ಪಡಿತರ ವಿತರಣೆ: ತೂಕದಲ್ಲಿ ವ್ಯತ್ಯಾಸವಾದಲ್ಲಿ ನಿರ್ದಾಕ್ಷಿಣ್ಯ ಕ್ರಮ!

ತುಮಕೂರು :

      ರಾಜ್ಯದಲ್ಲಿ 19ಸಾವಿರ ನ್ಯಾಯಬೆಲೆ ಅಂಗಡಿಗಳಿದ್ದು, ಪಡಿತರ ವಿತರಣೆ ಮಾಡುವಾಗ ತೂಕದಲ್ಲಿ ವ್ಯತ್ಯಾಸ ಹಾಗೂ ಪಡಿತರದಾರರಿಂದ ಹಣ ಪಡೆಯುವುದು ಕಂಡು ಬಂದರೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಜರುಗಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಗೋಪಾಲಯ್ಯ ಅವರು ಎಚ್ಚರಿಕೆ ನೀಡಿದರು.

      ನಗರದ ಪ್ರವಾಸಿ ಮಂದಿರದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿದಿನ ರಾಜ್ಯದ 2 ಜಿಲ್ಲೆಗೆ ಭೇಟಿ ನೀಡಿ ಪಡಿತರ ವಿತರಣೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುತ್ತಿದ್ದೇನೆ ಎಂದ ಅವರು, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ರಾಜ್ಯ ಸಂಕಷ್ಟಕ್ಕೆ ಸಿಲುಕಿದ್ದು, ಜನರಿಗೆ ಪಡಿತರ ಆಹಾರ ಧಾನ್ಯ ವಿತರಣೆ ಮಾಡುವುದು ನನ್ನ ಇಲಾಖೆಯ ಆದ್ಯ ಕರ್ತವ್ಯವಾಗಿದೆ. ಕಡು ಬಡವರಿಗೆ ತೊಂದರೆಯಾಗದಂತೆ ಪಡಿತರ ಆಹಾರ ಧಾನ್ಯವನ್ನು ವಿತರಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಡಿತರ ವಿತರಣೆಯಲ್ಲಿ ನ್ಯಾಯಬಲೆ ಅಂಗಡಿಗಳ ವಿರುದ್ಧ ಪ್ರತೀ ದಿನ ದೂರವಾಣಿ ಕರೆ ಮೂಲಕ ದೂರುಗಳು ಬರುತ್ತಿವೆ. ಬಡವರ ಅನ್ನ ಕಸಿಯುವವರ ವಿರುದ್ಧ ದೂರು ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವರದಿ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುತ್ತಿದೆ. ಕೂಲಿಗಾಗಿ ಬೇರೆ ಜಿಲ್ಲೆ/ಹೊರ ರಾಜ್ಯದಿಂದ ಬಂದಿರುವ ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತದ ವತಿಯಿಂದ ಆಹಾರವನ್ನು ಒದಗಿಸಲಾಗುತ್ತಿದೆ ಎಂದರು.

      ಲಾಕ್ ಡೌನ್ ಅವಧಿಯಲ್ಲಿ ವಿತರಿಸಲು ಕೇಂದ್ರ ಸರ್ಕಾರದಿಂದ ಪ್ರತಿ ಕುಟುಂಬಕ್ಕೆ 3 ತಿಂಗಳಿಗೆ ಆಗುವಷ್ಟು ಪಡಿತರ ಒದಗಿಸಲಾಗುತ್ತಿದ್ದು, ದಾಸ್ತಾನು ಮಾಡಲಾಗುತ್ತಿದೆ. ಅಲ್ಲದೇ ಉಜ್ವಲ ಯೋಜನೆ ಸೌಲಭ್ಯ ಪಡೆದುಕೊಂಡಿರುವ ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲವನ್ನು ಒದಗಿಸಲಾಗುವುದು. ರಾಜ್ಯ ಸರ್ಕಾರದಿಂದ ನೀಡಲಾಗುತ್ತಿರುವ ಪಡಿತರವನ್ನು ಏಪ್ರಿಲ್ 25ರೊಳಗೆ ವಿತರಣೆ ಮಾಡಲು ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ಸೂಚಿಸಲಾಗಿದೆ ಎಂದರು.

