ಶೌಚಾಲಯ ರಹಿತ ಕುಟುಂಬಗಳಿಗೆ 6 ವಾರದೊಳಗಾಗಿ ಶೌಚಾಲಯವನ್ನು ನಿರ್ಮಿಸಿ

ತುಮಕೂರು :

      ಕಳೆದ 2012ರಲ್ಲಿ ನಡೆಸಿದ ಬೇಸ್‍ಲೈನ್ ಸರ್ವೆ ಸಮೀಕ್ಷೆಯಲ್ಲಿ ಹೊರಗುಳಿದ ಎಲ್ಲ ಶೌಚಾಲಯ ರಹಿತ ಕುಟುಂಬಗಳಿಗೆ ಮುಂದಿನ 6 ವಾರದೊಳಗಾಗಿ ತಪ್ಪದೇ ಶೌಚಾಲಯವನ್ನು ನಿರ್ಮಿಸಿಕೊಡಬೇಕು ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ ಪರಮೇಶ್ವರನ್ ಅಯ್ಯರ್ ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದರು.

      ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು 10 ಜಿಲ್ಲೆಗಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸ್ವಚ್ಛ ಭಾರತ್ ಮಿಷನ್(ಗ್ರಾ)ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಬಯಲು ಬಹಿರ್ದೆಸೆ ಮುಕ್ತ ರಾಷ್ಟ್ರವನ್ನಾಗಿ ನಿರ್ಮಿಸಲು ಕೇಂದ್ರವು ಮಹತ್ವಾಕಾಂಕ್ಷಿ ಸ್ವಚ್ಛಭಾರತ್ ಮಿಷನ್(ಗ್ರಾ) ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆ ಜಾರಿಗೆ ಬಂದು 5 ವರ್ಷ ಕಳೆದಿದ್ದು, ಮುಂದಿನ 5 ವರ್ಷಗಳಿಗಾಗಿ 2ನೇ ಹಂತದಲ್ಲಿ ಸ್ವಚ್ಛಭಾರತ್(ಮಿಷನ್) ಯೋಜನೆಯನ್ನು ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ಇದಕ್ಕಾಗಿ 1.4ಲಕ್ಷಕೋಟಿ ರೂ.ಗಳ ಅಂದಾಜು ವೆಚ್ಚದ ಅನುದಾನವನ್ನು ಬಿಡುಗಡೆ ಮಾಡಲಾಗುವುದೆಂದು ತಿಳಿಸಿದರು.

      ಕರ್ನಾಟಕ ರಾಜ್ಯದಲ್ಲಿ ಸ್ವಚ್ಛಭಾರತ್ ಯೋಜನೆಯಡಿ ವೈಯಕ್ತಿಕ/ಸಮುದಾಯ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಬಯಲು ಬಹಿರ್ದೆಸೆ ಮುಕ್ತ ರಾಜ್ಯವಾಗಿ ರೂಪುಗೊಳ್ಳುತ್ತಿದೆ. ಶೌಚಾಲಯ ನಿರ್ಮಾಣ ಪ್ರಗತಿಯಲ್ಲಿ ತುಮಕೂರು ಜಿಲ್ಲೆ ಮುಂದಿದ್ದು, ಜಿಲ್ಲೆಯನ್ನು ಈಗಾಗಲೇ ಬಯಲು ಶೌಚಮುಕ್ತವೆಂದು ಘೋಷಿಸಲಾಗಿದೆ. ಆದರೂ ಕೆಲವರು ಅರಿವಿನ ಕೊರತೆಯಿಂದ ಇನ್ನೂ ಬಯಲು ಶೌಚದಿಂದ ಮುಕ್ತರಾಗಿಲ್ಲ. ಈ ನಿಟ್ಟಿನಲ್ಲಿ ಕಡ್ಡಾಯವಾಗಿ ಶೌಚಾಲಯಗಳನ್ನು ಬಳಸುವಂತೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ಮೂಲಕ ಅವರ ಮನಸ್ಸನ್ನು ಪರಿವರ್ತಿಸಬೇಕು. ಜನರ ಮನಸ್ಸನ್ನು ಬದಲಾಯಿಸಲು ಕನಿಷ್ಟ 3 ವರ್ಷಗಳಾದರೂ ಬೇಕಾಗುತ್ತದೆ. ಜನರ ಮನಸ್ಸನ್ನು ಬದಲಾಯಿಸುವುದು ಒಂದು ಸವಾಲಿನ ವಿಷಯವಾಗಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದ ನಂತರ ಆಯಾ ಜಿಲ್ಲೆಯಲ್ಲಿರುವ ಸಾಮೂಹಿಕ ಶೌಚಾಲಯ/ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿರುವ ಬಗ್ಗೆ ಹಾಜರಿದ್ದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಂದ ಮಾಹಿತಿ ಪಡೆದರು.

      ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ರಾಜ್ಯ ಆಯುಕ್ತ ಡಾ: ಆರ್. ವಿಶಾಲ್ ಮಾತನಾಡಿ, ವೈಯಕ್ತಿಕ ಶೌಚಾಲಯ ನಿರ್ಮಾಣ ಕಾರ್ಯದ ನಿಗಧಿತ ಗುರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಪ್ರಸಕ್ತ ವರ್ಷ ಜನಗಣತಿ ನಡೆಯಲಿದ್ದು, ಗಣತಿದಾರರು ಗಣತಿ ಕಾರ್ಯಕ್ಕೆ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶೌಚಾಲಯದ ಸೌಲಭ್ಯವಿರುವ, ಅದನ್ನು ಬಳಕೆ ಮಾಡುತ್ತಿರುವ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಬೇಕು. ಮಾಹಿತಿಯನ್ನು ಕಡ್ಡಾಯವಾಗಿ ಸಂಗ್ರಹಿಸಿದಾಗ ಮಾತ್ರ ಶೇ. 100ರಷ್ಟು ಶೌಚಾಲಯ ನಿರ್ಮಾಣ ಮಾಡಲು ಸಾಧ್ಯ. ಪ್ರಸಕ್ತ ಜನಗಣತಿ ಕಾರ್ಯದಲ್ಲಿ ಸಂಗ್ರಹವಾಗುವ ಅಂಕಿ-ಅಂಶ ಹಾಗೂ ಬೇಸ್‍ಲೈನ್ ಸರ್ವೆ ಸಮೀಕ್ಷೆಯ ಅಂಕಿ-ಅಂಶಗಳಿಗೆ ತಾಳೆಯಾಗಬೇಕು. ತಪ್ಪಿದಲ್ಲಿ ಯೋಜನೆಯ ಯಶಸ್ವಿ ಅನುಷ್ಠಾನ ಕಷ್ಟಸಾಧ್ಯ ಎಂದು ತಿಳಿಸಿದರು. ಗ್ರಾಮೀಣ ನೀರು ಸರಬರಾಜಿಗೆ ಸಂಬಂಧಿಸಿದಂತೆ ಸಭೆ ನಡೆಸಿ ಮಾತನಾಡಿದ ಅಯ್ಯರ್ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಶೇ.40ರಷ್ಟು ಮಾತ್ರ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ಇದನ್ನು ಮುಂದಿನ 5 ವರ್ಷಗಳೊಳಗೆ ಶೇ.100ರಷ್ಟು ಪ್ರಮಾಣಕ್ಕೆ ತರುವ ಉದ್ದೇಶವಿದೆ. ಇದಕ್ಕಾಗಿ ಪ್ರಧಾನಮಂತ್ರಿ ಮೋದಿ ಅವರು ಕಳೆದ 2019ರಲ್ಲಿ ಜಲ್-ಜೀವನ್ ಮಿಷನ್ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯಡಿ ನೀರಿನ ಮೂಲಗಳ ಮರುಪೂರಣ, ಮಳೆ ನೀರು ಮರುಬಳಕೆಗೆ ಆದ್ಯತೆ ನೀಡಲಾಗುವುದೆಂದರು.

      ಡಾ|| ವಿಶಾಲ್ ಮಾತನಾಡಿ, ರಾಜ್ಯದ ಎಲ್ಲಾ ಗ್ರಾಮೀಣ ಪ್ರದೇಶದ ಪ್ರತಿ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ನೀಡಲು “ಮನೆ-ಮನೆಗೆ ಗಂಗೆ” ಎಂಬ ವಿನೂತನ ಯೋಜನೆಯನ್ನು ಜಾರಿಗೆ ತರಲು ಪ್ರಸಕ್ತ ಆಯವ್ಯಯದಲ್ಲಿ ಮುಖ್ಯಮಂತ್ರಿಗಳು ಮಂಡಿಸಿದ್ದಾರೆ. ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಎಲ್ಲಾ ಗ್ರಾಮ ಪಂಚಾಯತಿ ಅಧಿಕಾರಿಗಳು ಕ್ರಿಯಾ ಯೋಜನೆ ಸಿದ್ಧಪಡಿಸಬೇಕೆಂದು ಸೂಚನೆ ನೀಡಿದರಲ್ಲದೆ ಮನೆ-ಮನೆಗೆ ನೀರಿನ ಸಂಪರ್ಕ ಕಲ್ಪಿಸುವುದು ಮಾತ್ರವಲ್ಲ. ನೀರು ಸರಬರಾಜು ಮಾಡಲು ಶುಲ್ಕ ನಿಗಧಿಪಡಿಸಿ ವಸೂಲಿ ಮಾಡಬೇಕು. ವಸೂಲಾದ ಶುಲ್ಕವನ್ನು ಕುಡಿಯುವ ನೀರು ನಿರ್ವಹಣೆಗೆ ವಿನಿಯೋಗಿಸಬೇಕೆಂದು ಸಲಹೆ ನೀಡಿದರು.

