ಶಿರಾ ಉಪ ಚುನಾವಣೆ : ನಾಳೆ 7 ಗಂಟೆಯಿಂದ ಮತದಾನ


ತುಮಕೂರು : 

      ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಚುನಾವಣಾ ಮತದಾನವು ಇಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಪೊಲೀಸ್ ಬಿಗಿಭದ್ರತೆಯಲ್ಲಿ 330 ಮತಗಟ್ಟೆಗಳಲ್ಲಿ ನಡೆಯಲಿದೆ.

      ಕ್ಷೇತ್ರದಲ್ಲಿ ಪುರುಷರು 1,10,281 ಮಹಿಳೆಯರು 105434, ಇತರೆ 10 ಒಟ್ಟು 215725 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಮತದಾನ ಮಾಡುವ ಮತದಾರರಿಗೆ ಎಡಗೈ ಮಧ್ಯದ ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಲಾಗುತ್ತದೆ.

      ಮುಕ್ತ ಮತ್ತು ಶಾಂತಿಯುತ ಮತದಾನವನ್ನು ನಡೆಸಲು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ತಾಲ್ಲೂಕಿನಾದ್ಯಂತ ಇಂದು ಮಧ್ಯರಾತ್ರಿ 12 ಗಂಟೆಯವರೆಗೆ ಕಲಂ 144ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಆದೇಶವು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿರುವ ಮತದಾನ ಕೇಂದ್ರಗಳ ಸ್ಥಳಕ್ಕೆ ಅನ್ವಯಿಸುವುದಿಲ್ಲ.

      ಶಿರಾ ವಿಧಾನ ಸಭಾ ಉಪ ಚುನಾವಣೆಯನ್ನು ಶಾಂತಿಯುತವಾಗಿ ನೆರವೇರಿಸಲು 10 ಸ್ಥಳಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸಲಾಗಿದೆ. 5 ಎಫ್‍ಎಸ್‍ಟಿ ಟೀಮ್‍ಗಳು, 10 ಎಸ್.ಎಸ್.ಟಿ. ಟೀಮ್‍ಗಳು, 3 ವಿಎಸ್‍ಟಿ, 1 ವಿವಿಟಿ, ಹಾಗೂ 28 ಸೆಕ್ಟರ್ ಆಫೀಸರ್‍ಗಳನ್ನು ಮತ್ತು 52 ಮಂದಿ ಹೆಚ್ಚುವರಿ ಹೋಬಳಿವಾರು ಉಸ್ತುವಾರಿ ಅಧಿಕಾರಿಗಳನ್ನು ನೇಮಿಸಲಾಗಿದೆ.

      ಮತದಾನ ಮಾಡಲು ಬರುವ ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಮತಕೇಂದ್ರಕ್ಕೆ ಪ್ರವೇಶಿಸುವ ಮುನ್ನ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುವುದು. ಸ್ಯಾನಿಟೈಸ್ ಮಾಡಿದ ನಂತರ ಮತದಾನ ಮಾಡಲು ಮತದಾರರಿಗೆ ಒಂದು ಕೈಗವಸು ನೀಡಲಾಗುವುದು. ಮತಗಟ್ಟೆಯಲ್ಲಿ 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್/ವೃತ್ತಗಳನ್ನು ಹಾಕಲಾಗಿದೆ. ಮತದಾರರು ಕೊರೋನಾ ಮುಂಜಾಗ್ರತಾ ನಿಯಮಗಳನ್ನು ಪಾಲಿಸಬೇಕು. ಕೋವಿಡ್ ಸೋಂಕಿತರು/ಶಂಕಿತರ ಮತದಾನಕ್ಕಾಗಿ ಮತದಾನದ ಅವಧಿಯ ಕೊನೆಯ 1 ಗಂಟೆಯನ್ನು ಮೀಸಲಿಡಲಾಗಿದೆ. ಇದಕ್ಕಾಗಿ ಮತಗಟ್ಟೆಯ ಸಿಬ್ಬಂದಿಗಳಿಗೆ ಪಿಪಿಕಿಟ್‍ಗಳನ್ನು ಒದಗಿಸಲಾಗಿದೆ.

      ಶಿರಾ ಚುನಾವಣಾ ಮತದಾನದ ನಂತರ ಮತ ಯಂತ್ರಗಳನ್ನು ತುಮಕೂರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ಥಾಪಿಸಿರುವ ಎಣಿಕಾ ಕೇಂದ್ರಕ್ಕೆ ಸ್ಥಳಾಂತರಿಸಿ 3 ಲೇಯರ್‍ನ ಗಾರ್ಡ್ ಬಂದೋಬಸ್ತ್‍ನಲ್ಲಿ ಇಡಲಾಗುವುದು. ನವೆಂಬರ್ 10 ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.