      ಪಡಿತರ ವಿತರಿಸಲು ಹಣ ಪಡೆಯುತ್ತಿದ್ದಾರೆ ಎಂದು ಪತ್ರಕರ್ತರು ಸಚಿವರ ಗಮನಕ್ಕೆ ತಂದಾಗ ಸರ್ಕಾರದಿಂದ ವಿತರಿಸಲಾಗುವ ಪಡಿತರ ಧಾನ್ಯಗಳಿಗೆ ಹಣ ಪಾವತಿಸುವಂತಿಲ್ಲ. ಯಾರಿಂದಲೂ ಹಣ ಪಡೆಯಬಾರದೆಂದು ಈಗಾಗಲೇ ಅಂಗಡಿ ಮಾಲೀಕರಿಗೆ ಸೂಚನೆ ನೀಡಲಾಗಿದೆ. ತಪ್ಪಿದಲ್ಲಿ ಅಂಥವರ ಲೈಸೆನ್ಸ್ ಅನ್ನು ಶಾಶ್ವತವಾಗಿ ರದ್ದು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

      ಬಿಪಿಎಲ್ ಕಾರ್ಡ್‍ಗೆ ಅರ್ಜಿ ಸಲ್ಲಿಸಿ ಇದುವರೆಗೂ ಪಡಿತರ ಚೀಟಿ ಹೊಂದದೆ ಇರುವವರಿಗೂ ಸಹ 2 ತಿಂಗಳ ಪಡಿತರ ನೀಡಬೇಕೆಂದು ಕ್ಯಾಬಿನೆಟ್ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಂಡಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನ್ಯಾಯಬೆಲೆ ಅಂಗಡಿ ತೆರೆದು ಪಡಿತರ ವಿತರಣೆಯನ್ನು ಮಾಡಬೇಕು. ಅಲ್ಲದೇ ನ್ಯಾಯಬೆಲೆ ಅಂಗಡಿಗಳಿಂದ 3 ಕಿ.ಮೀ. ಗಿಂತ ದೂರದ ಅಂತರವಿರುವ ಹಳ್ಳಿಗಳಿಗೆ ಅಂಗಡಿ ಮಾಲೀಕರೇ ಗಾಡಿಗಳ ಮೂಲಕ ತೆಗೆದುಕೊಂಡು ಹೋಗಿ ಸ್ಥಳದಲ್ಲಿಯೇ ತೂಕ ಮಾಡಿ ಪಡಿತರವನ್ನು ವಿತರಣೆ ಮಾಡಬೇಕು. ಸಮರ್ಪಕವಾಗಿ ಪಡಿತರ ವಿತರಣೆಯಾಗುತ್ತಿರುವ ಬಗ್ಗೆ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಪ್ರತಿದಿನ ಒಂದೊಂದು ತಾಲೂಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಸೂಚಿಸಿದರು.

      ಜಿಲ್ಲೆಯಲ್ಲಿ ಬರಪೀಡಿತ ಪ್ರದೇಶವೆಂದು ಗುರುತಿಸಿರುವ ತಾಲೂಕುಗಳಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆ ಆಯಾ ತಾಲೂಕುಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ರೈತರಿಗೆ ತೊಂದರೆಯಾಗದಂತೆ ಈಗಾಗಲೇ ಜಿಲ್ಲೆಯ 300 ರಸಗೊಬ್ಬರದ ಅಂಗಡಿ, ಕೃಷಿ ಪರಿಕರದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಅವರು ಸಚಿವರ ಗಮನಕ್ಕೆ ತಂದರು.

      ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸಯ್ಯ ಮಾತನಾಡಿ, ಜಿಲ್ಲೆಯಲ್ಲಿ ಶೇ.53 ರಷ್ಟು ಪಡಿತರ ವಿತರಣೆ ಮಾಡಲಾಗಿದ್ದು, ನಿಗಧಿತ ವೇಳೆಯೊಳಗೆ ಪಡಿತರ ಧಾನ್ಯ ವಿತರಣೆ ಮಾಡದ ಚಿಕ್ಕಪೇಟೆ ನ್ಯಾಯಬೆಲೆ ಅಂಗಡಿಯನ್ನು ಅಮಾನತ್ತು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

      ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು. ನಂತರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಿರ್ಗತಿಕರಿಗೆ ತಯಾರಿಸಿದ ಆಹಾರವನ್ನು ಪರಿಶೀಲಿಸಿದರು. ಆರ್.ವಿ ಕಾಲೋನಿಯಲ್ಲಿರುವ ಸರ್ಕಾರಿ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪಡಿತರ ಧಾನ್ಯವನ್ನು ಸರಿಯಾಗಿ ತೂಕ ಮತ್ತು ಅಳತೆ ಮಾಡಿ ವಿತರಿಸಲಾಗುತ್ತಿರುವ ಬಗ್ಗೆ ಪಡಿತರ ಚೀಟಿದಾರರಿಂದ ಮಾಹಿತಿ ಪಡೆದರು. ಬಳಿಕ ಸಚಿವರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದರು.

(Visited 12 times, 1 visits today)

Related posts