ಕುಂಚಿಟಿಗರ ಕೋಟೆಗೆ ಯಾದವರನ್ನ ಕಣಕ್ಕಿಳಿಸಲು ಬಿಜೆಪಿ ರಣತಂತ್ರ….?

ತುಮಕೂರು:

      ಶಿರಾ ಉಪಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೂರು ರಾಜಕೀಯ ಪಕ್ಷಗಳು ಮೈಕೊಡವಿ ಮೇಲೆದ್ದಿವೆ. ಸಾವಿನ ಸೂತಕ, ಅನುಕಂಪದ ಅಲೆ ದಿವಂಗತ ಶಾಸಕ ಬಿ.ಸತ್ಯನಾರಾಯಣ್‍ರವರ ಕುಟುಂಬದ ಮೇಲಿದೆ.

      ಅನುಕಂಪದ ಮತಬುಟ್ಟಿಯನ್ನ ಭದ್ರಪಡಿಸಿಕೊಂಡು ಮತ್ತೆ ತಮ್ಮ ಪಕ್ಷದ ಶಾಸಕ ಸ್ಥಾನದ ಲೆಕ್ಕ ಹಾಗೆಯೇ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಜಾತ್ಯಾತೀತ ಜನತಾದಳದ ವರಿಷ್ಠ ದೇವೆಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇದ್ದಾರೆ. ಅದಕ್ಕಾಗಿಯೇ ಶಾಸಕ ಬಿ.ಸತ್ಯನಾರಾಯಣ್‍ರವರ ಮಗ ಸತ್ಯಪ್ರಕಾಶ್‍ರವರನ್ನು ಕಣಕ್ಕಿಳಿಸುವ ನಿರ್ಧಾರ ಬಹುಶಃ ಅಂತಿಮಗೊಂಡಂತಿದೆ. ನಿರ್ವಿವಾದಿತ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸತ್ಯಪ್ರಕಾಶ್ ಸ್ಪರ್ಧಾಳುವಾಗುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್ ಪಕ್ಷದ ಟಿಕೇಟನ್ನೇ ನಂಬಿಕೊಂಡಿದ್ದ ಕೆಲವರು ನಿರಾಸೆಯಲ್ಲಿ ನಲುಗುವಂತಾಗಿದೆ.

         ಕುಂಚಿಟಿಗ ಗೌಡರ ಪ್ರಭಲ ನಾಯಕ ಹಾಗೂ ಮಾಜಿ ಸಚಿವ ಟಿ.ಬಿ.ಜಯಚಂದ್ರ ಕಾಂಗ್ರೆಸ್‍ನ ಏಕಮೇವ ಅಭ್ಯರ್ಥಿ ಎಂದುಕೊಂಡಿದ್ದರು. ಆದರೆ ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಾರುವ ಸಲುವಾಗಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ನಾನು ಸಹ ಉಪಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಆಕಾಂಕ್ಷಿ ಎಂದು ಹೇಳುವ ಮುಖೇನ ಜಯಚಂದ್ರ ವಿರುದ್ಧ ಎದುರಾಳಿಯಾಗಿ ನಿಲ್ಲುವ ಸಾಮಥ್ರ್ಯ ನನಗಿದೆ ಎಂಬುದನ್ನ ಸ್ಪಷ್ಟಪಡಿಸಿದ್ದರು. ಟಿ.ಬಿ.ಜಯಚಂದ್ರ ವಿರುದ್ಧ ಧ್ವನಿಯೆತ್ತುವ ಮುಖೇನ ಜಯಚಂದ್ರರರ ಸೋಲಿಗೆ ಮುನ್ನುಡಿ ಬರೆಯುವ ವರ್ಚಸ್ಸು ನನಗಿದೆ ಎಂಬ ಸ್ಪಷ್ಟ ಸಂದೇಶ ಕಾಂಗ್ರೆಸ್ಸಿಗರಿಗೆ ರವಾನಿಸಿದ್ದರು.

