ಜಿಲ್ಲಾಡಳಿತಕ್ಕೆ ಮಾಸ್ಕ್, ಸ್ಯಾನಿಟೈಜರ್ ಗಳ ಹಸ್ತಾಂತರ!!

ತುಮಕೂರು:

      ಶಿರಾದ ರಾಮ್ ಮನೋಹರ್ ಲೋಹಿಯಾ ಸಮತಾ ವಿದ್ಯಾಲಯ ಟ್ರಸ್ಟ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಮಾಸ್ಕ್, ಸ್ಯಾನಿಟೈಸರ್ ಮತ್ತು ಹ್ಯಾಂಡ್ ಗ್ಲೌಸ್‍ಗಳನ್ನು ನರ್ಸ್, ವೈದ್ಯರು, ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರುಗಳಿಗೆ ವಿತರಿಸಲು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.

      ಮಾಸ್ಕ್ ಸ್ಯಾನಿಟೈಜರ್‍ಗಳನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್ಸ್‍ಗಳಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಜಿಲ್ಲಾಡಳಿತದ ಪರವಾಗಿ ಅಭಿನಂದನೆ ಸಲ್ಲಿಸುತ್ತಾ, ನಿಮ್ಮ ಕಾರ್ಯವೈಖರಿಯನ್ನು ಇಡೀ ದೇಶವೇ ನೋಡುತ್ತಿದೆ ಎಂದರು. 

       ಡಿಹೆಚ್‍ಓ ಕಚೇರಿ ಆವರಣದಲ್ಲಿ ಸ್ಯಾನಿಟೈಜರ್‍ಗಳನ್ನು ಹಸ್ತಾಂತರಿಸಿ ಮಾತನಾಡಿದ ಹೈಕೋರ್ಟಿನ ಹಿರಿಯ ವಕೀಲರಾದ ಪ್ರೊ|| ರವಿವರ್ಮ ಕುಮಾರ್ ಅವರು, ಲಾಕ್‍ಡೌನ್ ಆಗಿರುವುದರಿಂದ ಕೊರೊನಾ ವಾರಿಯರ್ಸ್‍ಗಳಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್‍ಗಳ ಸಮಸ್ಯೆಯಾಗುತ್ತಿದೆ. ಮನೆ-ಮನೆಗೆ ಭೇಟಿ ನೀಡಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿ, ಕುಟುಂಬ ಸದಸ್ಯರಿಗೆ ತಪಾಸಣೆ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಅವರಿಗೆ ಅನುಕೂಲವಾಗುವಂತೆ ಹೆಡ್ ಶೀಲ್ಡ್ ಮಾಸ್ಕ್‍ಗಳನ್ನು ಸಹ ನೀಡಲಾಗಿದೆ. ಶಿರಾ ತಾಲೂಕಿನರುವ ನಮ್ಮ ಶಾಲೆಯಲ್ಲಿ 20 ಟೈಲರ್‍ಗಳಿಂದ ಸುಮಾರು 1 ಲಕ್ಷ ಮಾಸ್ಕ್‍ಗಳನ್ನು ತಯಾರಿಸಿ, ಕಳೆದ 3 ವಾರಗಳಿಂದ ಹಂಚುತ್ತಿದ್ದೇವೆ ಎಂದರು.

      ಒಟ್ಟಾರೆಯಾಗಿ ಆಶಾ ಕಾರ್ಯಕರ್ತೆಯರಿಗೆ 75 ಲೀಟರ್ ಸ್ಯಾನಿಟೈಜರ್, 800 ಹ್ಯಾಂಡ್ ಗ್ಲೋಸ್, 2500 ಮಾಸ್ಕ್, 200 ಹೆಡ್ ಶೀಲ್ಡ್ ಮಾಸ್ಕ್ ಅಂಗನವಾಡಿ ಕಾರ್ಯಕರ್ತೆಯರಿಗೆ 25 ಲೀಟರ್ ಸ್ಯಾನಿಟೈಜರ್, 1500 ಹೋಂ ಗಾರ್ಡ್‍ಗಳಿಗೆ 20 ಲೀಟರ್ ಸ್ಯಾನಿಟೈಜರ್, 1500 ಮಾಸ್ಕ್, ಮಹಾನಗರ ಪಾಲಿಕೆಯ ಆವರಣದಲ್ಲಿ ಪೌರ ಕಾರ್ಮಿಕರಿಗೆ 25 ಲೀಟರ್ ಸ್ಯಾನಿಟೈಜರ್, 2000 ಮಾಸ್ಕ್, ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕಟ್ಟಡ ಕಾರ್ಮಿಕರಿಗೆ 5 ಲೀಟರ್ ಸ್ಯಾನಿಟೈಜರ್, 1500 ಮಾಸ್ಕ್‍ಗಳನ್ನು ವಿತರಿಸಿದರು.

      ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಡಿಹೆಚ್‍ಓ ಡಾ|| ಚಂದ್ರಿಕಾ, ಜಿಲ್ಲಾ ಸರ್ಜನ್ ಡಾ|| ವೀರಭದ್ರಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

(Visited 13 times, 1 visits today)

Related posts

Leave a Comment