219 times, 1 visits today)

Related posts

Leave a Comment