ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಎನ್.ರಾಜಣ್ಣ ಸ್ಪರ್ಧೆ ಖಚಿತ

ಮಧುಗಿರಿ:

      ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಮಧುಗಿರಿ ವಿಧಾನಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಎನ್. ರಾಜಣ್ಣ ಸ್ಪರ್ಧಿಸುವುದು ಖಚಿತ. ಜನರ ಆಶೀರ್ವಾದದೊಂದಿಗೆ ಶಾಸಕರಾಗಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಿ ಸಚಿವರಾಗುವುದು ನಿಶ್ಚಿತ ಎಂದು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅರ್.ರಾಜೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

      ತಾಲ್ಲೂಕಿನ ಮರುವೇಕೆರೆ ಗ್ರಾಮದಲ್ಲಿರುವ ಶ್ರೀ ಮಲೆ ರಂಗನಾಥ ಸ್ವಾಮಿ ದೇಗುಲದ ಆವರಣದಲ್ಲಿ ತಾಲ್ಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಮರುವೇಕೆರೆ- ಗಂಜಲಗುಂಟೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಹಾಗೂ ಪ್ರತಿಜ್ಞಾವಿಧಿಯ ನೇರ ಪ್ರಸಾರ ಕಾರ್ಯಕ್ರಮ ಕುರಿತು ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

      ಮಧುಗಿರಿ ಕ್ಷೇತ್ರಕ್ಕೆ ಹೊರಗಿನವರು ಪಕ್ಷದ ಹೆಸರಿನಲ್ಲಿ ಯಾರೇ ಬಂದರೂ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ಅವರೇ ಆಗಿರುತ್ತಾರೆ. ಕಳೆದ ಚುನಾವಣೆಯಲ್ಲಿ ಸೋತರು ಕೂಡ ಸದಾ ಜನ ಸಂಪರ್ಕದಲ್ಲಿರುವ ಕೆ.ಎನ್. ರಾಜಣ್ಣನವರು ಡಿಸಿಸಿ ಬ್ಯಾಂಕ್ ವತಿಯಿಂದ ತುಮಕೂರು ಜಿಲ್ಲೆಯಲ್ಲಿ ಕೆಸಿಸಿ ಸಾಲ ಸುಮಾರು 300 ಕೋಟಿ ರೂಗಳು ನೀಡಿದ್ದು, ಮಧುಗಿರಿ ತಾಲ್ಲೂಕಿನಲ್ಲಿ ಪಕ್ಷಾತೀತವಾಗಿ ಜಾತ್ಯಾತೀತವಾಗಿ 100 ಕೋಟಿ ರೂ ವರೆವಿಗೂ ಸಾಲ ನೀಡಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ ಅವಶ್ಯಕತೆಗೆ ಅನುಗುಣವಾಗಿ ಇನ್ನೂ ಸಾಲ ಮಂಜೂರು ಮಾಡಲಾಗುವುದೆಂದು ತಿಳಿಸಿದರು.

      ನಮ್ಮ ತಪ್ಪನ್ನು ತಿದ್ದಿಕೊಳ್ಳುತ್ತೇವೆ: ಕ್ಷೇತ್ರದಲ್ಲಿ ಕೆ.ಎನ್ .ರಾಜಣ್ಣನವರು ಶಾಸಕರಾಗಿದ್ದಾಗ ಅಭಿವೃದ್ಧಿ ಪರ್ವದಲ್ಲಿ ಪಕ್ಷ ಸಂಘಟನೆ ಕಡೆ ಗಮನವನ್ನು ಕಡಿಮೆ ಮಾಡಿದ್ದು, ಜೊತೆಗೆ ಪಕ್ಷಕ್ಕೆ ಅನ್ಯ ಪಕ್ಷದವರನ್ನು ಸೇರಿಸಿಕೊಳ್ಳುತ್ತಾ ಹೋದ ಪರಿಣಾಮ ಮೂಲ ಕಾಂಗ್ರೆಸ್ಸಿಗರು ಪಕ್ಷದಲ್ಲಿದ್ದು ಪಕ್ಷ ನಿಷ್ಠೆ ತೊರಿಸಿದರು, ಆದರೆ ಅನ್ಯ ಪಕ್ಷದಿಂದ ಬಂದವರು ಜತೆಯಲ್ಲಿದ್ದು ಕೊಂಡೇ ನಮ್ಮ ಸೋಲಿಗೆ ಕಾರಣರಾದರು. ಹಾಗಾಗಿ ನಮ್ಮಿಂದ ಆಗಿರುವ ತಪ್ಪನ್ನು ತಿದ್ದಿಕೊಳ್ಳುತ್ತೇವೆ ಎಂದು ಹೇಳಿದರು.

       ಕಳೆದ ಒಂದುವರೆ ವರ್ಷದ ನಂತರ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಸಂಘಟನೆಗೆ ಮುಂದಾಗಿದ್ದು ಮುಂದಿನ ದಿನಗಳಲ್ಲಿ ಬೂತ್ ಮಟ್ಟದಿಂದ ಪಕ್ಷವನ್ನು ಕಟ್ಟಲಾಗುವುದು. ಈ ಪದ್ಧತಿ ರಾಜ್ಯದಾದ್ಯಂತ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪಕ್ಷವನ್ನು ಸದೃಢಗೊಳಿಸಿ ಅಧಿಕಾರಕ್ಕೆ ತರುವುದು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರ ಜವಾಬ್ದಾರಿಯಾಗಿದೆಂದರು.