      ರಾಜ್ಯದಲ್ಲಿ ಬೇಸ್‍ಲೈನ್ ಸರ್ವೆ ಸಮೀಕ್ಷೆ(LOB = Left out basic line survey)ಯಿಂದ ಹೊರಗುಳಿದ ಕುಟುಂಬಗಳಿಗೆ 268341 ಹಾಗೂ ಬೇಸ್‍ಲೈನ್ ಸರ್ವೇಯಿಂದ ಯಾರೂ ತಪ್ಪಿಸಿಕೊಳ್ಳದಂತೆ (NOLB= No one Left out behind) ಉದ್ದೇಶಿತ ಕುಟುಂಬಗಳಿಗೆ 174990 ಸೇರಿದಂತೆ ಒಟ್ಟು 443331 ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, ಈ ಪೈಕಿ ಈಗಾಗಲೇ 347670 ಶೌಚಾಲಯಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ. ಅದೇ ರೀತಿ ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ LOB Cr ಅಡಿ ನಿಗಧಿಪಡಿಸಲಾಗಿದ್ದ 10566 ಶೌಚಾಲಯ ನಿರ್ಮಿಸುವ ಗುರಿಯ ಪೈಕಿ ಶೇ. 98ರಷ್ಟು ಪ್ರಗತಿ ಸಾಧಿಸಲಾಗಿದೆ. ಓಔಐಃ ಅಡಿ ಶೇ. 9.42 ಮಾತ್ರ ಗುರಿ ಸಾಧಿಸಿದ್ದು, ಮುಂದಿನ 6 ವಾರಗಳೊಳಗೆ ಪೂರ್ಣ ಪ್ರಮಾಣದ ಪ್ರಗತಿ ಸಾಧಿಸಲು ಸೂಚನೆ ನೀಡಿದರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕಿಗೆ ತಲಾ 10ರಂತೆ 100 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಇದಕ್ಕಾಗಿ ಮೊದಲ ಹಂತದಲ್ಲಿ (ಪ್ರತಿ ಘಟಕಕ್ಕೆ 1.80ಲಕ್ಷ ರೂ.ಗಳಂತೆ ಅಂದಾಜು ವೆಚ್ಚದಂತೆ) 90ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಉಳಿದಂತೆ ಅಗತ್ಯವಿರುವ 90 ಲಕ್ಷ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದೇ ರೀತಿ ಘನತ್ಯಾಜ್ಯ ಘಟಕ ನಿರ್ವಹಣೆಗಾಗಿ ಜಿಲ್ಲೆಗೆ 50 ಘಟಕಗಳನ್ನು ನಿರ್ಮಿಸುವ ಗುರಿಯಿದ್ದು, 44 ಘಟಕಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ದೊರೆತಿದೆ. ಘನತ್ಯಾಜ್ಯ ಘಟಕ ನಿರ್ಮಾಣಕ್ಕಾಗಿ ಸರ್ಕಾರದಿಂದ 4.35ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಸದ್ಯಕ್ಕೆ 25 ಸ್ಥಳಗಳಲ್ಲಿ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿ ಕಸ ಸಂಗ್ರಹಣೆ ಮಾಡಲಾಗುತ್ತಿದೆ ಎಂದು ಶುಭಾ ಕಲ್ಯಾಣ್ ಸಭೆಗೆ ಮಾಹಿತಿ ನೀಡಿದರು.

      ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಹಾಸನ ಸೇರಿದಂತೆ 10 ಜಿಲ್ಲೆಗಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವಿವಿಧ ಗ್ರಾಮ ಪಂಚಾಯತಿಗಳ ಪಿಡಿಓಗಳು, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 8 times, 1 visits today)

Related posts