ನರೇಗಾ ಯೋಜನೆ : ಸಿಇಓ ಅವರಿಂದ ಕಾಮಗಾರಿ ಪರಿಶೀಲನೆ

ತುಮಕೂರು: 

      ಕೊರಟಗೆರೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಪ್ರಗತಿಯಲ್ಲಿರುವ ಮಹಾತ್ಮಗಾಂಧಿ ನರೇಗಾ ಯೋಜನೆಯ ಕಾಮಗಾರಿಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಕೆ.ವಿದ್ಯಾಕುಮಾರಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

       ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿ ವ್ಯಾಪ್ತಿಯ ಜೆಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಮನೆ ತೋಟ ಗ್ರಾಮದ ಸಂಜೀವಮ್ಮ ಕೋಂ ವೆಂಕಟಗಿರಯಪ್ಪನವರ ಜಮೀನಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಕೃಷಿಹೊಂಡ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಅವರು, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿಗಧಿತ ಸಮಯಕ್ಕೆ ಕೂಲಿ ಹಣ ಪಾವತಿಯಾಗಿರುವ ಬಗ್ಗೆ ಕೂಲಿ ಕಾರ್ಮಿಕರೊಂದಿಗೆ ಚರ್ಚೆ ನಡೆಸಿದರು. ಅಲ್ಲದೆ ಗ್ರಾಮೀಣ ಭಾಗಕ್ಕೆ ಬೆಂಗಳೂರು ಸೇರಿದಂತೆ ಇತರೆ ನಗರ ಪ್ರದೇಶದಿಂದ ಯಾರಾದರೂ ಗ್ರಾಮಗಳಿಗೆ ಬಂದಿದ್ದರೆ, ಅವರಿಗೆ ಉದ್ಯೋಗ ಚೀಟಿ ಇದ್ದಲಿ ಅವರಿಗೂ ನರೇಗಾ ಅಡಿ ಕೆಲಸ ನೀಡಲಾಗುವುದು. ಇದನ್ನು ಗ್ರಾಮೀಣ ಭಾಗದ ಜನ ಸದುಪಯೋಗ ಪಡಿಸಿಕೊಳ್ಳುವಂತೆ ಸಿಇಓ ರವರು ಸಲಹೆ ನೀಡಿದರು.

ಬಳಿಕ ಇದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಬದಹಳ್ಳಿ ಗ್ರಾಮದ ಸರ್ವೆ ನಂಬರ್ 5 ರ ಅರಣ್ಯ ಪ್ರದೇಶದಲ್ಲಿ ಕಟ್ಟೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಳೆಗಾಲ ಆರಂಭಕ್ಕೂ ಮುನ್ನ ಜಲ ಸಂರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳುವುದರಿಂದ ಮಳೆಗಾಲದಲ್ಲಿ ಸುರಿದ ನೀರು ಸಂಗ್ರಹಗೊಂಡು ಅಂತರ್ ಜಲ ವೃದ್ಧಿಯಾಗುತ್ತದೆ ಎಂದರು.

ಆ ನಂತರದಲ್ಲಿ ಬುಕ್ಕಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಟ್ಲಹಳ್ಳಿ ಗ್ರಾಮದಲ್ಲಿ ನಿರ್ಮಾಣಗೊಂಡಿದ್ದ ನೂತನ ಅಂಗನವಾಡಿ ಕಟ್ಟಡವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಅಂಗನವಾಡಿ ಕಾರ್ಯಕರ್ತರೊಂದಿಗೆ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನೀಡಲಾಗುವ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವಂತೆ ತಾಕೀತು ಮಾಡಿದರು.

      ಆ ಬಳಿಕ ಇದೇ ಗ್ರಾಮದ ಗುಂಡನಕಟ್ಟೆಯಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದಾಗಿ ಕಟ್ಟೆಯಲ್ಲಿ ಮಳೆ ನೀರು ತುಂಬಿರುವುದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಆ ನಂತರ ಬುಕ್ಕಪಟ್ಟಣ ಗ್ರಾಮದ ದೊಡ್ಡಮ್ಮ ದೇವಸ್ಥಾನದ ಹತ್ತಿರ ನರೇಗಾ ಯೋಜನೆಯಡಿ ಪ್ರಗತಿಯಲ್ಲಿದ್ದ ಕಲ್ಯಾಣಿ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿ, ಜಲ ಸಂರಕ್ಷಣಾ ಕಾಮಗಾರಿಗಳಿಗೆ ಹೆಚ್ಚು ಆದ್ಯತೆ ನೀಡುವಂತೆ ನೆರೆದಿದ್ದ ಅಧಿಕಾರಿಗಳಿಗೆ ಸೂಚಿಸಿದರು.

      ಈ ಸಂದರ್ಭದಲ್ಲಿ ಕೊರಟಗೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಶಿವಪ್ರಕಾಶ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಂಜುನಾಥ್, ಕೊರಟಗೆರೆ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಕೆ.ಬಿ.ನಾಗರಾಜ್, ತಾಲ್ಲೂಕು ಐಇಸಿ ಸಂಯೋಜಕರಾದ ಟಿ.ಕೆ.ವಿನುತ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಟಿ.ಎಸ್.ಮಂಜಮ್ಮ, ಎನ್.ಸುನೀಲ್ ಕುಮಾರ್ ಸೇರಿದಂತೆ ತಾಂತ್ರಿಕ ಸಿಬ್ಬಂದಿ ಹಾಜರಿದ್ದರು.

(Visited 6 times, 1 visits today)

Related posts

Leave a Comment