      ಕಾಂಗ್ರೆಸ್‍ನ ಹಿರಿಯ ಧುರೀಣರು, ರಾಜ್ಯ ನಾಯಕರು ನಿನ್ನೆ ಸಭೆ ಸೇರಿ ಹೊಡೆದ ಮನಸ್ಸುಗಳನ್ನು ಬೆಸೆಯುವ ಕೈಂಕರ್ಯವನ್ನು ಕೈಗೊಂಡಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಹಾಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರು ಸೇರಿ ರಾಜಣ್ಣ ಮತ್ತು ಜಯಚಂದ್ರ ನಡುವಿನ ಬಿರುಕಿನ ಬೆಸುಗೆಯನ್ನ ಹಾಕಿದ್ದಾರಾದರೂ ಅದು ಮೇಲ್ನೋಟ್ಟಕ್ಕಷ್ಟೆ ಬೆಸುಗೆ ಭದ್ರವಾದಂತೆ ಕಂಡುಬರುತ್ತಿದೆ. ನಿನ್ನೆ ವರಿಷ್ಠರ ತೀರ್ಮಾನದಂತೆ ಜಯಚಂದ್ರ ಕಾಂಗ್ರೆಸ್‍ನ ಅಧಿಕೃತ ಅಭ್ಯರ್ಥಿ ಎಂಬುದು ಸ್ಪಷ್ಟವಾಗಿದೆ. ಶಿರಾ ಉಪಚುನಾವಣೆಯ ಜವಾಬ್ದಾರಿಯನ್ನ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಹಿಸಿಕೊಂಡಿರುವುದು ಮತ್ತೊಂದು ಅನುಮಾನಕ್ಕೆಡೆ ಮಾಡಿಕೊಡುತ್ತದೆ. ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಜಯಚಂದ್ರ ಸೋಲಿಗೆ ಕೆ.ಎನ್.ರಾಜಣ್ಣ ಮತ್ತು ಡಾ.ಜಿ.ಪರಮೇಶ್ವರ್ ರಣತಂತ್ರ ರೂಪಿಸಿದ್ದರು ಎನ್ನುವ ಅಪಾಧನೆಯಿತ್ತು. ರಾಜಣ್ಣನವರ ಸೋಲಿಗೆ ಜಯಚಂದ್ರ ತನ್ನದೆ ಆದ ತಂತ್ರಗಳನ್ನು ಬಳಸಿ ತನ್ನ ಸ್ವಸಮುದಾಯದ ಮತ ರಾಜಣ್ಣನವರ ವಿರುದ್ಧವಾಗಿ ಚಲಾಯಿಸುವಂತೆ ನೋಡಿಕೊಂಡಿದ್ದರು ಎನ್ನುವ ಆಪಾಧನೆ ಅಂದಿನ ಚುನಾವಣೆಯ ನಂತರ ಇಡೀ ಜಿಲ್ಲೆಯಲ್ಲದೆ ರಾಜ್ಯವ್ಯಾಪಿ ಪಸರಿಸಿತ್ತು. ಕಾರಣ, ಡಾ.ಜಿ.ಪರಮೇಶ್ವರ್‍ರವರ ಗೆಲುವಿಗೆ ಬೆಂಬಲವಾಗಿ ರಾಜಣ್ಣ ನಿಂತದ್ದು ಬಹುಮುಖ್ಯ ಕಾರಣವೆಂದು ಚರ್ಚೆಗಳು ನಡೆಯುತ್ತಿತ್ತು. ಹಾಗಾಗಿಯೇ ಟಿ.ಬಿ.ಜಯಚಂದ್ರ ಮತ್ತು ಕೆ.ಎನ್.ರಾಜಣ್ಣ ಕಳೆದ ಚುನಾವಣೆಯಲ್ಲಿ ಸೋತರು ಎನ್ನುವ ವಿಷಯ ಗುಟ್ಟಾಗಿ ಉಳಿದಿರಲಿಲ್ಲ. ಜೊತೆಗೆ ಯಾದವ ಸಮುದಾಯದ ನಾಗರಾಜು ಸ್ವತಂತ್ರ್ಯ ಅಭ್ಯರ್ಥಿಯಾಗಿ ಅಖಾಡದಲ್ಲಿ ಉಳಿದದ್ದು ಯಾದವರ ಮತ ಕಾಂಗ್ರೆಸ್‍ನಿಂದ ಇಬ್ಬಾಗವಾದ ಹಿನ್ನಲೆಯಲ್ಲಿ ಜಯಚಂದ್ರ ಸೋಲು ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯ.

