ಸಾರ್ವಜನಿಕರಿಗೆ ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಬೇಕು-ಶಾಸಕ

ಮಧುಗಿರಿ :

      ಸಾರ್ವಜನಿಕರು ನೀಡುವ ಒಂದು ಅರ್ಜಿಯು ಕೇವಲ ಕಾಗದವಲ್ಲ. ಅದರಲ್ಲಿ ನೊಂದವರ ಬದುಕು ಅಡಗಿದ್ದು, ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಕಿವಿಮಾತು ಹೇಳಿದರು.

      ತಾಲೂಕಿನ ಐ.ಡಿ.ಹಳ್ಳಿ ಹೋಬಳಿಯ ದೊಡ್ಡದಾಳವಟ್ಟ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಹೋಬಳಿ ಮಟ್ಟದ ಪ್ರಥಮ ಜನಸ್ಪಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಧಿಕಾರಿಗಳು ಕೇವಲ ಅರ್ಜಿಯನ್ನು ಪಡೆದರಷ್ಟೆ ಸಾಲದು. ಅವರ ಸಮಸ್ಯೆಗೆ ಮುಂದಿನ ಜನಸ್ಪಂದನೆ ಕಾರ್ಯಕ್ರಮದ ಹೊತ್ತಿಗೆ ಸ್ಪಷ್ಟ ಪರಿಹಾರ ಕೊಡಿಸಬೇಕು. ಹಾಗೂ ಅಧಿಕಾರಿಗಳು ಈ ಕಾರ್ಯಕ್ರಮದ ಅರ್ಜಿಗೆ ಪ್ರತ್ಯೇಕ ಕಡತವನ್ನು ಇಡಬೇಕು. ಇಂದಿನ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಕಂದಾಯ ಇಲಾಖೆಯ ಸಮಸ್ಯೆಗಳು ಇದ್ದು, ಖಾತೆ ಬದಲಾವಣೆ, ಪವತಿ ಖಾತೆ ಹಾಗೂ ಪಹಣಿ ತಿದ್ದುಪಡಿಯನ್ನು ಮಾಡಬೇಕಿದ್ದು, ಹಲವಾರು ವರ್ಷಗಳಿಂದ ಬಾಕಿಯಿದೆ. ಹಾಗೂ ಸಾಮಾನ್ಯ ವರ್ಗದ ಮನೆಗಳಿಗೆ ಬೇಡಿಕೆಯಿದ್ದು, ಹೆಚ್ಚುವರಿ 700 ಮನೆಗಳು ಹಾಗೂ ಅಂಬೇಡ್ಕರ್ ವಸತಿ ನಿಗಮದಿಂದ 1 ಸಾವಿರ ಮನೆಗಳನ್ನು ತಂದಿದ್ದು, ವಸತಿ ರಹಿತರಿಗೆ ಹಂಚಿಕೆ ಮಾಡಲಾಗುವುದು. ಯಾವುದೇ ಅರ್ಜಿ ಹಿಡಿದು ಬರುವ ವ್ಯಕ್ತಿಯನ್ನು ವೃಥಾ ಅಲೆದಾಡಿಸದೆ ಶೀಘ್ರವಾಗಿ ಕೆಲಸ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಪಿಂ+ಚಣಿಯ ಹಣವನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮುಂದಿನ ಬಾರಿಯಿಂದ ಹೆಚ್ಚಿಸಲು ಕ್ರಮ ಕೈಗೊಂಡಿದ್ದು, ಕಾರ್ಯಕರ್ತರು ಗ್ರಾಮಗಳಲ್ಲಿನ ಅರ್ಹ -ಫಲಾನುಭವಿಗಳ ಪಟ್ಟಿ ಮಾಡಿಕೊಂಡು ಅವರಿಗೆ ಆದ್ಯತೆ ಮೇರೆಗೆ ಪಿಂಚಣಿ ಆದೇಶವನ್ನು ಕೊಡಿಸಲು ಮುಂದಾಗುವಂತೆ ಸೂಚಿಸಿದರು. ಇಂದು ಸ್ಥಳದಲ್ಲೇ ಅರ್ಜಿಗಳಿಗೆ ಪರಿಹಾರ ಕೊಡಲು ಮುಂದಾಗಿದ್ದು, ತೃಪ್ತಿ ತಂದಿದೆ. ಅಧಿಕಾರಿಗಳು ಮತ್ತಷ್ಟೂ ಹೆಚ್ಚಿನ ಪ್ರಯತ್ನದಿಂದ ಮುಂದಿನ ಜನಸ್ಪಂದನಾ ಕಾರ್ಯಕ್ರಮಕ್ಕೆ ಸಿದ್ದರಾಗಿ ಬರುವಂತೆ ತಿಳಿಸಿದರು.

      ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ ಮಾತನಾಡಿ ಈ ಕಾರ್ಯಕ್ರಮ ಜನರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯಕ್ರಮವಾಗಿದೆ. ಪ್ರತಿ ಇಲಾಖೆಗಳ ಅರ್ಜಿಗೆ ಪ್ರತ್ಯೇಕ ಕೌಂಟರ್ ಇರಲಿದ್ದು, ನಿಮ್ಮ ಸಮಸ್ಯೆಯನ್ನು ಸಾಧ್ಯವಾದಷ್ಟೂ ಸ್ಥಳದಲ್ಲೇ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು

      ತಹಶೀಲ್ದಾರ್ ನಂದೀಶ್ ಮಾತನಾಡಿ ಜನರ ಮನೆ ಬಾಗಿಲಿಗೆ ಸರ್ಕಾರ ಬರುವಂತ ಕಾರ್ಯಕ್ರಮ ಇದಾಗಿದ್ದು, ಶಾಸಕರ ಸೂಚನೆಯಂತೆ ಪ್ರತಿ ಶುಕ್ರವಾರ ಜನಸ್ಪಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮುಂದಿನ ಶುಕ್ರವಾರ ಜು.5 ರಂದು ಗರಣಿ ಗ್ರಾ.ಪಂ.ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸ್ಥಳದಲ್ಲೇ ಸಮಸ್ಯೆ ಬಗೆಹರಿಸುವ ಕಾರ್ಯಕ್ರಮವಾಗಿದ್ದು, ಅರ್ಜಿ ಸಲ್ಲಿಸುವವರು ಅಂದು ಕೂಡ ಸಭೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

     ಕಾರ್ಯಕ್ರಮದಲ್ಲಿ ತಾ.ಪಂ. ಇಓ ನಂದಿನಿ, ಚಿಕ್ಕದಾಳವಟ್ಟ ಗ್ರಾ.ಪಂ.ಅಧ್ಯಕ್ಷ ಸುಜಾತ, ಮಾಜಿ ಜಿ.ಪಂ.ಸದಸ್ಯ ವೆಂಕಟರಂಗಾರೆಡ್ಡಿ, ಕಂದಾಯಾಧಿಕಾರಿ ನಾರಾಯಣಪ್ಪ, ಪಿಡಿಓ ಮಂಜುನಾಥ್, ನವೀನ್, ಹಾಗೂ ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

(Visited 15 times, 1 visits today)

Related posts

Leave a Comment