ತುಮಕೂರು:

      ತುಮಕೂರು ನಗರದ ಹೊಸಬಡಾವಣೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ರೌಡಿ ಶೀಟರ್ ಆರ್‍ಎಕ್ಸ್ ಮಂಜನ ಕೊಲೆಯಾಗಿದೆ.

      ಬಿಹೆಚ್ ರಸ್ತೆಯಲ್ಲಿರುವ ಮಂಜುಶ್ರೀ ಬಾರ್ ಎದುರು ಸುಮಾರು ರಾತ್ರಿ 9:30ರ ಸರಿಸುಮಾರಿನಲ್ಲಿ ಈ ಕೊಲೆ ನಡೆದಿದ್ದು, ವೈಷ್ಯಮದ ಹಿನ್ನೆಲೆಯಲ್ಲಿ ಈ ಹತ್ಯೆಯಾಗಿರುವ ಸಾಧ್ಯತೆ ಇದೆ ಎಂದು ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಬಿಹೆಚ್ ರಸ್ತೆಯ ಮಂಜುಶ್ರೀ ಬಾರ್ ಎದುರು ಯುವಕನೋರ್ವನ ಚಾಕುವಿನ ಇರಿತಕ್ಕೆ ಬಲಿಯಾಗಿ ರಕ್ತದ ಮಡುವಿನಲ್ಲಿ ರೋದನೆಗೈಯುತ್ತಿದ್ದ ಉಚ್ಚೆ ಮಂಜನನ್ನು ಹತ್ತಿರದಲ್ಲೇ ಇದ್ದ ವಿನಾಯಕ ಆಸ್ಪತ್ರೆಗೆ ಕೊಂಡೊಯ್ಯಲಾಯಿತು, ಅತಿಯಾದ ರಕ್ತಸ್ತ್ರಾವದಿಂದ ಸಾವು ಬದುಕಿನ ನಡುವೆ ನರಳಾಡುತ್ತಿದ್ದರಿಂದ ಸಿದ್ಧಗಂಗಾ ಆಸ್ಪತ್ರೆಗೆ ರವಾನಿಸಲಾಯಿತಾದರು ಬದುಕಲಿಲ್ಲ.

      ಹತ್ಯೆಯಾಗಿರುವ ಮಂಜುನಾಥ ಆಲಿಯಾಸ್ ಆರ್‍ಎಕ್ಸ್ ಮಂಜ ಪೊಲೀಸ್ ಬಾತ್ಮಿದಾರನೆಂಬ ಮಾತುಗಳು ಕೇಳಿಬರುತ್ತಿವೆ. ಈ ಹತ್ಯೆಯ ಸಂದರ್ಭದಲ್ಲಿ ಚಿಗರು ಮೀಸೆಯ ಯುವಕರು ಈ ಹತ್ಯೆಯಲ್ಲಿ ಭಾಗಿಯಾಗಿರಬಹುದೆಂದು ಊಹಿಸಲಾಗಿದೆ. ಜನ ಸಂದಣಿಯ ನಡುವೆಯೇ ನಗರದಲ್ಲಿ ನಡೆದಿರುವ ಈ ಹತ್ಯೆ ನಿಜಕ್ಕೂ ನಗರದ ಜನತೆಯ ನೆಮ್ಮದಿ ಕೆಡಿಸಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

      ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಅನಾಥವಾಗಿ ಬಿದ್ದಿರುವ ಆರ್‍ಎಕ್ಸ್ ಮಂಜ ಆಲಿಯಾಸ್ ಉಚ್ಚೆ ಮಂಜ ಈ ಹಿಂದೆ ನಡುರಸ್ತೆಯಲ್ಲಿ ಬರ್ಬ ರವಾಗಿ ಹತ್ಯೆಯಾದ ಮಾಜಿ ಮೇಯರ್, ರೌಡಿ ಶೀಟರ್ ಗಡ್ಡರವಿಯ ಅಡ್ಡದಲ್ಲಿ ಸದಾ ಸುತ್ತುತ್ತಿದ್ದವ. ಗಡ್ಡರವಿಯ ಭಂಟನೆಂದು ಹೇಳಿಕೊಳ್ಳುತ್ತಿದ್ದ ಈತ ಗಡ್ಡರವಿ ಹತ್ಯೆಯಾಗಿ ನಡುರಸ್ತೆಯಲ್ಲಿ ಅಡ್ಡಡ್ಡ ಮಲಗಿದ್ದಿದ್ದನ್ನು ನೋಡಿದ್ದರೂ ಸಹ ತನ್ನ ಕೆಟ್ಟಚಾಳಿಯನ್ನ ಬಿಡದೆ ಹಿಂದಿನಿಂದಲೂ ತಾನು ಮುಂದುವರಿಸಿಕೊಂಡು ಬಂದ ಮೀಟರ್ ಬಡ್ಡಿ ದಂಧೆ ಮತ್ತು ಜೂಜು ಅಡ್ಡೆಗಳನ್ನ ನಡೆಸುತ್ತಿದ್ದನ್ನೆಲಾಗುತ್ತಿದೆ. ಇದು ಸಾಲದೆಂಬಂತೆ ತುಮಕೂರು ನಗರದ ಕ್ರೈಂ ಪೊಲೀಸರೊಬ್ಬರನ್ನು ಬಳಸಿಕೊಂಡು ಬಹಳಷ್ಟು ಜನರಿಂದ ಹಣ ವಸೂಲಿ ಮಾಡುತ್ತಿದ್ದ. ಕ್ರೈಮ್ ಪಿಸಿ ಮತ್ತು ಈತ ಸೇರಿ ಮಾಡಬಾರದ ಕುಕೃತ್ಯಗಳನ್ನು ಮಾಡುವ ಮುಖೇನ ಹಲವರ ಹಗೆತನಕ್ಕೆ ಗುರಿಯಾಗಿಬಿಟ್ಟಿದ್ದ.