      ಟಿ.ಬಿ.ಜಯಚಂದ್ರ ಪರವಾಗಿ ಅವರ ಸ್ವಸಮುದಾಯವಾದ ಕುಂಚಿಟಿಗ ಗೌಡರು ಜಯಚಂದ್ರರವರನ್ನ ಎಂದಿಗೂ ಒಮ್ಮತದಿಂದ ಬೆಂಬಲಿಸಲಿಲ್ಲ. ಇಡೀ ಕುಂಚಿಟಿಗರ ಮತ ಜಯಚಂದ್ರರ ವಿರುದ್ಧವಾಗಿ ಸತ್ಯನಾರಾಯಣ್ ಕಡೆ ವಾಲುತ್ತಿದ್ದ ಹಿನ್ನಲೆಯಲ್ಲಿ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರು ಮತ್ತು ದಲಿತರ ಮತಗಳನ್ನೆ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದ ಜಯಚಂದ್ರರವರಿಗೆ ಅಹಿಂದ ಮತಗಳು ಇವರನ್ನು ಕಾಪಾಡುತ್ತಿದ್ದವು ಎನ್ನುವುದು ನಗ್ನ ಸತ್ಯ. ಈ ಕಾರಣದಿಂದಾಗಿಯೇ ಅದೆಷ್ಟೇ ಕುಂಚಿಟಿಗ ಸಮುದಾಯದ ಅಭ್ಯರ್ಥಿಗಳು ಕಣಕ್ಕಿಳಿದರೂ ಎದೆಗುಂದದ ಜಯಚಂದ್ರರವರು ಅಹಿಂದ ಮತಬುಟ್ಟಿಗೆ ಅನ್ಯರು ಕೈಯಿಡದಂತೆ ಕಾಪಾಡಿಕೊಂಡುಬರುತ್ತಿದ್ದರು. ಕಳೆದ ಚುನಾವಣೆಯಲ್ಲಿ ಯಾದವ ಸಮುದಾಯದ ಅಭ್ಯರ್ಥಿ ನಾಗರಾಜು ಸ್ಪರ್ಧೆ ಜಯಚಂದ್ರ ಸೋಲಿಗೆ ಬಹುಮಖ್ಯ ಕಾರಣ ಎನ್ನುತ್ತಿದ್ದಾರೆ.

      ಬಿಜೆಪಿ ಪಕ್ಷ ತನ್ನ ನೆಲೆಗಟ್ಟನ್ನ ಭದ್ರಪಡಿಸಿಕೊಂಡು ಕಮಲದ ದಳವನ್ನ ಅರಳಿಸುವ ಮಹಾದಾಸೆಯೊತ್ತು ಎಲ್ಲಾ ಪಕ್ಷಗಳಿಗಿಂತ ಬಿರುಸಾದ ಪ್ರಚಾರದಲ್ಲಿ ಅತೀ ಹೆಚ್ಚು ತೊಡಗಿಸಿಕೊಂಡಿದೆ ಎಂದರೂ ತಪ್ಪಾಗಲಾರದು. ಕಳೆದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಎಸ್.ಆರ್.ಗೌಡರು ಬಿಜೆಪಿಯನ್ನ ಕಟ್ಟಿ ಬೆಳೆಸುವಲ್ಲಿ ಅಂತಹ ಶ್ರಮವನ್ನ ಹಾಕಿರಲಿಲ್ಲ. ಚುನಾವಣೆಯ ನಂತರ ಪಕ್ಷದ ಸಂಘಟನೆ ದುರ್ಬಲವಾಗಿತ್ತು. ಅದರ ಹಿಂದಿನ ಚುನಾವಣೆಗಳೆರಡನ್ನ ಬಿ.ಕೆ.ಮಂಜುನಾಥ್ ಬಿಜೆಪಿಯ ಅಭ್ಯರ್ಥಿಯಾಗಿ ಪಡೆದ ಮತಗಳಿಗಿಂತ ಕಡಿಮೆ ಮತಗಳನ್ನ ಪಡೆದುಕೊಳ್ಳುವ ಮುಖೇನ ಎಸ್.ಆರ್.ಗೌಡರಿಗೆ ಬಿಜೆಪಿಯಲ್ಲಿ ಪ್ರಬಲ ಅಭ್ಯರ್ಥಿಯಾಗಿ ಹೊರಹೊಮ್ಮಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನ ಆ ಕ್ಷೇತ್ರದ ಮತದಾರ ರವಾನಿಸಿದಂತಿತ್ತು. ಹಿಂದುತ್ವದ ಆಧಾರದ ಮೇಲೆ ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನೇ ತನ್ನುಸಿರೆಂದುಕೊಂಡಿದ್ದ ಮತದಾರರು ಮಾತ್ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಸ್.ಆರ್.ಗೌಡರಿಗೆ ಮತ ಚಲಾಯಿಸಿದ್ದರು. ಅವರಿಗೆ ಲಭಿಸಿದ ಮತಗಳು ಸಂಪೂರ್ಣ ಬಿಜೆಪಿ ಸಿದ್ಧಾಂತದ್ದವು ಎನ್ನುವುದು ಎಲ್ಲರಿಗೂ ನಿಖರವಾಗಿ ತಿಳಿದಿತ್ತು. ಹಾಗೆಯೇ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕುಂಚಿಟಿಗ ಗೌಡರು ಕಣಕ್ಕಿಳಿದರೇ ಸ್ವತಃ ಕುಂಚಿಟಿಗ ಗೌಡರೇ ಬೆಂಬಲಿಸುದಿಲ್ಲವೆಂಬ ಸಂದೇಶ ಎಲ್ಲರಿಗೂ ತಿಳಿದಿದೆ. ಹಾಗಾಗಿ ಈ ಚುನಾವಣೆಯಲ್ಲಿ ಕುಂಚಿಟಿಗರೇತರ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಅನ್ಯ ಪಕ್ಷಗಳಂತೆ ಬಿಜೆಪಿಯು ಸಹ ಕುಂಚಿಟಿಗ ಗೌಡರನ್ನ ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದರೆ ಕುಂಚಿಟಿಗರ ಮತಗಳು ವಿಭಜನೆಗೊಂಡು ಅಹಿಂದ ಮತಗಳ ಕೆಂಗಣ್ಣಿಗೆ ಗುರಿಯಾಗಿ ಬಿಜೆಪಿ ಪಕ್ಷ ಹೀನಾಯವಾಗಿ ಸೋಲುವ ಎಲ್ಲಾ ನಿದರ್ಶನಗಳಿವೆ ಎಂಬುದು ಬಿಜೆಪಿಯ ಆಂತರಿಕ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

