ಮಧುಗಿರಿ ಪುರಸಭೆಯಿಂದ ಸಿದ್ದಾಪುರ ಕೆರೆಯ ನೀರು ಮಲಿನ!

ಮಧುಗಿರಿ :

      ಪಟ್ಟಣದ ಜನತೆಗೆ ಕುಡಿಯುವ ನೀರಿನ ದಾಹ ತೀರಿಸುತ್ತಿರುವ ಸಿದ್ದಾಪುರ ಕೆರೆಯಲ್ಲಿ ಪುರಸಭೆಯವರು ಸಕ್ಕಿಂಗ್ ಯಂತ್ರವನ್ನು  ತೊಳೆದು ಹೇಮಾವತಿ ನೀರನ್ನು ಮಲಿನ ಮಾಡುತ್ತಿರುವುದು ನಿಜಕ್ಕೂ ಅಸಹ್ಯಕರ ಘಟನೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

       ದೇಶದೆಲ್ಲೆಡೆ ಸ್ವಚ್ಛ ಭಾರತದ ಘೋಷಣೆ ಮಂತ್ರ ಜಪಿಸುತ್ತಿದ್ದರೆ. ಪುರಸಭೆಯವರು ಮಾತ್ರ ಪಟ್ಟಣದ ಜನತೆಗೆ ಕುಡಿಯುವ ನೀರೊದಗಿಸುವ ಸಿದ್ದಾಪುರ ಕೆರೆಯಲ್ಲಿ ಸಕ್ಕಿಂಗ್ ಯಂತ್ರ ತೊಳೆಯುವ ಮೂಲಕ ಹೇಮೆಯನ್ನು ಕಲುಷಿತಗೊಳಿಸಿ ಸ್ವಚ್ಛ ಭಾರತದ ಘೋಷಣೆಗೆ ವಿರುದ್ಧ ನಿಂತಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

       ದಸರಾ ಹಬ್ಬದ ಹಿನ್ನೆಲೆಯಲ್ಲಿ ಮಧುಗಿರಿ ಪುರಸಭೆಗೆ ಸೇರಿದ ಸಕ್ಕಿಂಗ್ ಯಂತ್ರ ವನ್ನು ಸಿದ್ದಾಪುರ ಕೆರೆಗೆ ತಂದು ನಿಲ್ಲಿಸಿ ಆ ವಾಹನವನ್ನು ಕೆರೆಯೊಳಗೆ ತೊಳೆದು ನಿಲ್ಲಿಸಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತ ಪುರಸಭೆ ಯವರ ಘನ ಕಾರ್ಯದ ಬಗ್ಗೆ ವ್ಯಾಪಕವಾದ ಟೀಕೆಗಳಿಗೆ ಪುರಸಭಾ ಸಿಬ್ಬಂದಿವರ್ಗ ಒಳಗಾಗಿದೆ. ಮಲದ ಗುಂಡಿಗಳನ್ನು ಕ್ಲೀನ್ ಮಾಡುವ ಯಂತ್ರವನ್ನು ತೊಳೆದಿರುವುದು ಸರಿಯಲ್ಲ ಹಾಗೂ ಇದರಿಂದ ಕೆರೆಯ ನೀರು ಮಲಿನವಾಗುವ ಜೊತೆಗೆ ನೀರಿನಲ್ಲಿರುವ ಜಲಚರ ಪ್ರಾಣಿಗಳಿಗೂ ಸಹ ಕಂಟಕ ವಾಗುತ್ತದೆ ಎಂಬ ಪ್ರಜ್ಞೆ ಪುರಸಭಾ ಸಿಬ್ಬಂದಿಗೆ ತಿಳಿದಿಲ್ಲವೇ. ಕುಡಿಯುವ ನೀರಿನ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದ ಪುರಸಭೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾರ್ವಜನಿಕರು ಇದೊಂದು ಬೇಜವಾಬ್ದಾರಿ ಕೆಲಸವೆಂದು ಟೀಕಿಸುತ್ತಿದ್ದಾರೆ.

      ಇತ್ತೀಚೆಗಂತೂ ಕೆರೆಗಳಲ್ಲಿ ವಾಹನಗಳನ್ನು ತೊಳೆಯುವುದು ಹೆಚ್ಚು ಕಂಡು ಬರುತ್ತಿದ್ದು ಇಂತಹ ಮಲೀನ ಕಾರ್ಯಗಳ ಬಗ್ಗೆ ಕೆರೆಯ ಬಳಿ ಸೂಚನಾ ಫಲಕಗಳನ್ನು ಆಳವಡಿಸುವ ಮೂಲಕ ಜನರಿಗೆ ಅರಿವು ಮೂಡಿಸಿ ನೀರಿನ ಮಹತ್ವ ಹಾಗೂ ಸ್ವಚ್ಚತಾ ಕಾರ್ಯ ನಿರ್ವಸುವ ಕೆಲಸ ಮಾಡಬೇಕಾದ ಪುರಸಭೆಯೆ ಇಂತಹ ಮಲೀನ ಕಾರ್ಯ ಮಾಡಿರುವುದು ಎಷ್ಟು ಸರಿ. ಇಷ್ಟು ವರ್ಷಗಳಾದರೂ ಹೇಮಾವತಿ ನೀರು ನಿಲ್ಲುತ್ತಿರುವ ಸಿದ್ದಾಪುರ ಕೆರೆಯ ಬಳಿ ಎಲ್ಲಿಯೂ ಸಹ ಸೂಚನಾ ಫಲಕಗಳು ಆಳವಡಿಸದೆ ಇರುವುದು ಪುರಸಭೆಯವರ ದಿವ್ಯ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಪುರಸಭೆಯವರು ಎಚ್ಚರಿಕೆ ವಹಿಸುವರೇ ಎಂದು ಕಾದು ನೋಡಬೇಕಿದೆ.

(Visited 9 times, 1 visits today)

Related posts