ಮಧುಗಿರಿ : 

      ಮಧುಗಿರಿ ಪುರಸಭೆ ಅಧ್ಯಕ್ಷರಾಗಿ ತಿಮ್ಮರಾಜು( ತಿಮ್ಮರಾಯಪ್ಪ) ಹಾಗೂ ಉಪಾಧ್ಯಕ್ಷರಾಗಿ ರಾಧಿಕಾ ಆನಂದಕೃಷ್ಣ ರವರುಗಳು “ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ನವರ ಬಲದಿಂದಾಗಿ’ ಬುಧವಾರದಂದು ಅವಿರೋಧವಾಗಿ ಆಯ್ಕೆಯಾದರು.

      ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು.21 ನೇ ವಾರ್ಡಿನಿಂದ ಆಯ್ಕೆಯಾಗಿದ್ದ ತಿಮ್ಮರಾಯಪ್ಪ ಅವರನ್ನು ಲಾಲಪೇಟೆ ಮಂಜುನಾಥ್ ಮತ್ತು ಮಂಜುನಾಥಾಚಾರ್ ರವರು ಸೂಚಿಸಿದರು. ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು 20 ನೇ ವಾರ್ಡ್ ನಿಂದ ಆಯ್ಕೆಯಾಗಿದ್ದ ರಾಧಿಕಾ ಅನಂದಕೃಷ್ಣರವರಿಗೆ ಅಲೀಂಮುಲ್ಲಾ ಮತ್ತು ನಟರಾಜು ರವರು ಸಿ. ಸೂಚಿಸಿದ್ದಾರೆ.

      ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಿಮ್ಮರಾಯಪ್ಪ ಹಾಗೂ ರಾಧಿಕ ಅನಂದಕೃಷ್ಣರವರನ್ನು ಬಿಟ್ಟರೆ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಡಾ. ಜಿ. ವಿಶ್ವನಾಥ್ ಇವರಿಬ್ಬರನ್ನು ಅವಿರೋಧವಾಗಿ ಬಆಯ್ಕೆಯಾಗಿರುವುದಾಗಿ ಘೋಷಿಸಿದರು.

      1998 ರ ಸೆಪ್ಟೆಂಬರ್ 11 ರಂದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ವು ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ಮಹಿಳೆಗೆ ಮೀಸಲಾದ ನಂತರ 2020 ರ ನವೆಂಬರ್ 4 ರಂದು ನಡೆದ ಚುನಾವಣೆಯಲ್ಲಿ ಅದೇ ಮೀಸಲಾತಿ ಪುನರಾವರ್ತನೆಯಾಗಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಆಗ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಅಂಜಿನಪ್ಪ ಖಾಸಗಿ ಬಸ್ ಏಜೆಂಟರಾಗಿ ಕೆಲಸ ಮಾಡುತ್ತಿದ್ದರು. ಈಗ ಆಯ್ಕೆಯಾಗಿರುವ ತಿಮ್ಮರಾಯಪ್ಪ ತಮ್ಮ ಜೀವನವನ್ನು ಹಮಾಲಿಯಾಗಿ ಆರಂಭಿಸಿ ಹಂತ ಹಂತವಾಗಿ ರಾಜಕಾರಣದಲ್ಲಿ ಬೆಳೆದು ಮಧುಗಿರಿಯ ಪ್ರಥಮ ಪ್ರಜೆಯಾಗಿದ್ದಾರೆ. ಸತತವಾಗಿ 3ಬಾರಿ ಪುರಸಭಾ ಸದಸ್ಯರಾಗಿ ಆಯ್ಕೆ ಆಗಿ ಹ್ಯಾಟ್ರಿಕ್ ಹೀರೋ ಎನ್ನಿಸಿದ್ದಾರೆ. ಹತ್ತನೇ ವಾರ್ಡ್ ನಿಂದ 2ಬಾರಿ ಮತ್ತು ಇಪ್ಪತ್ತೊಂದ ನೇ ವಾರ್ಡಿನಿಂದ 1ಬಾರಿ ಪುರಸಭಾ ಸದಸ್ಯ ರಾಗಿದ್ದಾರೆ. ಅಧ್ಯಕ್ಷ ತಿಮ್ಮರಾಯಪ್ಪ ನವರನ್ನು ಪಕ್ಷಾತೀತವಾಗಿ ಎಲ್ಲರೂ ಬೆಂಬಲಿಸಿದ್ದಾರೆ ಕಾರಣ ಸದಾಕಾಲವೂ ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಗುಣ ಇವರ ಟ್ರಂಪ್ ಕಾರ್ಡ್ ಆಗಿದ್ದು, ತಳಮಟ್ಟದಿಂದ ರಾಜಕೀಯವಾಗಿ ಬೆಳೆದು 3ಬಾರಿ ಮಧುಗಿರಿ ಟೌನ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ, ಎಪಿಎಂಸಿ ಸದಸ್ಯರಾಗಿ ತಾಲ್ಲೂಕು ನಾಯಕ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

      ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ರಾಧಿಕಾ ಆನಂದಕೃಷ್ಣ ರವರು ಮೂಲತಃ ಚಳ್ಳಕೆರೆಯವರಾಗಿದ್ದು ಆನಂದಕೃಷ್ಣರವರನ್ನು ವಿವಾಹವಾಗಿ ಮಧುಗಿರಿಯಲ್ಲಿ ನೆಲೆಸಿದ್ದಾರೆ. ಇವರು ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದಾರೆ. ಇಪ್ಪತ್ತನೇ ವಾರ್ಡಿನ ಸದಸ್ಯರಾಗಿ ಆಯ್ಕೆಯಾಗಿದ್ದು. ಇಪ್ಪತ್ತೆರಡು ವರ್ಷಗಳ ನಂತರ ವೈಶ್ಯ ಸಮುದಾಯದವರೊಬ್ಬರು ಮತ್ತೆ ಉಪಾಧ್ಯಕ್ಷರಾಗಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ ರಾಧಿಕಅನಂದಕೃಷ್ಣರವರ ಅತ್ತೆ ಲಕ್ಷ್ಮಿದೇವಿಯವರು ಉಪಾಧ್ಯ ಕ್ಷರಾಗಿದ್ದರು.


ಪುರಸಭೆಯಲ್ಲಿ ಪಕ್ಷಗಳ ಬಲಾಬಲ:

      23 ಸದಸ್ಯರ ಬಲ ಇರುವ ಮಧುಗಿರಿ ಪುರಸಭೆಯಲ್ಲಿ ಕಾಂಗ್ರೆಸ್-13 ಜೆಡಿಎಸ್- 9ಹಾಗೂ ಪಕ್ಷೇತರರು ರೊಬ್ಬರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತವಿದ್ದು ಜೆಡಿಎಸ್ ನಿಂದ ಆಯ್ಕೆಯಾಗಿರುವ ತಿಮ್ಮರಾಯಪ್ಪ, ಲಾಲಾಪೇಟೆ ಮಂಜುನಾಥ್, ಮಂಜುನಾಥಾಚಾರ್ ಪಾರ್ವತಮ್ಮ ಹಾಗೂ ಪಕ್ಷೇತರ ಅಭ್ಯರ್ಥಿ ನಸಿಯಾಬಾನು ಇವರೆಲ್ಲರೂ ಕಾಂಗ್ರೆಸ್ ಬೆಂಬಲಿಸಿದ ಕಾರಣ ಈಗ ಪುರಸಭೆ ಯಲ್ಲಿ ಕಾಂಗ್ರೆಸ್ ಸಂಖ್ಯಾಬಲ ಹದಿನೆಂಟು ಕ್ಕೇರಿದೆ .

       ಜೆಡಿಎಸ್ ಗೆ ಮುಖಭಂಗ: ಜೆಡಿಎಸ್ ನ ಸ್ಥಳೀಯ ಶಾಸಕ ರಿದ್ದರೂ ಕೂಡ ಜೆಡಿಎಸ್ ನಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಯಾರೂ ಇಲ್ಲದ ಕಾರಣ ಕಾಂಗ್ರೆಸ್ ಜಯಭೇರಿ ಬಾರಿಸಿದಂತಾಗಿದೆ.ಜೆಡಿಎಸ್ ನವರು ಮಾತ್ರ ಮೊಂಡು ವಾದಕ್ಕಿಳಿದಿದ್ದು, ತಿಮ್ಮರಾಯಪ್ಪ ಜೆಡಿಎಸ್ ನವರು ಎಂದು ಹೋಟೆಲ್ ಗಳಲ್ಲಿ, ಹಾದಿಬೀದಿಗಳಲ್ಲಿ ಫುಟ್ ಪಾತ್ ಗಳಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಜೆಡಿಎಸ್ ಗೆ ಭಾರೀ ಮುಖಭಂಗವಾಗಿದ್ದರೂ ಕೂಡ ಜೆಟ್ಟಿ ಸೋತರು ಮೀಸೆ ಮಣ್ಣಾಗಿಲ್ಲ ಎನ್ನುವ ಸ್ಥಿತಿ ಜೆಡಿಎಸ್ ನದ್ದಾಗಿದೆ.

       ಕಾಂಗ್ರೆಸ್ ಪಾರುಪತ್ಯ:

