ಸಿದ್ದಗಂಗಾ ಮಠಕ್ಕೆ KSRTC ಉಪಾಧ್ಯಕ್ಷ ಈಶ್ವರಪ್ಪ ಭೇಟಿ

ತುಮಕೂರು : 

      ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಪ್ರಯಾಣಿಸಲು ತೊಂದರೆಯಾಗದ ರೀತಿಯಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಈಶ್ವರಪ್ಪ ತಿಳಿಸಿದರು.

      ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂ. ಹಿರಿಯ ಶ್ರೀಗಳಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸಂದಿಗ್ದ ಪರಿಸ್ಥಿತಿಯಲ್ಲಿ ಸಾರಿಗೆ ಸಿಬ್ಬಂದಿ ಮುಷ್ಕರ ನಡೆಸುತ್ತಿರುವುದು ಸರಿಯಲ್ಲ. ಇದರಿಂದ ಸರ್ಕಾರ ಮತ್ತು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದರು.

      ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಸರ್ಕಾರ ಸಾರಿಗೆ ನೌಕರರ ವೇತನ ಭರಿಸಿದೆ. ಆದರೂ ನೌಕರರು ಇದ್ಯಾವುದನ್ನೂ ಲೆಕ್ಕಿಸದೆ ಏಕಾಏಕಿ ಮುಷ್ಕರ ನಡೆಸಬಾರದಿತ್ತು. ಈ ಮುಷ್ಕರಕ್ಕೆ ಸಾರಿಗೆ ನೌಕರರಲ್ಲೇ ಒಮ್ಮತ ಇಲ್ಲ. ಕೆಲ ಸಂಘಟನೆಗಳು ನೌಕರ ಮುಖಂಡರನ್ನು ಒಳಗಾಗಿಕೊಂಡು ಬಾಹ್ಯ ಒತ್ತಡ ಹೇರಿ ಮುಷ್ಕರ ನಡೆಸುವಂತೆ ಮಾಡಿವೆ ಎಂದು ದೂರಿದರು.

      ಸೌರಿಗೆ ನೌಕರರ ಸಂಘಟನೆಯ ಅಧ್ಯಕ್ಷ ಚಂದ್ರ ಅವರು ಸಾರಿಗೆ ಸಚಿವರ ಜತೆ ಕುಳಿತು ಚರ್ಚಿಸಿ ಪತ್ರಿಕಾಗೋಷ್ಠಿಯನ್ನು ಸಹ ನಡೆಸಿದ್ದರು. ಆದರೆ ಫ್ರೀಡಂ ಪಾರ್ಕ್‍ಗೆ ತೆರಳಿದ ನಂತರ ತಮ್ಮ ನಿಲುವಿನಿಂದ ಯುಟರ್ನ್ ಪಡೆದಿದ್ದಾರೆ. ಸಾರಿಗೆ ನೌಕರರ ಮುಷ್ಕರದ ವಿರುದ್ಧ ಈಗಾಗಲೇ ಜನಾಕ್ರೋಶ ಸಹ ವ್ಯಕ್ತವಾಗುತ್ತಿದೆ ಎಂದರು.

      ಶೀಘ್ರವೇ ಸಾರಿಗೆ ನೌಕರರ ಮುಷ್ಕರದ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಸ್ತುತ ಸಾರಿಗೆ ನಿಗಮದಲ್ಲಿ ಹಲವಾರು ಸಮಸ್ಯೆ, ಸವಾಲುಗಳು ಎದುರಾಗಿವೆ. ಈ ಸಮಸ್ಯೆಗಳು ಪರಿಹಾರವಾಗಲಿ ಎಂದು ಹಿರಿಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದೇನೆ ಎಂದರು.

      ಸಾರಿಗೆ ನೌಕರರ ಮುಷ್ಕರದಿಂದ ಎದುರಾಗಿರುವ ಬಸ್‍ಗಳ ಸಮಸ್ಯೆಯಿಂದ ಜನರ ಪಾಡಂತೂ ಹೇಳತೀರದಾಗಿದೆ. ಈ ಮುಷ್ಕರ ಕೂಡಲೇ ಅಂತ್ಯಗೊಳಿಸುವ ಶಕ್ತಿಯನ್ನು ಶ್ರೀಮಠ ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಅವರು ಹೇಳಿದರು.

      ಕಾರ್ತಿಕ ಮಾಸದ ಅಮಾವಾಸ್ಯೆಯ ವಿಶೇಷ ದಿನವಾಗಿರುವ ಹಿನ್ನಲೆಯಲ್ಲಿ ಶ್ರೀಮಠಕ್ಕೆ ಭೇಟಿ ನೀಡಿ ಹಿರಿಯ ಶ್ರೀಗಳ ಗದ್ದುಗೆ, ಮಠಾಧೀಶರ ಆಶೀರ್ವಾದ ಪಡೆದಿದ್ದೇನೆ ಎಂದರು.

      ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಟಿ.ಆರ್. ಸದಾಶಿವಯ್ಯ, ಮಹೇಶ್, ಶಿವಣ್ಣ, ಶೈಲಾ, ಗೀತಾಶಿವಣ್ಣ, ಕೋಮಲ, ಶಂಕರ್, ರಾಧ ಗಂಗಾಧರ್ ಇದ್ದರು.

(Visited 3 times, 1 visits today)

Related posts

Leave a Comment