ತುಮಕೂರು:

      ಕೋವಿಡ್-19 ಸಂದರ್ಭದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಪಿಪಿಇ ಕಿಟ್ ನೀಡಬೇಕು. ಕೆಲಸ ಮುಗಿದ ಮೇಲೆ ಸ್ನಾನಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಎಲ್ಲರ ಸೇವೆ ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ತುಮಕೂರು ಜಿಲ್ಲಾ ಪೌರಕಾರ್ಮಿಕರ ಸಂಘದ ಸಿಐಟಿಯು ನೇತೃತ್ವದಲ್ಲಿ ಪೌರ ಕಾರ್ಮಿಕರು ಆಗಸ್ಟ್ 11ರಂದು ಬೆಳ್ಳಂಬೆಳಗ್ಗೆಯೇ ನಗರದ ಮಹಾನಗರ ಪಾಲಿಕೆ ಮುಂದೆ ಮೌನ ಪ್ರತಿಭಟನೆ ನಡೆಸಿದರು.

      ಪೌರಕಾರ್ಮಿಕರ ಅಹವಾಲುಗಳನ್ನು ಆಲಿಸಿದ ಪಾಲಿಕೆ ಆಯುಕ್ತರಾದ ರೇಣುಕಾ ಅವರು ನೇರಪಾವತಿಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರ ಖಾಯಂಗೊಳಿಸುವ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕು. ನಿಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ಕಳಿಸಲಾಗುವುದು ಎಂದು ಭರವಸೆ ನೀಡಿದರು.

      ನೇರಪಾವತಿಯಡಿ ಕೆಲಸ ಮಾಡುವ ಸಂದರ್ಭದಲ್ಲಿ ಮರಣ ಹೊಂದಿರುವ ಪೌರಕಾರ್ಮಿಕರ ಅವಲಂಬಿತರಿಗೆ ಕೆಲಸ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡುತ್ತೇನೆ. ಕೆಲಸ ಮಾಡಿದ ನಂತರ ಸ್ನಾನದ ವ್ಯವಸ್ಥೆಗೆ ಕ್ರಮ ವಹಿಸುತ್ತೇನೆ. ಇರುವ ಸ್ನಾನಗೃಹಗಳನ್ನು ವಾರದಲ್ಲಿ ಚಾಲ್ತಿಗೊಳಿಸುತ್ತೇನೆ. ಹೆಚ್ಚುವರಿ ಸ್ನಾನಗೃಹಗಳ ಅಗತ್ಯವಿದ್ದರೆ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದರು.

      ಪೌರಕಾರ್ಮಿಕರಿಗೆ ಕಾನೂನುಬದ್ದವಾಗಿ ನೀಡಬೇಕಾದ ವಾರದ ರಜೆ, ಹಬ್ಬದ ರಜೆ, ರಾಷ್ಟ್ರೀಯ ಹಬ್ಬಗಳ ರಜೆ, ಸಾಂದರ್ಭಿಕ ರಜೆ ಹಾಗೂ ಇಎಲ್‍ಗಳನ್ನು ನೀಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಕೋವಿಡ್ ಕಾಲದಲ್ಲಿ ಮರಣ :

      ಹೊಂದಿರುವ ಎಲ್ಲಾ ಪೌರಕಾರ್ಮಿಕರಿಗೆ ಕೊರೊನ ವಾರಿಯರ್ಸ್‍ಗೆ ನೀಡುವ ವಿಮಾ ಯೋಜನೆ ವಿಸ್ತರಿಸಬೇಕು. ಸಮಸ್ಯೆಗೆ ಒಳಗಾಗುವ ಪೌರಕಾರ್ಮಿಕರಿಗೆ ಕನಿಷ್ಠ 25,000 ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

       ಸೀಲ್‍ಡೌನ್ ಪ್ರದೇಶದಲ್ಲಿ ಕೆಲಸ ನಿರ್ವಹಿಸುವ ಪೌರಕಾರ್ಮಿಕರಿಗೆ ವಿಶೇಷ ಭತ್ಯೆಯನ್ನು ನೀಡಬೇಕು. ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೀಲ್‍ಡೌನ್ ಕೆಲಸಗಳಿಗೆ ಪ್ರತ್ಯೇಕ ತಂಡಗಳನ್ನು ರಚಿಸಬೇಕು. ಪೌರಕಾರ್ಮಿಕರಿಗೆ ವರ್ಷಕ್ಕೆ ಎರಡು ಜೊತೆ ಸಮವಸ್ತ್ರ ಮತ್ತು ಸುರಕ್ಷತಾ ಸಲಕರಣೆಗಳನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಆಯುಕ್ತರ ಗಮನ ಸೆಳೆದರು.

      ತುಮಕೂರು ಜಿಲ್ಲಾ ಪೌರಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಪ್ರಧಾನ ಕಾರ್ಯದರ್ಶಿ ಎನ್.ಕ.ಎಸುಬ್ರಮಣ್ಯ, ರಾಜ್ಯ ಖಜಾಂಚಿ ವೆಂಕಟೇಶ್, ನಾಗರಾಜು, ನಗರಾಧ್ಯಕ್ಷ ರಾಮಕೃಷ್ಣಪ್ಪ, ಖಜಾಂಚಿ ಸುರೇಂದ್ರ ಮತ್ತು ಆರೋಗ್ಯ ವಿಭಾಗದ ಮುಖ್ಯಸ್ಥರು, ಪರಿಸರ ಇಂಜಿನಿಯರ್ ಕೃಷ್ಣಮೂರ್ತಿ, ಮೃತ್ಯುಂಜಯ, ಮೋಹನ್‍ಕುಮಾರ್, ಆರೋಗ್ಯ ನಿರೀಕ್ಷಕರು ಉಪಸ್ಥಿತರಿದ್ದು ಪೌರಕಾರ್ಮಿಕರ ಸಮಸ್ಯೆ ಪರಿಹಾರ ಕಾಣಲು ಸಹಕರಿಸಿದರು.

(Visited 11 times, 1 visits today)