      ಬಿಜೆಪಿ ಪಕ್ಷದಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಸ್.ಆರ್.ಗೌಡರು ಮತ್ತು ಹಿಂದಿನ ಎರಡು ಚುನಾವಣೆಯಲ್ಲಿ ಅಧಿಕೃತ ಅಭ್ಯರ್ಥಿಯಾಗಿದ್ದ ಬಿ.ಕೆ.ಮಂಜುನಾಥ್ ಹೆಸರುಗಳು ಶಿರಾ ಕ್ಷೇತ್ರದಿಂದ ಅಧಿಕೃತವಾಗಿ ಕೇಳಿಬಂದರೆ ವಲಸಿಗ ಡಾ.ರಾಜೇಶ್‍ಗೌಡರ ಹೆಸರು ಬಿಜೆಪಿಯಲ್ಲಿ ತಳುಕು ಹಾಕುತ್ತಿತ್ತು. ಇವರುಗಳ ಮಧ್ಯೆ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಹಾಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‍ಗೌಡರ ಹೆಸರು ಉಪಚುನಾವಣೆಯ ಮುಂಚೂಣಿಯಲ್ಲಿ ಅತೀ ಹೆಚ್ಚಾಗಿ ಕೇಳಿಬರುತ್ತಿತ್ತು. ಕಾರಣ ಶಿರಾ ಕ್ಷೇತ್ರದ ಬಿಜೆಪಿ ಸಂಘಟನೆಯ ಜವಾಬ್ದಾರಿಯ ರುವಾರಿಯಾಗಿ ಸ್ವತಃ ಸುರೇಶ್‍ಗೌಡರೇ ಮುಂಚೂಣಿಯಲ್ಲಿರುವ ಕಾರಣ ಫೈಯರ್ ಬ್ರಾಂಡ್ ಬಿ.ಸುರೇಶ್‍ಗೌಡರು ಅಭ್ಯರ್ಥಿಯಾಗಬಹುದೆಂಬ ಅನುಮಾನ ಜಿಲ್ಲೆಯ ಕೆಲವು ಬಿಜೆಪಿಗರಿಗೆ ಬಂದಿತ್ತು. ಜಿಲ್ಲಾ ಬಿಜೆಪಿಯಿಂದ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿಯನ್ನ ರಾಜ್ಯ ಬಿಜೆಪಿಗೆ ಕಳುಹಿಸುವಾಗ ಇದ್ದಂತಹ ಹೆಸರುಗಳು ರಾಜ್ಯ ನಾಯಕರು ಕೇಂದ್ರಕ್ಕೆ ಕಳುಹಿಸುವ ಸಂದರ್ಭದಲ್ಲಿ ಕಾಣೆಯಾಗಿವೆ ಎಂಬುದು ಬಹಳ ವಿಶೇಷವಾಗಿದೆ. ಮತ್ತು ಶಿರಾ ಬಿಜೆಪಿ ಅಭ್ಯರ್ಥಿಗಳಾಗಿ ಈ ಹಿಂದೆ ಸ್ಪರ್ಧಿಸಿದ್ದ ಎಸ್.ಆರ್.ಗೌಡರು ಮತ್ತು ಬಿ.ಕೆ.ಮಂಜುನಾಥ್‍ರವರ ಹೆಸರು ಕಾಣೆಯಾದ ಹಿನ್ನೆಲೆ ಹಲವು ಅನುಮಾನಕ್ಕೆಡೆಮಾಡಿ ಕೊಡುತ್ತದೆ. ರಾಜ್ಯದಿಂದ ಕೇಂದ್ರಕ್ಕೆ ಕಳುಹಿಸಿದ ಪಟ್ಟಿಯಲ್ಲಿ ಯಾದವ ಸಮುದಾಯದ ಡಿ.ಟಿ.ಶ್ರೀನಿವಾಸ್, ಒಕ್ಕಲಿಗ ಸಮುದಾಯದ ಜಿಲ್ಲಾಧ್ಯಕ್ಷ ಬಿ.ಸುರೇಶ್‍ಗೌಡ, ಅನ್ಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಕುಂಚಿಟಿಗ ಸಮುದಾಯದ ಡಾ.ರಾಜೇಶ್‍ಗೌಡರ ಹೆಸರುಗಳು ರಾಜ್ಯದ ಪಟ್ಟಿಯಲ್ಲಿ ಅಂತಿಮಗೊಂಡು ಕೇಂದ್ರಕ್ಕೆ ಮೂರು ಜನರ ಪಟ್ಟಿ ರವಾನೆಯಾಗಿದೆ ಎನ್ನುವ ಮಾಹಿತಿ ಬಲ್ಲ ಮೂಲಗಳಿಂದ ಲಭ್ಯವಾಗಿದೆ. ರಾಜೇಶ್‍ಗೌಡರು ಕೇವಲ ಹುಲಿಕುಂಟೆ ಹೋಬಳಿಯನ್ನ ಹೊರತುಪಡಿಸಿದರೆ., ಬೇರೆ ಹೋಬಳಿಗಳಲ್ಲಿ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಲಾರರು ಎನ್ನುವ ವಿಷಯ ಚರ್ಚೆಗೆ ಗ್ರಾಸವಾಗಿದೆ. ಒಕ್ಕಲಿಗ ಸಮುದಾಯದ ಬಿ.ಸುರೇಶ್‍ಗೌಡ ಬಿಜೆಪಿಯ ಜಿಲ್ಲಾಧ್ಯಕ್ಷರಾಗಿರುವ ಕಾರಣ ಒಂದಷ್ಟು ಒಕ್ಕಲಿಗ ಸಮುದಾಯ ಬೆಂಬಲಿಸಬಹುದು. ಆದರೆ, ಕುಂಚಿಟಿಗ ಸಮುದಾಯ ಬಿ.ಸುರೇಶ್‍ಗೌಡರನ್ನು ಕೈಹಿಡಿಯುವುದೇ ಎನ್ನು ವುದು ಪ್ರಶ್ನೆಯಾಗಿಯೇ ಉಳಿದಿದೆ. ಅಹಿಂದ ಮತಗಳು ಸುರೇಶ್‍ಗೌಡರ ಬೆಂಬಲಕ್ಕೆ ಎಷ್ಟರಮಟ್ಟಿಗೆ ನಿಲ್ಲಬಹುದು ಎನ್ನುವುದು ಕುತೂಹಲಕಾರಿ ವಿಷಯ.

