ತುಮಕೂರು ವಿವಿಯಲ್ಲಿ ಉದ್ಯೋಗಾಧಾರಿತ ಕೋರ್ಸುಗಳ ಆರಂಭಿಸಲು ಡಿಸಿಎಂ ಸೂಚನೆ

ತುಮಕೂರು :

      ತುಮಕೂರು ಜಿಲ್ಲೆಯಾದ್ಯಂತ ಉದ್ಯೋಗಕ್ಕೆ ಅವಕಾಶವಿರುವ ಉದ್ಯೋಗಾಧಾರಿತ ಕೋರ್ಸ್‍ಗಳನ್ನು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಆರಂಭಿಸುವಂತೆ ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಸೂಚಿಸಿದರು.

      ತುಮಕೂರು ವಿಶ್ವವಿದ್ಯಾನಿಲಯಕ್ಕೆ ಇಂದು ಭೇಟಿ ನೀಡಿ ಕುಲಪತಿ ಕಾರ್ಯಾಲಯದಲ್ಲಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು ಹಾಗೂ ಡೀನ್‍ಗಳ ಸಭೆ ನಡೆಸಿ ಅವರು ಮಾತನಾಡಿದರು. ವಿಶ್ವವಿದ್ಯಾನಿಲಯದ ಕ್ಯಾಂಪಸ್ ಪ್ರದೇಶ, ವಿದ್ಯಾರ್ಥಿಗಳ ಸಂಖ್ಯೆ, ಮೂಲಭೂತ ಸೌಲಭ್ಯಗಳು, ಜಿಲ್ಲೆಯಲ್ಲಿರುವ ಪಿ.ಜಿ. ಸೆಂಟರ್ ಬಗ್ಗೆ, ಬಿದರಕಟ್ಟೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕ್ಯಾಂಪಸ್ ಕುರಿತು ಸಭೆಯಲ್ಲಿ ಮಾಹಿತಿ ಪಡೆದರು.

      ನಗರದ ಮಧ್ಯಭಾಗದಲ್ಲಿ ವಿಶ್ವವಿದ್ಯಾನಿಲಯವು ಇರುವುದರಿಂದ ಉತ್ತಮವಾಗಿ ಇದನ್ನು ಬಳಸಿಕೊಂಡು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಗೆ ಅನುವು ಮಾಡಿಕೊಡುವುದರ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾನಿಲಯದಿಂದ ಹೊರತರುವಂತಹ ಪ್ರಯತ್ನವಾಗಬೇಕು. ಬಹಳ ಉತ್ತಮವಾಗಿ ಕ್ಯಾಂಪಸ್ ಬೆಳೆಸಬೇಕು. ಶೈಕ್ಷಣಿಕ ಗುಣಮಟ್ಟ ಕುಸಿತದ ಬಗ್ಗೆ ಗಮನ ಹರಿಸಿ, ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.

      ನಂತರ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಭೇಟಿ ನೀಡಿ ಕ್ಯಾಂಪಸ್ ಪರಿಶೀಲಿಸಿ ವಿದ್ಯಾರ್ಥಿಗಳ ಸಂಖ್ಯೆ ಮತ್ತು ವಿವಿಧ ವಿಭಾಗಗಳ ಬಗ್ಗೆ ಮಾಹಿತಿ ಪಡೆದ ನಂತರ ಇದೊಂದು ಹಳೆಯ ಪಾಲಿಟೆಕ್ನಿಕ್ ಕಾಲೇಜು ಬಹಳ ಕಾಲದಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದ ಅವರು ಪ್ರತಿಯೊಂದು ತಾಲೂಕುಗಳಲ್ಲಿ ಪಾಲಿಟೆಕ್ನಿಕ್ ಕಾಲೇಜು ಇರಬೇಕೆಂಬುದು ನಮ್ಮ ಗುರಿ. ಇದಕ್ಕಾಗಿ ಮಾನವ ಸಂಪನ್ಮೂಲದ ಅವಶ್ಯಕತೆ ಇದೆ ಎಂದರು.

      ಇದೇ ಸಂದರ್ಭದಲ್ಲಿ ಕುಲಪತಿ ಕಾರ್ಯಾಲಯದ ಮುಂದೆ ಅರಳಿ ಗಿಡ ನೆಟ್ಟರು.ಶಾಸಕ ಜಿ.ಬಿ. ಜ್ಯೋತಿಗಣೇಶ್, ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ. ಎಲ್ ಪಿ. ರಾಜು, ಕುಲಸಚಿವ ಪ್ರೊ. ಗಂಗಾಧರ ನಾಯ್ಕ, ಎಡಿಸಿ ಕೆ. ಚನ್ನಬಸಪ್ಪ, ಡಿವೈಎಸ್‍ಪಿ ತಿಪ್ಪೇಸ್ವಾಮಿ, ಎಎಸ್‍ಪಿ ಟಿ.ಜಿ ಉದೇಶ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ, ಮಾಜಿ ವಿಧಾನಪರಿಷತ್ ಸದಸ್ಯ ಹುಲಿನಾಯ್ಕರ್, ಸಿಂಡಿಕೇಟ್ ಸದಸ್ಯರು, ಕಾಲೇಜಿನ ಡೀನ್‍ಗಳು, ಡಿವೈಎಸ್‍ಪಿ.ವಿಶ್ವವಿದ್ಯಾನಿಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

(Visited 12 times, 1 visits today)

Related posts