ವಿಶ್ವವಿದ್ಯಾಲಯದಲ್ಲಿ ಎಸ್‍ಎಫ್‍ಐ ನೂತನ ಸಮಿತಿ ರಚನೆ

ತುಮಕೂರು:

     ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆಯು ದೇಶವ್ಯಾಪಿ ವಿದ್ಯಾರ್ಥಿಗಳ ಸಮಸ್ಯೆಗಳ ನಿವಾರಣೆ ಮತ್ತು ಮೂಲಭೂತ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತ ಬಂದಿದೆ.

     ನವ ಉದಾರಿಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಪರಿಣಾಮ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಪೋರೇಟ್ ಕಂಪನಿಗಳು ಹಣಹೂಡಿ ವಿದ್ಯಾರ್ಥಿಗಳಿಂದ ವಸೂಲಿಗೆ ಇಳಿದಿವೆ. ಇಂತಹ ಸಂದರ್ಭದಲ್ಲಿ ಬಡವಿದ್ಯಾರ್ಥಿಗಳು ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಎಂಬುದು ಕನಸಿನ ಮಾತಾಗಿದೆ.

      ಕಲಾ ಮತ್ತು ವಿಜ್ಞಾನ ಹೊರತುಪಡಿಸಿ ವೃತ್ತಿಪರ ಕೋರ್ಸ್‍ಗಳಿಗೆ ಪ್ರವೇಶ ಪಡೆಯಲು ಬಡ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ನಮ್ಮನ್ನು ಆಳುವ ಸರ್ಕಾರಗಳು ಸಹ ಶ್ರೀಮಂತರ ಪರವಾದ ನೀತಿಗಳನ್ನು ಜಾರಿಗೊಳಿಸಿ ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ದೂರವಿಡುವ ಕೆಲಸ ಮಾಡುತ್ತಿವೆ. ರಾಜಕಾರಣಿಗಳಿಗೆ ಸೇರಿದ ಶಿಕ್ಷಣ ಸಂಸ್ಥೆಗಳೇ ಹೆಚ್ಚಾಗಿದ್ದು ದುಬಾರಿ ಶುಲ್ಕ ವಿಧಿಸುವ ಮೂಲಕ ಬಡ ವಿದ್ಯಾರ್ಥಿಗಳನ್ನು ಸುಲಿಗೆ ಮಾಡುತ್ತಿವೆ.

      ಇದನ್ನು ಗಮನಿಸಿದ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ಪ್ರತಿಯೊಬ್ಬರಿಗೂ ಶಿಕ್ಷಣ, ಆರೋಗ್ಯ, ಉದ್ಯೋಗ ಉಚಿತವಾಗಿ ಸಿಗಬೇಕು. ಇವು ಮೂಲಭೂತ ಹಕ್ಕುಗಳು ಆಗಬೇಕು ಎಂದು ದೇಶವ್ಯಾಪ್ತಿ ವಿದ್ಯಾರ್ಥಿ ಚಳವಳಿಯನ್ನು ಮುನ್ನಡಿಸಿಕೊಂಡು ಬರ ಲಾಗುತ್ತಿದೆ. ದೇಶದಲ್ಲಿ ಎಸ್‍ಎಫ್‍ಐ 2 ಕೋಟಿ, 20 ಲಕ್ಷ ಸದಸ್ಯರನ್ನು ಹೊಂದಿದ್ದು ನಮ್ಮ ಪ್ರಮುಖ ಉದ್ದೇಶ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಸಾಮಾಜಿಕ ಭದ್ರತೆ, ನಿರುದ್ಯೋಗ ನಿರ್ವಹಣೆ, ದೇಶದ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುವುದು ಪ್ರಮುಖ ಉದ್ದೇಶ ಹೊಂದಿದೆ. ಇಂತಹ ಸಂದರ್ಭದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆಯನ್ನು ಜಿಲ್ಲೆಯಲ್ಲಿ ಬಲಿಷ್ಠಗೊಳಿಸುವ ಉದ್ದೇಶದಿಂದ ನೂತನ ಸಮಿತಿಯನ್ನು ರಚಿಸಲಾಗಿದ್ದು, ರಾಜ್ಯ ಕಾರ್ಯದರ್ಶಿ ವಾಸದೇವರೆಡ್ಡಿ ರವರ ನೇತೃತ್ವದಲ್ಲಿ ನಗರ ಸಮಿತಿಯ ಸಭೆ ನಡೆದು ನೂತನ ತುಮಕೂರು ವಿಶ್ವವಿದ್ಯಾನಿಲಯ ಸಮಿತಿಯನ್ನು ರಚಿಸಲಾಗಿದ್ದು ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಯ್ಕೆ ಮಾಡಲಾಗಿರುತ್ತದೆ. ಹಾಗೂ ಎಸ್‍ಎಫ್‍ಐ ಸ್ಥಾಪನೆಯಾಗಿ 50 ವರ್ಷ ತುಂಬಿದ ಸಂದರ್ಭದಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಲಾಗಿರುತ್ತದೆ.