       ಕೆಪಿಸಿಸಿ ವೀಕ್ಷಕ ಅಶೋಕ್ ಕುಮಾರ್ ಮಾತನಾಡಿ, “ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುವುದಿಲ್ಲ, ಬಿಜೆಪಿಯವರು ಅಭಿವೃದ್ಧಿ ಮಾಡದೇ ಪ್ರಚಾರ ಪಡೆಯುವಲ್ಲಿ ಮುಂದಿದ್ದಾರೆ’ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಕೈಗೊಂಡ ಜನಪರ ಕಾರ್ಯಕ್ರಮಗಳನ್ನು ಜನರ ಬಳಿ ಹೇಳಿಕೊಳ್ಳದ ಪರಿಣಾಮ ಅಧಿಕಾರದಿಂದ ವಂಚಿತರಾಗಬೇಕಾಯಿತು. ತುಮಕೂರು ಜಿಲ್ಲೆಯಲ್ಲಿ ಪಕ್ಷದ ಘಟಾನುಘಟಿ ನಾಯಕರುಗಳು ಇದ್ದು ಎಲ್ಲರೂ ಒಗ್ಗೂಡಿಕೊಂಡು ಮುಂದಿನ ಚುನಾವಣೆ ಎದುರಿಸಿದರೆ ಅತಿ ಹೆಚ್ಚು ಸ್ಥಾನಗಳನ್ನು ಗಳಿಸುವಲ್ಲಿ ಯಾವುದೇ ಸಂದೇಹವಿಲ್ಲವೆಂದರು ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷರು ಮತ್ತು ಮಾಜಿ ಮುಖ್ಯಮಂತ್ರಿಗಳು ತುಮಕೂರನ್ನು ವಿಶೇಷವಾಗಿ ಪರಿಗಣಿಸಿದ್ದಾರೆ ಎಂದು ಹೇಳಿದರು.

      ತುಮುಲ್ ಮಾಜಿ ಅಧ್ಯಕ್ಷ ಬಿ. ನಾಗೇಶ್ ಬಾಬು ಮಾತನಾಡಿ, ರಾಜ್ಯದಲ್ಲಿ ಡಿ.ಕೆ .ಶಿವಕುಮಾರ್ ಕ್ಷೇತ್ರದಲ್ಲಿ ಕೆ.ಎನ್ .ರಾಜಣ್ಣ ಇವರಿಬ್ಬರ ನಾಯಕರ ಮನಸ್ಥಿತಿ ಒಂದೇ ಆಗಿದ್ದು ,ಬಡವರ ಕಲ್ಯಾಣಕ್ಕಾಗಿ ಸದಾ ಚಿಂತನಾ ಶೀಲರಾಗಿರುತ್ತಾರೆ. ಪ್ರತಿಜ್ಞಾವಿಧಿ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ವಿಎಸ್‍ಎಸ್‍ಎನ್ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರುಗಳು ಹಾಗೂ ಪಕ್ಷದ ಕಾರ್ಯಕರ್ತರು ಬೆಳಿಗ್ಗೆ ಒಂಬತ್ತು ಗಂಟೆಗೆ ಸೂಚಿತ ಸ್ಥಳಕ್ಕೆ ಆಗಮಿಸಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಹಾಜರಾಗಿ ವೀಕ್ಷಿಸುವಂತೆ ಕರೆ ನೀಡಿದರು.

      ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ ದೇನಾನಾಯಕ್ ಮಾತನಾಡಿ, ಕೆಎನ್‍ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದರೂ ಸರಿಯೇ ಪಕ್ಷೇತರರಾಗಿ ಸ್ಪರ್ಧಿಸಿದರೂ ಸರಿಯೇ ಮುಂದಿನ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದ ಶಾಸಕರಾಗುವುದು ಖಚಿತ ಎಂದು ಭವಿಷ್ಯ ನುಡಿದರು.

      ಸಿದ್ದಾಪುರ ಕ್ಷೇತ್ರದ ಜಿ.ಪಂ. ಸದಸ್ಯ ಜಿ.ಜೆ. ರಾಜಣ್ಣ, ತುಮಕೂರು ಜಿಲ್ಲಾ ವೀಕ್ಷಕ ವಾಲೆಚಂದ್ರು ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ .ಎಸ್. ಮಲ್ಲಿಕಾರ್ಜುನಯ್ಯ, ವಿಎಸ್‍ಎಸ್‍ಎನ್ ಅಧ್ಯಕ್ಷ ಫಾಜೀಲ್ ,ಎಪಿಎಂಸಿ ಮಾಜಿ ಅಧ್ಯಕ್ಷ ಪಿ.ಸಿ .ಕೃಷ್ಣಾರೆಡ್ಡಿ,ಮುಖಂಡ ಡಿ.ಎಚ್ .ನಾಗರಾಜು, ಗಂಜಲಗುಂಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಧುಸೂದನ್, ಪಾವಗಡ ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಸೀತಾರಾಮ್, ಸೋಂಪುರದ ರಂಗಪ್ಪ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ರಾಮಕೃಷ್ಣ, ವಿಎಸ್ಸೆಸ್ಸೆನ್ ಕಾರ್ಯದರ್ಶಿ ಸುರೇಶ್ ಬಾಬು ಹಾಗೂ ಕಾರ್ಯಕರ್ತರು ಹಾಜರಿದ್ದರು.

(Visited 5 times, 1 visits today)

Related posts