      ಮಧುಗಿರಿ ಪುರಸಭೆ ಆಡಳಿತ ‘ಕೈ’ ವಶವಾದ ನಂತರ ಇದಕ್ಕೂ ಮುನ್ನ ನಡೆದ ಎಪಿಎಂಸಿ, ಪಿಎಲ್ ಡಿ ಬ್ಯಾಂಕ್, ವಿಎಸ್ಸೆಸ್ಸೆನ್, ಟಿಎಪಿಸಿಎಂಎಸ್, ಗಳಲ್ಲಿ ನ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗುವ ಮೂಲಕ ಪಾರುಪತ್ಯ ಸಾಧಿಸಿದ್ದಾರೆ. ಪಿಎಲ್ ಡಿ ಬ್ಯಾಂಕ್ ನಲ್ಲಿ ಮತ್ತು ಟಿಎಪಿಸಿಎಂಎಸ್ ನ ಎಲ್ಲಾ ನಿರ್ದೇಶಕ ಸ್ಥಾನಗಳು ಕಾಂಗ್ರೆಸ್ ಬೆಂಬಲಿತರು ಅವಿರೋಧವಾಗಿ ಆಯ್ಕೆಗೊಂಡು ಜೆಡಿಎಸ್ ಬೆಂಬಲಿತ ಯಾರೊಬ್ಬರೂ ಸಹ ಆಯ್ಕೆ ಯಾಗದೆ ಪೂರಾ ನೆಲಕಚ್ಚಿದೆ. ಇನ್ನೂ ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಅತಿ ಹೆಚ್ಚು ಸ್ಥಾನ ಪಡೆದಯುವುದೆ ಮುಂದಿನ ಹೆಜ್ಜೆ ಯಾಗಿದ್ದು “ಕೆಎನ್‍ಆರ್’ ರವರ ಹೆಸರು ಅಭ್ಯರ್ಥಿಗಳ ಅಭ್ಯರ್ಥಿಗಳ ಸಹಕಾರಿಯಾಗಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಲು ಡಿಮ್ಯಾಂಡಪ್ಪೋ ಡಿಮ್ಯಾಂಡ್ ಎನ್ನುವ ಪರಿಸ್ಥಿತಿ ನಿರ್ಮಾಣ ವಾಗಿದೆ.

      ಬಿಟ್ಟ ಗ್ರಹಣ: 2018 ರ ಸೆಪ್ಟೆಂಬರ್ 3ರಂದು ಚುನಾಯಿತರಾಗಿದ್ದ ಪುರಸಭಾ ಸದಸ್ಯರು ಅಧಿಕೃತವಾಗಿ 2020 ನವೆಂಬರ್ 4 ರಂದು ಸದಸ್ಯರಾಗಿ ಪುರಸಭೆಗೆ ಪಾದಾರ್ಪಣೆ ಮಾಡಿದ್ದು. ಇಲ್ಲಿಂದ 5ವರ್ಷ ಸದಸ್ಯರಾಗಿರುತ್ತಾರೆ. 2ವರ್ಷ 2ತಿಂಗಳ ನಂತರ ಸದಸ್ಯರಾಗಲು ಶಬರಿ ರಾಮನಿಗೆ ಕಾದ ರೀತಿ ಯಲ್ಲಿ ಕಾದಿದ್ದು, ಅವರಿಗೆ ಹಿಡಿದಿದ್ದ ಗ್ರಹಣ ಬಿಟ್ಟಂತಾಗಿದೆ.

      ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಯಲ್ಲಿ ರೋಸ್ಟರ್ ಪದ್ದತಿ ಸರ್ಕಾರ ಸರಿಯಾಗಿ ಮಾಡಿಲ್ಲವೆಂದು ಕೆಲವು ಸದಸ್ಯರುಗಳು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ ಕಾರಣ ಪುರಸಭಾ ಸದಸ್ಯರಾಗಲು ತಡವಾಗಿದೆ. ಕೊನೆಗೂ ಉಚ್ಚ ನ್ಯಾಯಾಲಯವು ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನವೆಂಬರ್ ಹತ್ತು ರೊಳಗೆ ನಡೆಸುವಂತೆ ಆದೇಶಿಸಲು ಹಿನ್ನಲೆಯಿಂದಾಗಿ ಸದಸ್ಯರಾಗಲು ಹಿಡಿದಿದ್ದ ಗ್ರಹಣ ಬಿಟ್ಟಂತಾಗಿದೆ.
ಮಧುಗಿರಿ ಪುರಸಭೆ ಹೊರತು ಪಡಿಸಿ ಜಿಲ್ಲೆಯ ಬಹುತೇಕ ಪುರಸಭೆ ಮತ್ತು ಪಟ್ಟಣಪಂಚಾಯ್ತಿಗಳಲ್ಲಿ ಜೆಡಿಎಸ್ ಅಡಳಿತ ಹಿಡಿಯುವ ಪ್ರಯತ್ನ ದಲ್ಲಿದೆ.

ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದ ಸಧಸ್ಯರುಗಳು ಮತ್ತು ಗಣ್ಯರು::

      ಗಿರಿಜಾಮಂಜುನಾಥ್,ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಂ.ಎಸ್.ಮಲ್ಲಿಕಾರ್ಜುನಯ್ಯ, ಎಸ್.ಅರ್.ರಾಜ್ ಗೋಪಾಲ್,ಕಸಾಬ ವಿಎಸ್‍ಎಸ್ ಎನ್ ಅಧ್ಯಕ್ಷ ಸಿದ್ದಾಪುರ ವೀರಣ್ಣ ಹಾಜರಿದ್ದರು.

(Visited 30 times, 1 visits today)