      ಇದೇ ಸಂದರ್ಭದಲ್ಲಿ ತುಮಕೂರಿನಲ್ಲಿ ಎಸ್‍ಎಫ್‍ಐ 2020 ಸದಸ್ಯತ್ವಕ್ಕೆ ಚಾಲನೆ ನೀಡಿದ್ದು ಇದರ ಉದ್ಘಾಟನಾ ಭಾಷಣವನ್ನು ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಮಾಡಿದರು. ವಿದ್ಯಾರ್ಥಿಗಳಿಗೆ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಹಾಗೂ ಕಾಲಕಾಲಕ್ಕೆ ಬರುವ ಸಮಸ್ಯೆಗಳಿಗೆ ಒಗ್ಗಟ್ಟಿನಿಂದ ವಿದ್ಯಾರ್ಥಿ ಚಳವಳಿಯನ್ನು ಮುನ್ನಡೆಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ. ವಿದ್ಯಾರ್ಥಿಗಳ ಮೇಲೆ ವಿವಿಗಳು ವಿರೋಧಿ ನೀತಿಗಳನ್ನು ಜಾರಿ ಮಾಡಿದಾಗ ಅವುಗಳನ್ನು ವಿರೋಧಿಸಿ ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸಬೇಕಾಗುತ್ತದೆ ಎಂದರು.

      ಜಿಲ್ಲಾಧ್ಯಕ್ಷ ಈ.ಶಿವಣ್ಣ ಮಾತನಾಡಿ ತುಮಕೂರು ವಿಶ್ವವಿದ್ಯಾನಿಲಯ ಬೇಕೆಂದು ಆರಂಭದಿಂದಲೂ ಎಸ್‍ಎಫ್‍ಐ ಹೋರಾಟ ನಡೆಸಿಕೊಂಡು ಬಂದಿದೆ. ಈಗಲೂ ವಿದ್ಯಾರ್ಥಿಗಳ ಸಮಸ್ಯೆಗಳ ಆಧಾರದ ಮೇಲೆ ಹೋರಾಟವನ್ನು ಮುಂದುವರಿಸುತ್ತಿದೆ. ವಿವಿ ತನ್ನದೇ ಆದ ಕ್ಯಾಂಪಸ್ ಹೊಂದಬೇಕು. ಈಗಾಗಲೇ ಗುರುತಿಸಿರುವ ಜಾಗದಲ್ಲಿ ವಿವಿ ಸ್ಥಾಪನೆ ಆಗಬೇಕು. ವಿದ್ಯಾರ್ಥಿಗಳಿಗೆ ಸುಂದರ ಪರಿಸರದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು ಎಂಬುದು ನಮ್ಮ ಸಂಘಟನೆಯ ಪ್ರಮುಖ ಉದ್ದೇಶವಾಗಿದೆ.

      ಕುಲಪತಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಒತ್ತಾಯಿಸುತ್ತೇವೆ ಎಂದರು. ಸಭೆಯಲ್ಲಿ ವಿವಿಯ ನೂತನ ಸಮಿತಿಯನ್ನು ರಚಿಸಿದ್ದು ಅಧ್ಯಕ್ಷರಾಗಿ ಆಶಾ ವಿ, ಕಾರ್ಯದರ್ಶಿಯಾಗಿ ತಿಲಕ್, ಉಪಾಧ್ಯಕ್ಷರಾಗಿ ಮಹೇಶ್, ಸಹಕಾರ್ಯದರ್ಶಿಯಾಗಿ ರಶ್ಮಿ ಸೇರಿದಂತೆ 15 ಜನರ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

(Visited 5 times, 1 visits today)

Related posts

Leave a Comment