202 ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಶೀಘ್ರದಲ್ಲಿ ಹಣ ಬಿಡುಗಡೆಗೆ ಕ್ರಮ-ಸಚಿವ ಕೆ.ಎಸ್.ಈಶ್ವರಪ್ಪ

ತುಮಕೂರು:

     ಜಿಲ್ಲೆಯಲ್ಲಿ ಕೋವಿಡ್-19ರ ಸೋಂಕಿತ ಶಿರಾ ತಾಲೂಕಿನ ಪಿ-84 ಸಂಪೂರ್ಣ ಗುಣಮುಖರಾಗಿದ್ದಾರೆಂದು ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ಅವರು ತಿಳಿಸಿದ್ದಾರೆ.

       ಜಿಲ್ಲೆಯ 202 ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಶೀಘ್ರದಲ್ಲಿ ಹಣ ಬಿಡುಗಡೆಗೆ ಕ್ರಮ: ಸಚಿವ ಕೆ.ಎಸ್.ಈಶ್ವರಪ್ಪ
ತುಮಕೂರು(ಕ.ವಾ) ಏ.16: ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ 2017-18ನೇ ಸಾಲಿನಲ್ಲಿ ಮಾಡಿರುವ 202 ಚೆಕ್ ಡ್ಯಾಂಗಳ ನಿರ್ಮಾಣ ಕಾಮಗಾರಿಗಳ ಬಗ್ಗೆ ಚರ್ಚಿಸಿ ಶೀಘ್ರದಲ್ಲಿ ಹಣ ಬಿಡುಗಡೆಗೆ ಕ್ರಮವಹಿಸಲಾಗುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದರು.

      ಕುಣಿಗಲ್ ತಾಲೂಕಿನ ಯಡಿಯೂರು ಸಮೀಪದ ಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಕೋವಿಡ್-19 ಸಂಬಂಧಪಟ್ಟಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚಿಸಲಾಗಿರುವ ಟಾಸ್ಕ್‍ಪೋರ್ಸ್ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

      ಚೆಕ್ ಡ್ಯಾಂಗಳ ಪೈಕಿ 13 ಚೆಕ್ ಡ್ಯಾಂಗಳ ಯೋಜನೆಯನ್ನು ವೈಜ್ಞಾನಿಕವಾಗಿ ಮಾಡದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈಗಾಗಲೇ ಚೆಕ್ ಡ್ಯಾಂಗಳ ಸಂಪೂರ್ಣ ಮಾಹಿತಿಯನ್ನು ಪಡೆದಿದ್ದೇನೆ. ಅದನ್ನು ಪರಿಶೀಲಿಸಿ ಈ ತಾಲೂಕಿನಲ್ಲಿ ಚೆಕ್ ಡ್ಯಾಂನ ನಿರ್ಮಿಸಿರುವ ಗುತ್ತಿಗೆದಾರರಿಗೆ ಹಣವನ್ನು ಪಾವತಿಸಲಾಗುವುದು ಎಂದು ಅವರು ಭರವಸೆ ನೀಡಿದರು.

      ಕೊರೊನಾ ವೈರಸ್ ವ್ಯಕ್ತಿ, ಜಾತಿ ನೋಡಿ ಬರುವುದಿಲ್ಲ. ನಾವೆಲ್ಲರೂ ಜಾಗೃತರಾಗಬೇಕು. ಸಹೋದರಿಯರಂತೆ ಮನೆ-ಮನೆಗೆ ಭೇಟಿ ನೀಡಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಅಭಿನಂದನೆ ಸಲ್ಲಿಸಿದರು ಮತ್ತು ಅವರ ಆರೋಗ್ಯ ಕಾಪಾಡುವುದು ನಮ್ಮ ಜವಬ್ದಾರಿಯಾಗಿದೆ ಆದ್ದರಿಂದ ಅವರಿಗೆ ಸಹಕಾರ ನೀಡುವುದು ಮುಖ್ಯವಾಗಿದೆ ಎಂದರು.

ಕೋವಿಡ್-19ರ ಹಿನ್ನಲೆಯಲ್ಲಿ ಕೂಲಿ ಕಾರ್ಮಿಕರಿಗೆ ಅನುಕೂಲವಾಗುವಂತೆ ನರೇಗಾ ಯೋಜನೆಯಡಿ ಕಾಮಗಾರಿಗಳು ಆರಂಭ ಮಾಡಲು ಸೂಚಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸಲು ಸೂಚಿಸಿಲಾಗಿದೆ. ಕೇಂದ್ರ ಸರ್ಕಾರ ಕೂಲಿ ಕಾರ್ಮಿಕರಿಗೆ ಕೂಲಿ ಮೊತ್ತ ಹೆಚ್ಚಳ ಮಾಡಿದೆ ಎಂದರಲ್ಲದೇ ಕಾನೂನು ಬದ್ಧವಾಗಿ ಅನುಕೂಲವಾಗುವುದನ್ನು ನಾವು ಮಾಡುತ್ತೇವೆ. ಇದರ ಬಗ್ಗೆ ಇರುವ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.

