ಮಧುಗಿರಿ :

      ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಗುರುವಾರ ತಡರಾತ್ರಿ ಹೆಬ್ಬಾವು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಕಿಡಿಗೇಡಿಗಳ ದಾಳಿಗೆ ಬಲಿಯಾಯ್ತ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

       ರಾತ್ರಿ ಸುಮಾರು 11 ಘಂಟೆಯ ಸಂದರ್ಭದಲ್ಲಿ ಆಸ್ಪತ್ರೆಯ ಆವರಣದ ಕಾಂಪೌಂಡ್ ಮೇಲ್ಬಾಗದಲ್ಲಿ ಹೆಬ್ಬಾವು ಓಡಾಡುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರು ಭಯಬೀತರಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದಾಗ ಹೆಬ್ಬಾವು ಚರಂಡಿಯೊಳಗೆ ನುಸುಳಿದೆ. ಚರಂಡಿಯೊಳಗೆ ಹೋದ ಹಾವು ಮತ್ತೆ ಮೇಲೆ ಬರುವುದಿಲ್ಲ. ಯಾರಿಗೂ ಏನೂ ತೊಂದರೆ ಮಾಡುವುದಿಲ್ಲ. ಬೆಳಗ್ಗೆ ಬಂದು ಹಿಡಿಯುವುದಾಗಿ ಸಿಬ್ಬಂದಿ ಅಲ್ಲಿಂದ ನಿರ್ಗಮಿಸಿದ್ದಾರೆ.

      ಸ್ವಲ್ಪ ಸಮಯದ ನಂತರ ಮತ್ತೆ ಮೇಲೆ ಬಂದ ಹಾವು ಅಸ್ಪತ್ರೆಯ ಆವರಣ ಕಾಂಪೌಂಡ್ ಮೇಲ್ಬಾಗದಲ್ಲಿ ಓಡಾಡಿದೆ. ಇದರಿಂದ ಗಾಬರಿಗೊಂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಹೊರಕ್ಕೆ ಓಡಿ ಬಂದಿದ್ದಾರೆ. ಒಂದು ಘಂಟೆಯಾದರೂ ಹೆಬ್ಬಾವು ಆಸ್ಪತ್ರೆಯ ಕಾಂಪೌಚಿಡ್ ಮೇಲಿಂದ ಕದಲದೆ ಮಲಗಿಬಿಟ್ಟಿದೆ. ಈ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಹಾವನ್ನು ಕಲ್ಲಿನಿಂದ ಹೊಡೆದು ಹಾಕಿ ಸಾಯಿಸಿದ್ದಾರೆ.

      ಹಾವನ್ನು ಯಾರೂ ಸಾಯಿಸಿಲ್ಲ. ನಾವು ಅದನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದೇವೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಹೇಳಿದರೆ, ಹಾವನ್ನು ಹೊಡೆದು ಸಾಯಿಸಿ ಕೈಯಲ್ಲಿ ಹಿಡಿದಿರುವ ಚಿತ್ರಗಳು ವಾಟ್ಸಪ್‍ನಲ್ಲಿ ಹರಿದಾಡುತ್ತಿವೆ.

      ಹೆಚ್ಚಾಗಿ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಹೆಬ್ಬಾವು ಪಟ್ಟಣದ ಹೃದಯ ಭಾಗದಲ್ಲಿರುವ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಅದರಲ್ಲೂ ಜನನಿಬಿಡ ಪ್ರದೇಶದಲ್ಲಿ ಕಾಣಿಸಿಕೊಂಡಿರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ.

      ಒಟ್ಟಿನಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಹೆಬ್ಬಾವು ಕಿಡಿಗೇಡಿಗಳ ದಾಳಿಗೆ ಬಲಿಯಾಯಿತಾ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿದ್ದು, ಇಲಾಖೆಯ ಸಿಬ್ಬಂದಿ ತಡ ರಾತ್ರಿಯೇ ಹಾವನ್ನು ರಕ್ಷಿಸಿ ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಡಬಹುದಾಗಿತ್ತು. ಆದರೆ ಅವರು ಬೆಳಗ್ಗೆ ಬಂದು ಹಿಡಿಯುವುದಾಗಿ ತಿಳಿಸಿ ಹೋದರು. ಇಲ್ಲಿನ ಸುತ್ತಮುತ್ತ ಮನೆಗಳಿದ್ದು, ಯಾರದ್ದಾದರೂ ಮನೆಗೆ ನುಗ್ಗುತ್ತದೆ ಎಂದು ರಾತ್ರಿಯೆಲ್ಲಾ ಕಾವಲಿರಬೇಕಾಯಿತು. ಅವರ ನಿರ್ಲಕ್ಷ್ಯಕ್ಕೆ ಹಾವು ಬಲಿಯಾಯಿತು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

(Visited 22 times, 1 visits today)