ಸಾರಿಗೆ ಬಸ್ ತಡೆದು ವಿದ್ಯಾರ್ಥಿಗಳಿಂದ ಪ್ರತಿಭಟನೆ

ಶಿರಾ :

      ನಗರದ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್ ಸೌಲಭ್ಯವಿಲ್ಲವೆಂದು ಆರೋಪಿಸಿ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಸಾರಿಗೆ ಬಸ್ಸನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಕಳ್ಳಂಬೆಳ್ಳ ಗ್ರಾಮದ ಗೇಟ್‍ನಲ್ಲಿ ನಡೆದಿದೆ.

      ಕಳ್ಳಂಬೆಳ್ಳ ಹೋಬಳಿಯ ಬೆಂಚೆ, ಕಳ್ಳಂಬೆಳ್ಳ ಗ್ರಾಮ, ಗೋಪಾಲದೇವರಹಳ್ಳಿ, ದೊಡ್ಡ ಅಗ್ರಹಾರ, ಚಿಕ್ಕ ಅಗ್ರಹಾರ, ಬಟ್ಟಿಗಾನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳ ವಿದ್ಯಾರ್ಥಿಗಳು ಶಿರಾ ನಗರದ ಶಾಲಾ-ಕಾಲೇಜುಗಳಿಗೆ ಬರಬೇಕಿದ್ದು, ಬೆಳಗ್ಗೆ ಕೇವಲ ಒಂದು ಸರ್ಕಾರಿ ಬಸ್ ಬಿಟ್ಟರೆ ಇನ್ನಾವುದೇ ಸರ್ಕಾರಿ ಬಸ್‍ಗಳನ್ನು ಈ ರಸ್ತೆಯ ಮೂಲಕ ಚಲಿಸಲು ಅವಕಾಶ ಕಲ್ಪಿಸಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

      ಕಳ್ಳಂಬೆಳ್ಳ ಗ್ರಾಮದ ಗೇಟ್‍ನಲ್ಲಿ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸ್‍ನ್ನು ಅಡ್ಡಗಟ್ಟಿದ ವಿದ್ಯಾರ್ಥಿಗಳು ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸದ ಹೊರತು ಬಸ್ಸನ್ನು ಬಿಡುವುದಿಲ್ಲ ಎಂದು ಹಠ ಹಿಡಿದು ಕೂತರು.

      ವಿವಿಧ ಗ್ರಾಮಗಳ ಸುಮಾರು 200ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಶಿರಾ ನಗರಕ್ಕೆ ವಿದ್ಯಾಭ್ಯಾಸಕ್ಕೆಂದು ಬರುತ್ತಿದ್ದು ಈ ಎಲ್ಲಾ ವಿದ್ಯಾರ್ಥಿಗಳು ಬಸ್ ಪಾಸ್ ಸೌಲಭ್ಯವನ್ನೂ ಪಡೆದಿದ್ದಾರೆ.ಈ ಭಾಗದಲ್ಲಿ ಬಂದು ಹೋಗುವ ಒಂದೇ ಒಂದು ಬಸ್‍ನಲ್ಲಿ ಕೇವಲ 50 ಮಂದಿಗೆ ಮಾತ್ರ ಸ್ಥಳಾವಕಾಶವಾಗುತ್ತಿದ್ದು ಉಳಿದ ವಿದ್ಯಾರ್ಥಿಗಳನ್ನು ಚಾಲಕ ಹಾಗೂ ನಿರ್ವಾಹಕರು ವಿಧಿ ಇಲ್ಲದೆ ಬಿಟ್ಟು ಬರಬೇಕಿದೆ. ಬಸ್ಸಿನಲ್ಲಿ ಸ್ಥಳಾವಕಾಶವಿಲ್ಲದೆ ಬಸ್ ಪಾಸ್ ಇರುವ ವಿದ್ಯಾರ್ಥಿಗಳು ಖಾಸಗಿ ಬಸ್ ಹಾಗೂ ದ್ವಿಚಕ್ರ ವಾಹನ ಸವಾರರನ್ನು ಓಲೈಸುವುದು ಅನಿವಾರ್ಯವಾಗಿದೆ.

      ಸದರಿ ಸಮಸ್ಯೆಯನ್ನು ನೀಗಿಸಲು ಕೂಡಲೇ ಒಂದೆರಡು ಬಸ್‍ಗಳನ್ನು ಹೆಚ್ಚುವರಿಯಾಗಿ ನೀಡುವಂತೆ ಒತ್ತಾಯಿಸಿ ಅನೇಕ ಬಾರಿ ಮನವಿ ಮಾಡಿದ್ದರೂ ಸಾರಿಗೆ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿ ಪ್ರತಿಭಟನೆ ನಡೆಸಿದರು.

(Visited 6 times, 1 visits today)

Related posts

Leave a Comment