      ಶಾಸಕ ಡಾ|| ರಂಗನಾಥ್ ಮಾತನಾಡಿ, ಮಾನ್ಯ ಪ್ರಧಾನ ಮಂತ್ರಿಗಳು ಕೂಲಿಕಾರ್ಮಿಕರ ವೇತನವನ್ನು 265 ರಿಂದ 285 ರೂ.ಗಳಿಗೆ ಹೆಚ್ಚಳ ಮಾಡಿದ್ದಾರೆ. ಜನರಿಗೆ ನಾವು ತರಕಾರಿಗಳನ್ನು ಹಂಚಲು ಹೋದರೆ ನಮಗೆ ತರಕಾರಿ ಬೇಡ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ. ತಾಲೂಕಿನ ಚೆಕ್ ಡ್ಯಾಂ ನಿರ್ಮಾಣ, ರಸ್ತೆ ದುರಸ್ತಿಯ ಕಾಮಗಾರಿಗೆ ಬಾಕಿ ಉಳಿದಿರುವ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.

      ಪ್ರತಿ ಹಳ್ಳಿಗಳಲ್ಲಿ ಬಡವರಿಗೆ ಮಾಸ್ಕ್ ಕೊರತೆಯಿದ್ದು, ನಮ್ಮ ರಾಜ್ಯದಲ್ಲಿ 6 ಕೋಟಿ ಜನರಿದ್ದು, ಮಾಸ್ಕ್ ಹಾಗೂ ಸ್ಯಾನಿಟೈಸರ್ ಅನ್ನು ಉಚಿತವಾಗಿ ನೀಡುವಂತಹ ವ್ಯವಸ್ಥೆ ಮಾಡಬೇಕು. ಇದರಿಂದ ಎಲ್ಲ ವರ್ಗದ ಜನರಿಗೂ ಅನುಕೂಲವಾಗುತ್ತದೆ. ಕೊರೊನಾ ವೈರಸ್ ಬಗ್ಗೆ ಜನರು ಹೆಚ್ಚು ಭಯಬೀತರಾಗಿದ್ದಾರೆ. ಉತ್ತಮ ಗುಣಮಟ್ಟದ ಮಾಸ್ಕ್ ಹಾಗೂ ಹೈಡ್ರಾಕ್ಸಿಕ್ಲೋರೋಕ್ಲಿನ್ ಮಾತ್ರೆಗಳು ಎಲ್ಲಾ ಮೆಡಿಕಲ್‍ಗಳಲ್ಲಿ ಸಿಗುವಂತಾಗಬೇಕೆಂದರು.

     ರೈತರನ್ನು ಪ್ರೋತ್ಸಾಹಿಸುವಂತಹ ಕೆಲಸವನ್ನು ನಾವು ಮಾಡಬೇಕಾಗಿದೆ ಇಂದು ಹಂಚುತ್ತಿರುವ ಅಗತ್ಯವಸ್ತುಗಳನ್ನು ಕೇವಲ ಬಡವರು ಮಾತ್ರ ಪಡೆಯುತ್ತಿಲ್ಲ ಎಲ್ಲಾ ವರ್ಗದ ಜನರು ತೆಗೆದುಕೊಳ್ಳುತ್ತಿದ್ದಾರೆ ಆಸೆಯಿಂದಲ್ಲ ಕಾರಣ ನಾಳೆ ಏನಾಗುತ್ತದೆ ಎಂಬ ಭಯದಿಂದ ಅಷ್ಟೇ ಎಂದು ಅವರು ತಿಳಿಸಿದರು.

     ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಮಾತನಾಡಿ, ಕೊರೊನಾ ಟಾಸ್ಕ್ ಪೋರ್ಸ್ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಂದ ಅಪೌಷ್ಟಿಕತೆ ತಡೆಗಟ್ಟುವ ಸಲುವಾಗಿ ಬಡ ಮಕ್ಕಳಿಗೆ ರೇಷನ್ ವಿತರಣೆ ಮಾಡಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಪ್ರತಿ ತಾಲೂಕಿನಲ್ಲಿ ಸಾಂತ್ವನ ಕೇಂದ್ರದಲ್ಲಿರುವ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಲಾಗುತ್ತಿದೆ. ಅವರ ದೂರವಾಣಿ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಕೊರೊನಾ ವೈರಸ್ ಬಗ್ಗೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದರು.

