ತುಮಕೂರು:

       ನಡೆದಾಡುವ ದೇವರು ಡಾ.ಶಿವಕುಮಾರ ಶ್ರೀಗಳಿಗೆ ಭಾರತರತ್ನ ಮಾತ್ರವಲ್ಲ ವಿಶ್ವರತ್ನ ಪ್ರಶಸ್ತಿ ಕೊಟ್ಟರೂ ಕಡಿಮೆಯಾಗುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅಭಿಪ್ರಾಯಪಟ್ಟರು.
ತುಮಕೂರು ನಗರದ ಅಮಾನಿಕೆರೆ ಬಳಿ ಇರುವ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಮಠದ ಭಕ್ತರು ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಹೀಗೆ ಭಾರತರತ್ನ ಪ್ರಶಸ್ತಿಯನ್ನು ನೀಡಿ ಸ್ವಾಮೀಜಿಯವರನ್ನು ಕುಬ್ಜರನ್ನಾಗಿ ಮಾಡುತ್ತಿದ್ದಾರೆ ಎನಿಸುತ್ತದೆ. ಹಾಗಾಗಿ ಶ್ರೀಗಳಿಗೆ ಯಾವ ಪ್ರಶಸ್ತಿ ನೀಡಿದರೂ ಅದು ಕಡಿಮೆಯೇ ಆಗುತ್ತದೆ ಎಂದು ಹೇಳಿದರು.

      ಶ್ರೀಗಳು ಯಾವುದೇ ವಿದೇಶಕ್ಕೆ ಹೋಗಲಿಲ್ಲ. ಪ್ರಶಸ್ತಿಯ ಹಿಂದೆ ಬೀಳಲಿಲ್ಲ. ಆದರೂ ಅವರನ್ನು ಅರಸಿಕೊಂಡು ಹಲವು ಪದವಿಗಳು ಬಂದಿವೆ. ವಿಶ್ವದ ಯಾವುದೇ ನಾಯಕರು ನಿರ್ಗಮಿಸಿದ ಸಂದರ್ಭದಲ್ಲಿಯೂ ಇಷ್ಟೊಂದು ಜನರು ಸೇರಿರಲಿಲ್ಲ. ಆದರೆ ಶ್ರೀಗಳ ನಿರ್ಗಮನದ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಬಂದು ಹೋಗುತ್ತಿದ್ದಾರೆ. ನಗರದ ಎಲ್ಲಾ ಕಡೆ ಪ್ರಸಾದದ ವ್ಯವಸ್ಥೆ ಮಾಡಿರುವುದು ಶ್ರೀಗಳ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ ಎಂದರು.

      ಕರ್ನಾಟಕದಲ್ಲಿ ದಾಸೋಹಕ್ಕೆ ಶ್ರೀಮಠ ಹೆಸರಾಗಿದೆ. ಶ್ರೀಗಳು ನಡೆಸಿಕೊಂಡು ಬರುತ್ತಿರುವ ಅನ್ನದಾಸೋಹ ಕಲ್ಪನೆ ದೇಶದ ಯಾವುದೇ ಭಾಗದಲ್ಲಿಯೂ ಇಲ್ಲ. ಅದು ವಿಶೇಷವಾಗಿ ಕರ್ನಾಟಕದಲ್ಲಿ ಮಾತ್ರ ಕಂಡು ಬರುತ್ತದೆ. ಅನ್ನದಾಸೋಹ ದೇಶಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.

      ಕಳೆದ 40 ವರ್ಷಗಳಿಂದಲೂ ಸ್ವಾಮೀಜಿ ಅವರ ಕಾರ್ಯವನ್ನು ಗಮನಿಸಿಕೊಂಡು ಬಂದಿದ್ದೇನೆ. ತಮ್ಮನ್ನು ಭೇಟಿಯಾದ ಪ್ರತಿಯೊಬ್ಬರಿಗೂ ಪ್ರಸಾದ ತೆಗೆದುಕೊಂಡು ಹೋಗಿ ಎಂದು ಹೇಳುತ್ತಿದ್ದರು. ಇದು ಪ್ರಸಾದ ತತ್ವಕ್ಕೆ ಮಹತ್ವ ಕೊಟ್ಟಿರುವುದನ್ನು ಸೂಚಿಸುತ್ತದೆ. ಇದರ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಬಡಮಕ್ಕಳಿಗೆ ಪ್ರೋತ್ಸಾಹ ನೀಡಿದ್ದಾರೆ. ಮುಚ್ಚಿ ಹೋಗುವ ಸಂಸ್ಥೆಗಳನ್ನು ಮಠದ ವಶಕ್ಕೆ ಪಡೆದು ಅವುಗಳನ್ನು ಅಭಿವೃದ್ದಿಪಡಿಸುವ ಮೂಲಕ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

      ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಲೇಖಕಿ ಎಂ.ಸಿ.ಲಲಿತ, ಪಾರ್ವತಮ್ಮ ರಾಜ್‍ಕುಮಾರ್, ಗಂಗಲಕ್ಷ್ಮಿ, ಉಪನ್ಯಾಸಕಿ ಅಕ್ಕಮ್ಮ, ಇಂದಿರ, ಸುಮನಾದಾಸ್ ಶಿವನಾಮಗಳು ಹಾಗೂ ವಚನಗಳನ್ನು ಸುಮಧುರವಾಗಿ ಹಾಡಿದರು.
ವೇದಿಕೆಯಲ್ಲಿ ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ, ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಬಿ.ಮರುಳಯ್ಯ, ಕಾರ್ಯದರ್ಶಿಗಳಾದ ಎಚ್.ಗೋವಿಂದಯ್ಯ ದ್ವಾರನಕುಂಟೆ, ಕೆ.ರವಿಕುಮಾರ್, ಉಪನ್ಯಾಸಕ ಶಿವಣ್ಣ ತಿಮ್ಲಾಪುರ, ನಿವೃತ್ತ ತಹಶೀಲ್ದಾರ್ ಪುಟ್ಟನರಸಯ್ಯ, ಲೇಖಕಿ ಶೈಲಾ ನಾಗರಾಜ್ ಮೊದಲಾದವರು ಹಾಜರಿದ್ದರು.

(Visited 73 times, 1 visits today)