ದೇವೇಗೌಡರನ್ನು ಗೆಲ್ಲಿಸಿ ಬರ್ತೀನಿ, ಇಲ್ಲ ರಾಜೀನಾಮೆ ಕೊಡ್ತೀನಿ: ಸಚಿವ ಶ್ರೀನಿವಾಸ್

ಗುಬ್ಬಿ:

      ‘ದೊಡ್ಡಗೌಡರನ್ನು ಗೆಲ್ಲಿಸಿಕೊಂಡು ಬರ್ತೀನಿ, ಇಲ್ಲ ಅಂದ್ರೆ ರಾಜೀನಾಮೆ ಪತ್ರದ ಜೊತೆ ಬರ್ತೀನಿ’ ಎಂಬ ಪೋಸ್ಟ್ ಅನ್ನು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ತಮ್ಮ ಫೇಸ್‍ಬುಕ್ ಪುಟದಲ್ಲಿ ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

      ಇದರ ಅಡಿಯಲ್ಲಿ ‘ದೇವೇಗೌಡರನ್ನು ಗೆಲ್ಲಿಸಿಕೊಂಡು ಬರುವಂತೆ ಕುಮಾರಣ್ಣನಿಗೆ ವಾಗ್ದಾನ ಮಾಡಿದ ಮಿನಿಸ್ಟ್‍ರ್ ವಾಸಣ್ಣ (ಎಸ್.ಆರ್.ಶ್ರೀನಿವಾಸ್)’ ಎಂದು ಬರೆಯಲಾಗಿದೆ. ಈ ಪೋಸ್ಟ್ ಗುರುವಾರ ಬೆಳಿಗ್ಗೆ 10.35ರಲ್ಲಿ ಹಂಚಿಕೊಂಡಿದ್ದಾರೆ.

      28 ಸಾವಿರ ಫಾಲೋವರ್ಸ್‍ಗಳನ್ನು ಹೊಂದಿರುವ ಈ ಫೇಸ್‍ಬುಕ್ ಖಾತೆಯಲ್ಲಿರುವ ಪೋಸ್ಟ್ ಅನ್ನು ಹಲವರು ಹಂಚಿಕೊಂಡಿದ್ದಾರೆ. ಕೆಲವರು `ಮಾತು ಅಂದ್ರೆ ಮಾತು, ಅದೇ ವಾಸಣ್ಣನ ಗತ್ತು. ದೇವೇಗೌಡರ ಗೆಲುವು ನಿಶ್ಚಿತ, ಬನ್ನಿ ಒಟ್ಟಾಗಿ ಶ್ರಮಿಸೋಣ, ಸಂಭವಾಮಿ ಯುಘೇ ಯುಘೇ’ ಎಂದು ಬರೆದುಕೊಂಡಿದ್ದಾರೆ.

      ಸಚಿವ ಎಸ್.ಆರ್.ಶ್ರೀನಿವಾಸ್ ಗುಬ್ಬಿ ತಾಲ್ಲೂಕು ದೊಡ್ಡನೆಟ್ಟಗುಂಟೆಯಲ್ಲಿ ಗುರುವಾರ ಮತಚಲಾಯಿಸಿದರು. ಈ ಪೋಸ್ಟ್ ಬಗ್ಗೆ  ಸಚಿವರು ಮಾತನಾಡಿ, ‘ಜನರ ಮನಸ್ಥಿತಿ ನೋಡಿಕೊಂಡು ನಾನು ಈ ಅಭಿಪ್ರಾಯ ಹಂಚಿಕೊಂಡಿದ್ದೇನೆ. ಇಡೀ ಲೋಕಸಭಾ ಕ್ಷೇತ್ರದ ಕಾರ್ಯಕರ್ತರಿಂದ ಮಾಹಿತಿ ಕಲೆ ಹಾಕಿದ್ದೇನೆ.

      ನನ್ನ ಕ್ಷೇತ್ರದಲ್ಲಿ ಮೊದಲಿದ್ದಂತೆ ಇಲ್ಲ. ನಮ್ಮ ಎದುರಾಳಿ ಅಭ್ಯರ್ಥಿ ಜಿ.ಎಸ್.ಬಸವರಾಜು ಈ ಹಿಂದೆ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಮೊದಲು ನನ್ನ ಕ್ಷೇತ್ರದಲ್ಲಿ ನಮಗೆ ಮತ ಬೀಳುವುದಿಲ್ಲ ಎನ್ನುವ ಭಯವಿತ್ತು.ಇಂದಿನ ಮತದಾನ ಪ್ರಕ್ರಿಯೆಯನ್ನು ನೋಡಿದರೆ 2 ಲಕ್ಷ ಮತದ ಅಂತರದಲ್ಲಿ ದೇವೇಗೌಡರು ಗೆಲ್ಲಲಿದ್ದಾರೆ. ಈ ವಿಶ್ವಾಸಕ್ಕೆ ಬದ್ಧನಾಗಿ ಈ ಅಭಿಪ್ರಾಯ ಹಂಚಿಕೊಂಡಿದ್ದೇನೆ’ ಎಂದರು.

(Visited 15 times, 1 visits today)

Related posts