     ಯಾದವ ಸಮುದಾಯದ ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ್ ಶಿರಾ ಕ್ಷೇತ್ರದವರಲ್ಲದಿದ್ದರೂ ಈ ಕ್ಷೇತ್ರದೊಂದಿಗಿನ ಒಡನಾಟ ಇಂದು ನಿನ್ನೆಯದಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಶ್ರೀನಿವಾಸ್ ಯಾದವ ಸಮುದಾಯದವರಾಗಿರುವ ಕಾರಣ ಅವರು ಅಭ್ಯರ್ಥಿಯಾದರೆ ಈ ಕ್ಷೇತ್ರದ ಪ್ರಬಲ ಎರಡನೇ ಸಮುದಾಯವಾಗಿರುವ ಕಾರಣ ಹಾಗೂ ಯಾದವ ಸಮುದಾಯದ ಜೊತೆಗೆ ಕುರುಬ ಸಮುದಾಯ ಮತ್ತು ದಲಿತ ಸಮುದಾಯಗಳು ಅಹಿಂದ ವರ್ಚಸ್ಸಿನಿಂದ ಶ್ರೀನಿವಾಸ್ ಕೈಹಿಡಿಯಬಹುದೆಂಬ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರು ಶ್ರೀನಿವಾಸ್ ರವರನ್ನ ಬಿಜೆಪಿಯ ಅಧಿಕೃತ ಅಭ್ಯರ್ಥಿಯನ್ನಾಗಿ ಕಣಕ್ಕಳಿಸುವ ನಿರ್ಧಾರ ವನ್ನು ಕೈಗೊಂಡಂತಿದೆ ಮತ್ತು ಶ್ರೀನಿವಾಸ್ ವಿರುದ್ಧ ವಾಗಿ ಆರ್‍ಎಸ್‍ಎಸ್‍ನ ಯಾವುದೇ ಪ್ರಬಲ ನಾಯಕರು ವಿರೋಧ ವ್ಯಕ್ತಪಡಿಸದ ಕಾರಣ ಶ್ರೀನಿವಾಸ್ ಬಿಜೆಪಿ ಅಭ್ಯರ್ಥಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಸ್ವತಃ ಬಿಜೆಪಿಗರೇ ಮಾತನಾಡಿಕೊಳ್ಳುತ್ತಿದ್ದಾರೆ. ಒಂದು ಮೂಲಗಳ ಪ್ರಕಾರ ಶ್ರೀನಿವಾಸ್‍ರವರು ಈಗಾಗಲೇ ಶಿರಾ ಕ್ಷೇತ್ರದ ಅಹಿಂದ ನಾಯಕರುಗಳ ಮತ್ತು ಮುಖಂಡರುಗಳ ಸಂಪರ್ಕದಲ್ಲಿದ್ದರು, ಆಂತರಿಕ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ.