      ಮಂಜನ ದರ್ಪ-ದೌರ್ಜನ್ಯ ಹಾಗೂ ಅಕ್ರಮ ವ್ಯವಹಾರಗಳು ಮತ್ತು ತನ್ನ ಪರಮಾಪ್ತ ಪೊಲೀಸ್ ಪೇದೆಯಿಂದ ಗ್ಯಾಂಬ್ಲಿಂಗ್ ಅಡ್ಡೆಗಳು ಮತ್ತು ಆಡುವವರ ಮೇಲೆ ದೌರ್ಜನ್ಯ ಮಾಡಿ ವಸೂಲಿ ಮಾಡಿಸುತ್ತಿದ್ದ ರೀತಿ ಕೆಟ್ಟ ರೀತಿಯಲ್ಲಿ ಸಂದೇಶ ರವಾನಿಸುತ್ತಿತ್ತು ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಮಂಜ ಮತ್ತು ಇತರರ ನಡುವೆ ವೈಮನಸ್ಯಗಳುಂಟಾಗಿ ತುಮಕೂರು ನಗರ ಉಪಾಧೀಕ್ಷಕರ ಕಛೇರಿಯಲ್ಲಿ ನಡೆದ ಸಂಧಾನ ಮತ್ತು ರಾಜಿ ನಡೆದಿತ್ತಾದರೂ ಅದು ಫಲಕಾರಿಯಾಗಿದೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.? ಈತ ಬೆಂಗಳೂರಿನ ವೃತ್ತನಿರತ ನಟೋರಿಯಸ್ ಕ್ರಿಮಿನಲ್‍ಗಳು ಮತ್ತು ಕೊಲೆಗಡುಕರ ಜೊತೆ ಸಂಪರ್ಕ ಹೊಂದಿದ್ದನೆಂದು ಹೇಳಲಾಗುತ್ತಿದೆ. ಬೆಂಗಳೂರಿನ ಕೆಲವು ರೌಡಿ ಶೀಟರ್‍ಗಳು ಈತನ ಸಂಪರ್ಕದಲ್ಲಿದ್ದು ಆಗಾಗ ಗುಂಡು-ತುಂಡು ಪಾರ್ಟಿಗಳು ತುಮಕೂರಿನ ಹೊರವಲಯದಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದವು ಎಂದು ಸುದ್ದಿ ಹಬ್ಬಿದೆ.

      ತನ್ನ ಗುರುವೆಂದು ಭಾವಿಸಲಾಗಿದ್ದ ಗಡ್ಡ ರವಿಯ ಹತ್ಯೆಯ ಪ್ರಕರಣದ ಸಾಕ್ಷಿದಾರನಾಗಿದ್ದು, ಸದರಿ ಪ್ರಕರಣದ ಕೆಲವು ಆರೋಪಿಗಳ ವಿರುದ್ಧ ಕುಡಿದ ಮತ್ತಿನಲ್ಲಿ ಧ್ವನಿಯೆತ್ತುತ್ತಿದ್ದ ಎನ್ನುವ ಮಾತುಗಳು ಕೇಳಿಬರುತ್ತಿವೆ. ಒಂದು ಕಡೆ ಪೊಲೀಸ್ ಬಾತ್ಮಿದಾರನೆಂದು ಬೊಗಳೆಬಿಡುತ್ತ ಮತ್ತೊಂದೆಡೆ ತಾನೊಬ್ಬ ವ್ಯವಹಾರಸ್ತನಷ್ಟೆ, ನಾನು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂದು ನಂಬಿಸುತ್ತ ಹಲವು ಪೊಲೀಸರ ರಕ್ಷಣೆ ನನಗಿದೆ ಎಂದು ಇಲಾಖೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದಲ್ಲದೆ ಕೇವಲ ಒಬ್ಬ ಕ್ರೈಂ ಪಿಸಿಯ ನಂಟು ಇಟ್ಟುಕೊಂಡು ಮಾಡಿದ ದೌರ್ಜನ್ಯಗಳು ಉಚ್ಚೆ ಮಂಜನ ಶವದ ಶ್ವೇತವಸ್ತ್ರಕ್ಕೆ ಗಂಟಾಗಿ ಮಾರ್ಪಾಟಾಗಿರಬಹುದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹತ್ಯೆ ಮಾಡಿದ ಆರೋಪಿಗಳಿಗಾಗಿ ತೀವ್ರ ಶೋಧನಾಕಾರ್ಯ ನಡೆಯುತ್ತಿದ್ದು ತಿಲಕ್ ಪಾರ್ಕ್ ವೃತ್ತ ನಿರೀಕ್ಷಕರ ನೇತೃತ್ವದ ತಂಡ ಆರೋಪಿಗಳ ಹುಡುಕಾಟದಲ್ಲಿದೆ.

(Visited 2,077 times, 1 visits today)