ರೈತರಿಂದ ಹಣ್ಣು, ತರಕಾರಿ ಖರೀದಿಸಲು ಕ್ರಮ – ಸಚಿವ

ತುಮಕೂರು :

       ರೈತರು ತಮ್ಮ ತೋಟದಲ್ಲಿ ಬೆಳೆದಿರುವ ಟಮೋಟೋ, ಸೋರೆಕಾಯಿ, ಕುಂಬಳಕಾಯಿ, ನುಗ್ಗೆಕಾಯಿ, ಇತರೆ ಎಲ್ಲಾ ತರಕಾರಿಗಳನ್ನು ಜಿಲ್ಲಾ ತೋಟಗಾರಿಕೆ, ಹಾಪ್‍ಕಾಮ್ಸ್ ಹಾಗೂ ಹನಿಮಿತ್ರ ಸಂಸ್ಥೆಯಿಂದ ನೇರವಾಗಿ ಖರೀದಿಸಿ ಗ್ರಾಹಕರ ಮನೆ-ಮನೆಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

      ಅವರು ಇಂದು ತುಮಕೂರಿನ ಪ್ರವಾಸಿ ಮಂದಿರದಲ್ಲಿ ಹಣ್ಣು, ತರಕಾರಿಗಳ ಮಾರಾಟದ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು.

      ತುಮಕೂರು ಫುಡ್‍ಪಾರ್ಕ್ ವತಿಯಿಂದ ದಿನಬಿಟ್ಟು ದಿನ 100-150 ಟನ್‍ಗಳಷ್ಟು ಟಮೋಟೋಗಳನ್ನು ಖರೀದಿಸಿ ಸಂಸ್ಕರಣೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

       ರೈತರು ಬೆಳೆದಿರುವ ಎಲ್ಲಾ ಹಣ್ಣು, ತರಕಾರಿಗಳನ್ನು ರೈತರ ತೋಟಗಳಿಂದಲೇ ನೇರವಾಗಿ ಖರೀದಿ ಮಾಡಿ ತಾಜಾ ಹಣ್ಣು ಮತ್ತು ತರಕಾರಿಗಳನ್ನು ನಗರ ಮತ್ತು ಗ್ರಾಮೀಣ ಭಾಗದ ಗ್ರಾಹಕರ ಮನೆ ಬಾಗಿಲಿಗೆ ರಿಯಾಯತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಹಣ್ಣು, ತರಕಾರಿ ಬೆಳೆದಿರುವ ಜಿಲ್ಲೆಯ ರೈತರು ಹಾಗೂ ಗ್ರಾಹಕರು ಈ ಟೋಲ್‍ಫ್ರೀ ದೂ.ವಾ.ಸಂ.0816-2275189 ಹಾಗೂ 2970310ಗೆ ಸಂಪರ್ಕಿಸಿ ಮಾರಾಟ ಹಾಗೂ ಖರೀದಿಯನ್ನು ಮಾಡಬಹುದಾಗಿದೆ ಎಂದು ಸಚಿವರು ತಿಳಿಸಿದರು.

       ಜಿಲ್ಲಾ ಮಟ್ಟದಲ್ಲಿ ರೈತರು ಮತ್ತು ಗ್ರಾಹಕರು ತೋಟಗಾರಿಕೆ ಉಪನಿರ್ದೇಶಕರು ಹಾಗೂ ಎಲ್ಲಾ ತಾಲ್ಲೂಕುಗಳ ತೋಟಗಾರಿಕೆ ಇಲಾಖೆಗಳ ಹಿರಿಯ ಸಹಾಯಕ ನಿರ್ದೇಶಕರುಗಳು ನೋಡೆಲ್ ಅಧಿಕಾರಿಗಳಾಗಿದ್ದು, ಇವರನ್ನು ಸಂಪರ್ಕಿಸಿ ಪ್ರಯೋಜನ ಪಡೆದುಕೊಳ್ಳುವಂತೆ ಸಚಿವರು ಮನವಿ ಮಾಡಿದರು.

      ಈ ಸಂದರ್ಭದಲ್ಲಿ ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾಕಲ್ಯಾಣ್, ಉಪವಿಭಾಗಾಧಿಕಾರಿ ಅಜಯ್, ತೋಟಗಾರಿಕೆ ಇಲಾಖೆ ಜಂಟಿನಿರ್ದೇಶಕರಾದ ರಘು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಚಂದ್ರಿಕಾ ಹಾಗೂ ಹನಿಮಿತ್ರ ಸಂಸ್ಥೆಯ ಮುಖ್ಯಸ್ಥರಾಗಿರುವ ನೀಲೇಶ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

(Visited 3 times, 1 visits today)

Related posts