      ಇದೀಗ ಬಂದಿರುವ ಸ್ಪಷ್ಟ ಮಾಹಿತಿಗಳನ್ನು ಅವಲೋಕಿಸಿದರೆ ಮತ್ತೆ ಯಾದವ ಸಮುದಾಯದ ಶ್ರೀನಿವಾಸ್‍ರವರನ್ನ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಎಲ್ಲಾ ನಿರ್ಧಾರಗಳನ್ನ ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರಮಟ್ಟದ ವರಿಷ್ಠರು ಈಗಾಗಲೇ ಕೈಗೊಂಡಿರುವಂತಿದೆ. ಆದ ಕಾರಣ ಶ್ರೀನಿವಾಸ್ ಬಿಜೆಪಿಯ ಅಭ್ಯರ್ಥಿಯಾಗಿ ಶಿರಾ ಕ್ಷೇತ್ರದಿಂದ ಸ್ಪರ್ಧೆಗಿಳಿದರೆ ಅಹಿಂದ ಅಭ್ಯರ್ಥಿಯಾಗಿ ಹೊರಹೊಮ್ಮುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿರುವ ಕಾರಣ ಅಹಿಂದ ಮತಗಳು ಏಕೀಕರಣಗೊಂಡು ಒಗ್ಗಟ್ಟು ಪ್ರದರ್ಶಿಸಿ ಕುಂಚಿಟಿಗ ಗೌಡರ ವಿರುದ್ಧ ತೊಡೆತಟ್ಟಿದರೆ ಜಯಚಂದ್ರರವರ ಪಾಲಿಗೆ ಈ ಚುನಾವಣೆ ಕಬ್ಬಿಣದ ಕಡೆಲೆಯಂತಾಗುತ್ತದೆ ಎನ್ನುವುದು ಕೆಲವರ ಅಭಿಪ್ರಾಯ.

(Visited 34 times, 1 visits today)

Related posts