      ಸಾರ್ವಜನಿಕರಿಗೆ ಹಣ್ಣು-ತರಕಾರಿ ವಿತರಣೆಯಲ್ಲಿ ತೊಂದರೆಯಾಗದಂತೆ ರೈತರು ಬೆಳೆದಿರುವ ಬೆಳೆಯನ್ನು ಖರೀದಿಸುವವರ ಸಂಪರ್ಕ ಹೊಂದಲು ತೋಟಗಾರಿಕಾ ಇಲಾಖೆ ವತಿಯಿಂದ ಸಹಾಯವಾಣಿ ಸಂಖ್ಯೆಯನ್ನು ನೀಡಲಾಗಿದೆ. ಅಲ್ಲದೇ ಘನ ತ್ಯಾಜ್ಯ ವಿಲೇವಾರಿ ಘಟಕದ ಗಾಡಿಗಳ ಮೂಲಕ ನಗರ ಪ್ರದೇಶಗಳಲ್ಲಿ ತರಕಾರಿಗಳನ್ನು ಮನೆ-ಮನೆಗೆ ವಿತರಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಕಲ್ಲಂಗಡಿ, ಬಾಳೆಹಣ್ಣುಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಆಯಾ ತಾಲೂಕು ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಲು ಸೂಚಿಸಲಾಗಿದೆ ನೀಡಲಾಗಿದೆ.

       ಜಿಲ್ಲೆಯ 125 ಕಡೆ ಮಹಿಳೆಯರಿಗೆ ಟೈಲರಿಂಗ್ ತರಬೇತಿ ನೀಡಿ, ಅವರಿಂದ 3 ಪದರದ ಸುಮಾರು 13 ಸಾವಿರ ಮಾಸ್ಕ್ ತಯಾರಿಸಿ, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸಲಾಗಿದೆ. ಅಲ್ಲದೇ 300 ಹಾಸಿಗೆಗಳುಳ್ಳ ಜಿಲ್ಲಾಸ್ಪತ್ರೆಯನ್ನೇ ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. 15 ಫೀವರ್ ಕ್ಲಿನಿಕ್‍ಗಳನ್ನು ಸಹ ತೆರೆಯಲಾಗಿದೆ ಎಂದರು.

       ಜಿಲ್ಲೆಯಲ್ಲಿ 61 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 71 ಖಾಸಗಿ ಬೋರ್‍ವೆಲ್‍ಗಳಿಂದಲೂ ನೀರು ಪೂರೈಕೆ ಮಾಡುತ್ತಿದ್ದೇವೆ. ಗ್ರಾಮೀಣ ಭಾಗದ 6 ಲಕ್ಷ ಕುಟುಂಬಗಳಿಗೆ 3 ಲಕ್ಷ ಉದ್ಯೋಗ ಚೀಟಿಗಳನ್ನು ವಿತರಿಸಲಾಗಿದೆ. ಅಲ್ಲದೇ ಜೂನ್ 5ರಂದು 10 ಲಕ್ಷ ಗಿಡಗಳನ್ನು ನೆಡುವ ಕಾರ್ಯ ಹಾಕಿ ಕೊಳ್ಳಲು ಉದ್ದೇಶಿಸಲಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.

       ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರು ಒಂದು ಕುಟುಂಬಕ್ಕೆ 2 ಸೋಪು, 2 ಕರಪತ್ರಗಳನ್ನು ಹಂಚಿ ಕೊರೊನಾ ವೈರಾಣು ಹರಡದಂತೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಕುಟುಂಬ ಸದಸ್ಯರ ಸಹಿ ಮಾಡಿಸಿಕೊಂಡು ವರದಿ ಸಲ್ಲಿಸುವಂತೆ ಆಶಾ ಕಾರ್ಯಕರ್ತೆಯರಿಗೆ ತಿಳಿಸಲಾಗಿದೆ ಎಂದು ಸಚಿವರಿಗೆ ತಿಳಿಸಿದರು.

     ಸಭೆಯಲ್ಲಿ ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಶೀದಾ, ತಾಲೂಕು ಪಂಚಾಯಿತಿ ಅಧ್ಯಕ್ಷ ಹರೀಶ್‍ನಾಯ್ಕ್, ತಹಶೀಲ್ದಾರ್ ವಿಶ್ವನಾಥ್ ಸೇರಿದಂತೆ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.

(Visited 11 times, 1 visits today)

Related posts

Leave a Comment