ಶಾಂತಿಯುತ ಮತದಾನಕ್ಕೆ ಭದ್ರತೆ:-

      ಶಿರಾ ಉಪಚುನಾವಣೆಯ ಶಾಂತಿಯುತ ಮತದಾನಕ್ಕೆ 2 ಡಿವೈಎಸ್‍ಪಿ, 5 ಮಂದಿ ಇನ್ಸ್‍ಪೆಕ್ಟರ್, 21 ಪಿಎಸ್‍ಐ, 19 ಎಎಸ್‍ಐ ಸೇರಿದಂತೆ 900ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. 3 ಕೇಂದ್ರೀಯ ಭದ್ರತಾ ಸಿಬ್ಬಂದಿಗಳ ಕಂಪನಿಗಳು ಭದ್ರತೆ ನೀಡಲಿವೆ. ಹೋಬಳಿವಾರು 5 ಇನ್ಸ್‍ಪೆಕ್ಟರ್‍ಗಳ ತಂಡ ರೌಂಡ್ಸ್‍ನಲ್ಲಿರಲಿದೆ.

ಮತದಾನ ಮಾಡಲು ಪರ್ಯಾಯ ದಾಖಲೆಗಳು :-

      ಮತದಾನ ಮಾಡಲು ಎಪಿಕ್ ಇಲ್ಲದಿದ್ದರೆ ಆಧಾರ್ ಕಾರ್ಡ್, ನರೇಗಾ ಜಾಬ್‍ಕಾರ್ಡ್, ಬ್ಯಾಂಕ್/ಅಂಚೆ ಕಛೇರಿಯ ಭಾವಚಿತ್ರವಿರುವ ಪಾಸ್‍ಬುಕ್, ಕಾರ್ಮಿಕ ಸಚಿವಾಲಯದಡಿ ಆರೋಗ್ಯ ವಿಮೆಯಡಿ ವಿತರಿಸಿರುವ ಸ್ಮಾರ್ಟ್ ಕಾರ್ಡು, ಡ್ರೈವಿಂಗ್ ಲೈಸೆನ್ಸ್, ಆರ್‍ಜಿಐಯಿಂದ ನೀಡಿರುವ ಸ್ಮಾರ್ಟ್ ಕಾರ್ಡ್, ಇಂಡಿಯನ್ ಪಾಸ್‍ಪೋರ್ಟ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಕೇಂದ್ರ/ರಾಜ್ಯ/ಸಾರ್ವಜನಿಕ ಕ್ಷೇತ್ರದ ನಿಗಮ/ ಸಾರ್ವಜನಿಕ ವಲಯದ ಉದ್ಯಮಗಳು ತಮ್ಮ ಉದ್ಯೋಗಿಗಳಿಗೆ ನೀಡಿರುವ ಗುರುತಿನ ಚೀಟಿ, ಸಂಸದರು/ಶಾಸಕರು/ವಿಧಾನಪರಿಷತ್ ಶಾಸಕರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿಯನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶ ನೀಡಲಾಗಿದೆ.

    ಮತದಾನ ದಿನದಂದು ವೇತನ ಸಹಿತ ರಜೆ ಘೋಷಣೆ:-

      ಶಿರಾ ವಿಧಾನಸಭಾ ಉಪ ಚುನಾವಣೆಯ ಮತಕ್ಷೇತ್ರ ವ್ಯಾಪ್ತಿಯ ಎಲ್ಲಾ ರಾಜ್ಯ ಸರ್ಕಾರಿ ಕಛೇರಿಗಳಿಗೆ, ಶಾಲಾ ಕಾಲೇಜುಗಳಿಗೆ(ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಒಳಗೊಂಡಂತೆ ನವೆಂಬರ್ 3 ರಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
ಶಿರಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಹೊರಗಡೆ ಕೆಲಸ ನಿರ್ವಹಿಸುತ್ತಿದ್ದು ಮತ್ತು ಉಪ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನೋಂದಾಯಿತ ಮತದಾರರಿಗೆ ಹಾಗೂ ಅರ್ಹ ಮತದಾರರಾಗಿರುವ ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇನ್ನಿತರ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ವೇತನ ಸಹಿತ ರಜೆ ಘೋಷಿಸಲಾಗಿದೆ. ಈ ರಜೆಯು ನೆಗೋಷಿಯೇಬಲ್ ಇನ್‍ಸ್‍ಟ್ರುಮೆಂಟ್ ಆಕ್ಟ್‍ನಡಿ ಬರುವ ಎಲ್ಲಾ ಸಂಸ್ಥೆಗಳಿಗೂ ಅನ್ವಯಿಸಲಿದೆ. ಈ ರಜೆಯು ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ. ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡುವಂತೆ ಪ್ರಕಟಣೆ ತಿಳಿಸಿದೆ. 

(Visited 5 times, 1 visits today)

Related posts